Advertisement
ಹೊಸನಗರ: ಕೊರೊನಾ ಸೋಂಕು ತಡೆಗಟ್ಟುವ ಸಲುವಾಗಿ ಜಾರಿಯಾದ ಲಾಕ್‌ಡೌನ್ ರೈತ ಕುಟುಂಬಗಳ ಬದುಕಿನ ಮೇಲೆ ಭಾರೀ ಹೊಡೆತ ನೀಡಿದೆ. ಒಂದಡೆ ಫಸಲು ನಾಶ, ಇದೀಗ ಮುಂಗಾರು ಕೃಷಿಯ ಸಿದ್ಧತೆಗೂ ಹಿನ್ನಡೆ ಅನುಭವಿಸುವಂತಾಗಿದೆ. ಕೊರೊನಾ ಸೋಂಕು ಗ್ರಾಮೀಣ ಪ್ರದೇಶಗಳಿಗೂ ಹಬ್ಬುತ್ತಿರುವ ಕಾರಣ ರಾಜ್ಯ, ಜಿಲ್ಲೆ, ತಾಲೂಕು ಹೀಗೆ ಪ್ರತಿ ಗ್ರಾಪಂ ಮಟ್ಟದಲ್ಲಿ ಹಾಲು ಮತ್ತು ಔಷ ಧ ಪೂರೈಕೆ ಹೊರತು ಪಡಿಸಿ ಬೇರೆಲ್ಲಾ ವ್ಯವಹಾರಗಳನ್ನು ಬಹುತೇಕ ಬಂದ್ ಮಾಡಲಾಗಿದೆ.
Related Articles
Advertisement
ಯಾವ ಬೆಳೆ ಎಷ್ಟು?: ಭತ್ತ 8510, ಜೋಳ 600, ಕಬ್ಬು 200, ಅಡಕೆ 8742, ತೆಂಗು 471, ಬಾಳೆ 1533, ಕಾಳುಮೆಣಸು 1291, ತಾಳೆ 53 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಮುಂಗಾರು ಆಗಮಿಸುತ್ತಿದ್ದು ಕೃಷಿ ಪೂರಕ ಸಿದ್ಧತೆಯನ್ನು ರೈತರು ಸಮರೋಪಾದಿಯಲ್ಲಿ ಮಾಡುವ ಸಮಯ ಇದು. ಈ ಸಮಯ ರೈತರಿಗೆ ಅತ್ಯಂತ ಪ್ರಮುಖವಾಗಿದೆ. ಆದರೂ ಏನು ಮಾಡದ ಸ್ಥಿತಿಗೆ ತಲುಪಿದ್ದು ಮೂಕರೋಧನದಲ್ಲಿ ತೊಡಗಿದ್ದಾರೆ.
ಕೃಷಿ ಸಿದ್ಧತೆಗೆ ಹಿನ್ನಡೆ: ಪ್ರಸ್ತುತ ಅಡಕೆ ಗಿಡಕ್ಕೆ ಬುಡ ಮಾಡುವುದು, ಮಳೆ ಬರುತ್ತಿರುವ ಹಿನ್ನೆಲೆಯಲ್ಲಿ ಔಷ ಧ ಸಿಂಪಡನೆ, ಜೋಳ ಭಿತ್ತನೆಗೆ ಹೊಲವನ್ನು ಹದಗೊಳಿಸುವುದು. ಮಾಗಿ ಉಳುಮೆ, ಹಾಳಿ ಕಡೆಯುವುದು, ಭತ್ತದ ಭಿತ್ತನೆಗಾಗಿ ಗದ್ದೆ ಉಳುವುದು ಸೇರಿದಂತೆ ವಿವಿಧ ಕೆಲಸಗಳು ನಡೆಯಬೇಕಿತ್ತು. ಇನ್ನು ಕೃಷಿಗೆ ಬೇಕಾದ ಸಲಕರಣೆಯನ್ನು ಹದಗೊಳಿಸುವುದು, ರಾಸಾಯನಿಕ ಗೊಬ್ಬರ, ಔಷಧ, ಬಿತ್ತನೆ ಬೀಜದ ಸಂಗ್ರಹ ಈಗಾಗಲೇ ಆಗಬೇಕಿತ್ತು. ರೈತರು ಕೃಷಿ ಮತ್ತು ಬದುಕಿಗೆ ಬೇಕಾದ ಎಲ್ಲಾ ಸರಕು ಸರಂಜಾಮುಗಳನ್ನು ಶೇಖರಿಸಿಡುವ ಸಮಯ. ಆದರೆ ಲಾಕ್‌ಡೌನ್ ಇದೆಲ್ಲದಕ್ಕೂ ತಣ್ಣೀರೆರಚಿದೆ.
ಬಿತ್ತನೆ ಬೀಜ ರೆಡಿ.. ಆದರೆ ರೈತರು ಬರುತ್ತಿಲ್ಲ: ಈಗಾಗಲೇ ಕೃಷಿ ಇಲಾಖೆಯಲ್ಲಿ ಈ ಬಾರಿ ರೈತರಿಗೆ ಕೊರತೆಯಾಗದಂತೆ ಭತ್ತ ಹಾಗೂ ಜೋಳದ ಬಿತ್ತನೆ ಬೀಜವನ್ನು ಸಂಗ್ರಹ ಮಾಡಿಟ್ಟುಕೊಂಡಿದೆ. ಭತ್ತದ ಬೀಜ 150 ಕ್ವಿಂಟಾಲ್, ಜೋಳ 40 ಕ್ವಿಂಟಾಲ್‌ನ್ನು ದಾಸ್ತಾನಿಟ್ಟುಕೊಂಡಿದೆ. ಅದರ ವಿಲೇವಾರಿಗೂ ಕೂಡ ಸಿದ್ಧತೆ ಮಾಡಿಕೊಂಡಿದೆ. ಆದರೆ ರೈತರು ಮಾತ್ರ ಲಾಕ್ ಡೌನ್ ಪರಿಣಾಮ ಕೃಷಿ ಇಲಾಖೆಯತ್ತ ಮುಖ ಮಾಡಿಲ್ಲ. ಎಲ್ಲವೂ ಸರಿ ಇದ್ದರೆ ಇಷ್ಟೊತ್ತಿಗಾಗಲೇ ಜೋಳದ ಬೀಜ ವಿಲೇವಾರಿಯಾಗಬೇಕಿತ್ತು.
ರೈತರ ಪರಿಕರ ದುರಸ್ತಿಗಿಲ್ಲ ಅವಕಾಶ: ಮಳೆಗಾಲ ಸಮೀಪಿಸುವ ಮುನ್ನ ಕೃಷಿ ಹತಾರಗಳನ್ನು ದುರಸ್ತಿಗೊಳಿಸುವುದು ಮಾಮೂಲಿ. ಆದರೆ ಕುಲುಮೆಗಳು ಬಂದ್ ಆಗಿವೆ. ಬೇಕಾದ ಅಗತ್ಯ ವಸ್ತುಗಳನ್ನು ತರಲು ವಾಹನ ಬಳಸುವುದಿರಲಿ ಓಡಾಡುವಂತಿಲ್ಲ. ಇನ್ನು ಸಾಹಸ ಮಾಡಿ ಪೇಟೆಗೆ ಬಂದರೆ ಕೃಷಿ ಪರಿಕರದ ಅಂಗಡಿಗಳು ಬಂದ್ ಆಗಿವೆ.
ಕಲ್ಲಂಗಡಿ, ಅನಾನಾಸ್ ಪೆಟ್ಟು: ಈಗಾಗಲೇ ಲಾಕ್ ಡೌನ್ ನಿಂದ ಸಂಪರ್ಕ ಕಳೆದುಕೊಂಡ ಪರಿಣಾಮ ಕಲ್ಲಂಗಡಿ, ಅನಾನಾಸ್ ಬೆಳೆಗಳು ಹೊಲದಲ್ಲೇ ಕೊಳೆತು ರೈತರನ್ನು ಹಿಂಡಿ ಹಿಪ್ಪೆ ಮಾಡಿವೆ. ಇದೀಗ ಇತರ ಬೆಳೆಗಳ ಉತ್ತಮ ಇಳುವರಿ ಮಾಡಿ ಇದರ ನಷ್ಟ ಭರಿಸಿಕೊಳ್ಳಲು ರೈತರು ಸಿದ್ಧತೆಯಲ್ಲಿದ್ದರು. ಆದರೆ ಕಠಿಣ ಲಾಕ್‌ಡೌನ್‌ನಿಂದಾಗಿ ಕೃಷಿ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ಭತ್ತ, ಜೋಳ, ಅಡಕೆ, ಬಾಳೆ, ಕಾಳಮೆಣಸು ಸೇರಿದಂತೆ ವಿವಿಧ ಬೆಳೆಗಳ ಇಳುವರಿ ಕಡಿಮೆಯಾಗುವ ಸಾಧ್ಯತೆ ಇದ್ದು ರೈತರನ್ನು ಚಿಂತೆಗೀಡು ಮಾಡಿದೆ.