Advertisement

ಕೊರೊನಾ ಅಬ್ಬರದ ಎದುರು ಮಂಕಾದ ಮಂಗನ ಕಾಯಿಲೆ

10:32 PM Jun 07, 2021 | Shreeraj Acharya |

„ಶರತ್‌ ಭದ್ರಾವತಿ

Advertisement

ಶಿವಮೊಗ್ಗ: ಕೊರೊನಾ ವೈರಸ್‌ ಅಬ್ಬರದ ನಡುವೆ ಮಲೆನಾಡಿನ ಹಾಗೂ ರಾಜ್ಯದ ಜನರ ಪಾಲಿಗೆ ಈ ಬಾರಿ ಕೆಎಫ್‌ಡಿ ಕಂಟಕ ಎದುರಾಗಿಲ್ಲ. ಪ್ರತಿ ವರ್ಷ ಡಿಸೆಂಬರ್‌ನಿಂದ ಮೇ ಕೊನೆವರೆಗೂ ಕಾಡುವ ಕೆಎಫ್‌ಡಿ (ಕ್ಯಾಸನೂರು ಫಾರೆಸ್ಟ್‌ ಡಿಸೀಸ್‌) ಈ ಬಾರಿ ಮಂಕಾಗಿದ್ದು “ಶೂನ್ಯ’ ಮರಣ ದಾಖಲಾಗಿದೆ. ಪಾಸಿಟಿವ್‌ ಪ್ರಕರಣ ಕೂಡ 25 ದಾಟದಿರುವುದು ಸಮಾಧಾನದ ಸಂಗತಿಯಾಗಿದೆ.

ಪಶ್ಚಿಮಘಟ್ಟ ಜಿಲ್ಲೆಗಳ ಜನರನ್ನು ಕಳೆದ 60 ವರ್ಷದಿಂದ ಕಾಡುತ್ತಿರುವ ಕೆಎಫ್‌ಡಿ ವೈರಸ್‌ ಈ ಬಾರಿ ತನ್ನ ಅಬ್ಬರ ತೋರಿಸಿಲ್ಲ. ಡಿಸೆಂಬರ್‌ನಿಂದ ಮೇ ಕೊನೆವರೆಗೆ ಚಿಕ್ಕಮಗಳೂರು 2, ಶಿವಮೊಗ್ಗ 11 ಉತ್ತರಕನ್ನಡ ಜಿಲ್ಲೆಯಲ್ಲಿ 11 ಪ್ರಕರಣ ಕಂಡುಬಂದಿವೆ. ಯಾವುದೆ ಮರಣ ದಾಖಲಾಗಿಲ್ಲ. 2019-20ರಲ್ಲಿ 280 ಪಾಸಿಟಿವ್‌ ಬಂದಿದ್ದು 5 ಮಂದಿ ಮೃತಪಟ್ಟಿದ್ದರು.

2018-19ರಲ್ಲಿ 445 ಪಾಸಿಟಿವ್‌ ಬಂದಿದ್ದು 15 ಮಂದಿ ಮೃತಪಟ್ಟಿದ್ದರು. 2018-19ರಲ್ಲಿ ಮರಣ ಪ್ರಮಾಣ ಹೆಚ್ಚಾದ ಕಾರಣ ಸರ್ಕಾರ ಗಂಭೀರವಾಗಿ ಪರಿಗಣಿಸಿ ಅನೇಕ ಕ್ರಮ ಕೈಗೊಂಡಿತ್ತು. ಇದರ ಫಲವಾಗಿ 2019-20ರಲ್ಲಿ ಕಡಿಮೆ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಈವರೆಗೆ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಹಾಸನ, ಚಾಮರಾಜನಗರ, ಮೈಸೂರಿನ ಎಚ್‌.ಡಿ.ಕೋಟೆ, ಹಾವೇರಿ, ಗದಗ, ಬೆಳಗಾವಿಯಲ್ಲಿ ಕಾಣಿಸಿಕೊಂಡಿದೆ. ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡದಲ್ಲಿ ಪ್ರತಿ ವರ್ಷ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಆದರೆ ಈ ಬಾರಿ ಕಾಯಿಲೆ ಅಷ್ಟಾಗಿ ಜನರನ್ನು ಕಾಡಿಲ್ಲ.

ಕೈಹಿಡಿದ ಪ್ರಕೃತಿ-ವ್ಯಾಕ್ಸಿನ್‌: ಎರಡು ವರ್ಷದಿಂದ ನಿರಂತರವಾಗಿ ವ್ಯಾಕ್ಸಿನ್‌ ಮಾಡುತ್ತಿರುವುದು, ಪರಿಸರದಲ್ಲಿನ ಬದಲಾವಣೆ ಕೆಎಫ್‌ಡಿ ನಿಯಂತ್ರಣಕ್ಕೆ ಕಾರಣವಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ರಾಜ್ಯದ 11 ಜಿಲ್ಲೆಗಳಲ್ಲಿ ಈ ವರ್ಷ 3 ಲಕ್ಷ ವ್ಯಾಕ್ಸಿನ್‌ ಮಾಡಲಾಗಿದೆ. ಕೆಎಫ್‌ಡಿ ಬಾಧಿತ ಗ್ರಾಮದಲ್ಲಿ ಜೂನ್‌ನಿಂದಲೇ ವ್ಯಾಕ್ಸಿನ್‌ ಮಾಡಲಾಗುತ್ತಿದೆ. ಎರಡು ವರ್ಷದ ಹಿಂದೆ ಕೆಎಫ್‌ಡಿ ತೀವ್ರ ಉಲಣಗೊಂಡ ನಂತರ ಜನರಲ್ಲಿ ವ್ಯಾಕ್ಸಿನ್‌ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ.

Advertisement

ಶೇ.50ರಷ್ಟಿದ್ದ ವ್ಯಾಕ್ಸಿನೇಷನ್‌ ಪ್ರಮಾಣ ಎರಡು ವರ್ಷದಿಂದ ಶೇ.70ಕ್ಕಿಂತ ಹೆಚ್ಚಿದೆ. ಕಳೆದ ವರ್ಷ ಕೆಎಫ್‌ಡಿ ಸೋಂಕಿತ ಉಣುಗುಗಳು ದನಕರುಗಳ ಮೂಲಕ ಮನೆಗಳಿಗೆ ತಲುಪುವುದನ್ನು ನಿಯಂತ್ರಿಸಲು ದನಕರುಗಳಿಗೆ ಡೋರಾಮೆಕ್ಷನ್‌ ಇಂಜೆಕ್ಷನ್‌ ನೀಡಲಾಗಿದೆ. 2020ರಲ್ಲಿ 8 ಸಾವಿರ ದನಕರುಗಳಿಗೆ ಈ ಇಂಜೆಕ್ಷನ್‌ ನೀಡಲಾಗಿದೆ. ಪ್ರಕೃತಿಯಲ್ಲಿ ಕೆಎಫ್‌ಡಿ ವೈರಸ್‌ಗಳು ಸಂಪೂರ್ಣ ನಾಶವಾಗುವುದಿಲ್ಲ.

ಅವು ಇಲಿ, ಹೆಗ್ಗಣ, ಉಣುಗು ಮುಂತಾದ ಜೀವಿಗಳಲ್ಲಿ ಇರುತ್ತವೆ. ಇವುಗಳ ಪ್ರಮಾಣ ಹೆಚ್ಚಾದ ಸ್ಥಳಗಳಲ್ಲಿ ವೈರಸ್‌ ಕಾಟ ಹೆಚ್ಚಾಗಿರುತ್ತಿದೆ. ಪ್ರಕೃತಿಯಲ್ಲಿ ಕೆಲವೊಂದು ಬದಲಾವಣೆಗಳು ನಡೆಯುತ್ತಿರುತ್ತವೆ. ವೈರಸ್‌ಗಳನ್ನು ಕೊಂಡೊಯ್ಯುವ ಜೀವಿಗಳು ಈ ಬಾರಿ ಕಡಿಮೆಯಾಗಿರಬಹುದು. ಇದಕ್ಕೆ ತಾಜಾ ಉದಾಹರಣೆ ಅರಳಗೋಡು ಪ್ರಕರಣ.

ಎರಡು ವರ್ಷದ ಹಿಂದೆ ಈ ಪ್ರದೇಶದಲ್ಲಿ ಸಾವು, ನೋವು ಹೆಚ್ಚಾಗಿತ್ತು. ಕೂಲಂಕಶ ಅಧ್ಯಯನದ ನಂತರ ಆ ಭಾಗದಲ್ಲಿ ಹೆಚ್ಚು ಬಿದಿರು ಅಕ್ಕಿ ಬಿಟ್ಟಿತ್ತು. ಅಲ್ಲಿ ಇಲಿ, ಹೆಗ್ಗಣಗಳ ಪ್ರಮಾಣ ಹೆಚ್ಚಾಗಿ ವೈರಸ್‌ ವೇಗವಾಗಿ ಹರಡಲು ಕಾರಣವಾಗಿತ್ತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next