ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ಮತ್ತು ಬ್ಲ್ಯಾಕ್ ಫಂಗಸ್ ಚಿಕಿತ್ಸೆಗಾಗಿ ಅಗತ್ಯವಾದ ವೈದ್ಯಕೀಯ ವ್ಯವಸ್ಥೆ ಹಾಗೂ ಔಷಧ ಎಲ್ಲವೂ ಲಭ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ಮತ್ತು ಬ್ಲಾಕ್ ಫಂಗಸ್‌ಗೆ ಅವಶ್ಯಕವಾದ ಚಿಕಿತ್ಸೆ, ಔಷಧ ಲಭ್ಯವಿದೆ. ಈ ಬಗ್ಗೆ ಅ ಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಸೋಂಕಿತರು ಭಯಪಡಬೇಕಾಗಿಲ್ಲ. ಅವರಿಗೆ ಎಲ್ಲ ಚಿಕಿತ್ಸೆ ನೀಡಲಾಗುವುದು ಎಂದರು.
ಜಿಲ್ಲೆಯ 271 ಗ್ರಾಪಂಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಾಗುವುದು. ಜಿಪಂ ಸಿಇಒ ಮತ್ತು ಅಧಿ ಕಾರಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಯಾವುದೇ ಗ್ರಾಮಕ್ಕೆ ಯಾರೇ ಬಂದರೂ 14 ದಿನ ಹೋಂ ಕ್ವಾರಂಟೈನ್‌ನಲ್ಲಿ ಇರಬೇಕು. ನಂತರ ಅವರು ಹೊರಗೆ ಬರಬೇಕು ಎಂದು ತಿಳಿಸಿದ್ದು, ಟಾಸ್ಕ್ಫೋರ್ಸ್‌ಗಳು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದರು.
ಗ್ರಾಪಂ ಟಾಸ್ಕ್ಫೋರ್ಸ್‌ಗಳು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು, ವಾರದಲ್ಲಿ 2 ದಿನ ಅವರೆಲ್ಲರೂ ಸೇರಿ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದಾರೆ. ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಜನರ ಓಡಾಟ ಬಹಳ ಕಡಿಮೆಯಾಗಿದೆ. ಹಳ್ಳಿಗಳಲ್ಲಿ ಸೋಂಕು ನಿಯಂತ್ರಣಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಲಾಗಿದ್ದು, 2ನೇ ದಿನ ಪೂರೈಸಿದೆ. ಜೂ.7 ರ ನಂತರ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಮುಂದುವರಿಸುವ ಅವಶ್ಯಕತೆ ಬರುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಹೇಳಿದರು.