ಶಿವಮೊಗ್ಗ: ಕೊರೊನಾ ತಡೆಗೆ ವಿಧಿಸಲಾದ ಕಠಿಣ ಲಾಕ್‌ಡೌನ್ ಸಮಯದಲ್ಲಿ ತರಕಾರಿ ಬೆಲೆಗಳು ಗಗನಕ್ಕೆ ಏರಿದ್ದು, ಜನರ ಜೇಬಿಗೆ ಕತ್ತರಿ ಬೀಳುತ್ತಿದೆ. ಕೆಲವೇ ದಿನಗಳ ಹಿಂದೆ ಕೆ.ಜಿ.ಗೆ 20 ರಿಂದ 30 ರೂ. ಇದ್ದ ಬೀನ್ಸ್ ಈಗ 100-130 ರೂ.ಗೆ ಏರಿಕೆಯಾಗಿದೆ.
ಕೆಜಿಗೆ 15 ರಿಂದ 20 ರೂ. ಇದ್ದ ಕ್ಯಾರೇಟ್ ಈಗ ಕೆಜಿಗೆ 80 ರೂ. ಆಗಿದೆ. ಕೆಜಿಗೆ 10 ರೂ.ಇದ್ದ ಈರುಳ್ಳಿ ಈಗ 30 ರೂ. ಆಗಿದೆ. ಕೆಜಿಗೆ 8 ರೂ. ಇದ್ದ ಟೊಮೆಟೊ ಈಗ 20 ರೂ. ಗೆ ಏರಿದೆ. ಹಾಗೆಯೇ ಬೆಂಡೆಕಾಯಿ, ಹಿರೇಕಾಯಿ, ಕುಂಬಳಕಾಯಿ, ಕೋಸು, ಗೆಡ್ಡೆಕೋಸು, ಸೊಪ್ಪುಗಳು ಎಲ್ಲವುದರ ಬೆಲೆಯೂ ಏರಿದೆ. 2-5ರೂ.ಗೆ ಸಿಗುತ್ತಿದ್ದ ಒಂದು ಕಟ್ಟು ಕೊತ್ತೂಂಬರಿ ಸೊಪ್ಪು ಈಗ 10 ರೂ. ಕೊಟ್ಟರೂ ಸಿಗುತ್ತಿಲ್ಲ. ತರಕಾರಿ ಜತೆಗೆ ಹಣ್ಣುಗಳ ಬೆಲೆ ಕೂಡ ಏರಿಕೆಯಾಗಿದೆ.
ದುಪ್ಪಟ್ಟು ದರ ಕೊಟ್ಟರೂ ತಾಜಾ ತರಕಾರಿ ಸಿಗುತ್ತಿಲ್ಲ. ತರಕಾರಿ ಮಾರಲು ರೈತರು ಮಾರುಕಟ್ಟೆಗೆ ಬರಲು ಆಗುತ್ತಿಲ್ಲ. ಕಷ್ಟಪಟ್ಟು ಬಂದರೂ ಸಮಯದ ಅಭಾವದಿಂದ ತಮಗೆ ಸಿಕ್ಕ ಬೆಲೆಗೆ ಮಾರಿಬಿಡುತ್ತಾರೆ. ಆದರೆ ಮಧ್ಯವರ್ತಿಗಳು, ವ್ಯಾಪಾರಿಗಳು ಲಾಕ್‌ಡೌನ್ ಸಂದರ್ಭದಲ್ಲಿ ದರ ಏರಿಸಿ ಲಾಭ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಅಲ್ಲದೆ ಬೇಡಿಕೆ ಹೆಚ್ಚಾಗಿದ್ದು, ತರಕಾರಿ ಪೂರೈಕೆ ಕಡಿಮೆ ಇದ್ದು ಬೆಲೆ ದುಪ್ಪಟ್ಟಾಗಿದೆ. ಹೀಗಾಗಿಯೇ ಹೋಲ್‌ಸೇಲ್‌ನಲ್ಲಿ ಟೊಮೇಟೊ ಕೆಜಿಗೆ 5ರೂ. ನಂತೆ ಸಿಕ್ಕರೆ ನಂತರ 20 ರೂ.ಗೆ ಮಾರಾಟವಾಗುತ್ತಿದೆ. ಕೊರೊನಾ ಹರಡುವುದನ್ನು ತಪ್ಪಿಸಲು ಲಾಕ್‌ಡೌನ್ ಅನಿವಾರ್ಯವಾದರೂ ಅಗತ್ಯ ವಸ್ತು ಸೇರಿದಂತೆ ಜನರಿಗೆ ತೊಂದರೆಯಾಗಬಾರದೆಂದು ಜಿಲ್ಲಾಡಳಿತ ಒಂದಿಷ್ಟು ಸಡಿಲತೆ ನೀಡಿದೆ. ಆದರೆ ಇದು ಅವೈಜ್ಞಾನಿಕವಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಒಂದು ಗಂಟೆ ಮಾತ್ರ ವ್ಯಾಪಾರಕ್ಕೆ ಅದೂ ಸಗಟು ಮಾರಾಟಗಾರರು ಕೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ವಾಸ್ತವವಾಗಿ ಕೊಳ್ಳುವವರಿಗೆ ಸಮಯ ಸಿಗುವುದು ಕೇವಲ ಅರ್ಧಗಂಟೆ ಮಾತ್ರ. ಈ ಸಮಯದಲ್ಲಿ ರೈತರು ಮಾರಾಟ ಮಾಡುವುದಾಗಲಿ ಅಥವಾ ವರ್ತಕರು ಮಾರಾಟ ಮಾಡುವುದಾಗಲಿ ಚಿಲ್ಲರೆ ವ್ಯಾಪಾರಿಗಳು ಅದನ್ನು ಕೊಳ್ಳುವುದಕ್ಕಾಗಲಿ ಅವಕಾಶವೇ ಇಲ್ಲವಾಗಿದೆ. ಇವೆಲ್ಲ ತರಕಾರಿ ದರ ಏರಲು ಕಾರಣವಾಗಿದೆ.
ತರಕಾರಿ ಬೆಲೆ ಏರಿಸುವಂತಿಲ್ಲ. ಹೆಚ್ಚಿಗೆ ಬೆಲೆ ಪಡೆದರೆ ವ್ಯಾಪಾರಸ್ಥರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂಬ ಆದೇಶ ಹೊರಡಿಸಲಾಗಿದ್ದರೂ ಇವೆಲ್ಲ ಪಾಲನೆಯಾಗುತ್ತಿಲ್ಲ. ಅಲ್ಲದೆ ತರಕಾರಿ ಮಾರುವವರ ಬಳಿ ಬಿಲ್ ಪಡೆದು ದೂರು ಕೊಡಲೂ ಸಾಧ್ಯವಿಲ್ಲ. ಹೀಗಾಗಿ ಬೇಕಾದರೆ ತಗೊಳ್ಳಿ ಬೇಡವಾದರೆ ಬಿಡಿ, ಬಿಸಿಲಲ್ಲಿ ಸುತ್ತುವವರು ನಾವು. ನಮಗೂ ಕಷ್ಟ ಇದೆ. ಸಗಟು ವ್ಯಾಪಾರಸ್ಥರು ನಮಗೇನು ಕಡಿಮೆ ಬೆಲೆಗೆ ಕೊಡುವುದಿಲ್ಲ ಎಂಬ ಸಿದ್ಧ ಉತ್ತರಗಳು ಗ್ರಾಹಕನಿಗೆ ಸಿಗುತ್ತಿವೆ.
ಅನಿವಾರ್ಯವಾಗಿ ಗ್ರಾಹಕ ಒಂದಕ್ಕೆ 5 ರಷ್ಟು ಹೆಚ್ಚು ಬೆಲೆ ತೆತ್ತು ತರಕಾರಿ ಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಜಿಲ್ಲಾಡಳಿತ, ಮಹಾನಗರ ಪಾಲಿಕೆ ಮತ್ತು ತೋಟಗಾರಿಕೆ ಇಲಾಖೆ ಈ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.