ಶಿವಮೊಗ್ಗ: ಕಾಂಗ್ರೆಸ್ ಮೊದಲು ತಮ್ಮ ಪಕ್ಷದಲ್ಲಿರುವ ಹುಳುಕುಗಳನ್ನು ಮುಚ್ಚಿಕೊಳ್ಳಲಿ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಕುಟುಕಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲೇ ಕ್ಯಾನ್ಸರ್ ರೋಗವಿದೆ. ಆದರೂ ಬಿಜೆಪಿಯಲ್ಲಿ ರೋಗವಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳುತ್ತಾರೆ.
ಕಾಂಗ್ರೆಸ್ ಮೊದಲು ತನ್ನಲ್ಲಿರುವ ಹುಳುಕುಗಳನ್ನು ಮುಚ್ಚಿಕೊಳ್ಳಲಿ. ಮೂರೂ¾ರು ಮುಖ್ಯಮಂತ್ರಿಗಳನ್ನು ಹೊಂದಿದ ಉದಾಹರಣೆ ಆ ಪಕ್ಷಕ್ಕೆ ಇದೆ. ವೀರೇಂದ್ರ ಪಾಟೀಲ್‌ರಂತಹ ಪ್ರಾಮಾಣಿಕ ಮುಖ್ಯಮಂತ್ರಿ ಬಳಿ ವಿಮಾನ ನಿಲ್ದಾಣದಲ್ಲಿಯೇ ರಾಜೀನಾಮೆ ಕೇಳಿದ ಗುಂಪುಗಾರಿಕೆಯ ಪಕ್ಷ ಅದು. ಇಂತಹವರು ನಮ್ಮ ಪಕ್ಷಕ್ಕೆ ರೋಗ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷದಲ್ಲಿರುವ ಗುಂಪುಗಾರಿಕೆ ಸಿದ್ದರಾಮಯ್ಯ ಅವರ ಕಾಲದಲ್ಲಿ ಇದ್ದಷ್ಟು ಮತ್ಯಾವ ಕಾಲದಲ್ಲೂ ಇರಲಿಲ್ಲ. 2018ರ ಚುನಾವಣೆಯೇ ಇದಕ್ಕೆ ಸಾಕ್ಷಿ. ರಾಜ್ಯದಲ್ಲಿ ಕಾಂಗ್ರೆಸ್ ಅಡ್ರೆಸ್ ಇಲ್ಲದಂತೆ ಆಯಿತು. 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿಯೂ ಕಾಂಗ್ರೆಸ್ 28 ಸ್ಥಾನಗಳಲ್ಲಿ ಒಂದು ಸ್ಥಾನ ಮಾತ್ರ ಗೆಲ್ಲಲು ಸಾಧ್ಯವಾಯಿತು. ಇದನ್ನೆಲ್ಲ ಗಮನಿಸಿದರೆ ಆ ಪಕ್ಷಕ್ಕೆ ಗುಂಪುಗಾರಿಕೆಯ ರೋಗವಿದೆ ಎಂಬುದು ಯಾರಿಗಾದರೂ ಅರ್ಥವಾಗುತ್ತದೆ ಎಂದರು.
ಈಗ ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಈ ಸಂದರ್ಭದಲ್ಲಿ ಅಲ್ಲೊಬ್ಬ ಇಲ್ಲೊಬ್ಬ ಸಚಿವರು ಮಾತನಾಡಿದರೆ ಅದನ್ನು ರೋಗ ಎನ್ನುವುದಾದರೆ ಕಾಂಗ್ರೆಸ್‌ಗೆ ಕ್ಯಾನ್ಸರ್ ರೋಗವಿದೆ ಹಾಗೂ ಆ ರೋಗಕ್ಕೆ ಚಿಕಿತ್ಸೆನೇ ಇಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರ ಪತನವಾಗಲೂ ಇವರ ಗುಂಪುಗಾರಿಕೆಯ ಕ್ಯಾನ್ಸ್‌ರೇ ಕಾರಣ. ಇದಕ್ಕೆ ಔಷಧ ಇಲ್ಲದ ಕಾರಣ ಕಾಂಗ್ರೆಸ್ ಇಂದಲ್ಲ ನಾಳೆ ಸಾಯಲಿದೆ ಎಂದರು.
ಬಿಜೆಪಿಯಲ್ಲಿ ರೋಗವಿದೆ ಎಂದು ಹುಡುಕಿ ಹೇಳುವ ನೀವು ಬಹಳ ತಲೆಕೆಡಿಸಿಕೊಳ್ಳಬೇಡಿ. ನಮ್ಮ ಪಕ್ಷದ ಕೇಂದ್ರ ನಾಯಕರು ಇದಕ್ಕೆ ಪರಿಹಾರ ಕಂಡುಹಿಡಿಯುತ್ತಾರೆ ಎಂದು ಸಿದ್ದರಾಮಯ್ಯನವರಿಗೆ ಟಾಂಗ್ ಕೊಟ್ಟರು. ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನು ಬಿಜೆಪಿ ಸೀರಿಯಸ್ ಆಗಿ ತೆಗೆದುಕೊಳ್ಳದೆ ನಿರ್ಲಕ್ಷಿಸುತ್ತಿದೆ ಎಂಬ ಮಾತಿಗೆ ತಿರುಗೇಟು ನೀಡಿದ ಸಚಿವ ಈಶ್ವರಪ್ಪ, ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಸೆಕ್ಸ್ ಸ್ಕಾ0ಡಲ್ ಪ್ರಕರಣ ಬೆಳಕಿಗೆ ಬಂದಿತ್ತು. ಆಗ ಇವರೇನು ಮಾಡಿದ್ದರು ಎಂಬುದಕ್ಕೆ ಮೊದಲು ಉತ್ತರಿಸಲಿ. ಸೆಕ್ಸ್ ಸ್ಕಾ0ಡಲ್‌ನಲ್ಲಿ ಸಿಲುಕಿದವರನ್ನು ಇವರೇ ಬಜಾವ್ ಮಾಡಿದ್ದಾರೆ. ತಾಕತ್ತಿದ್ದರೆ ತಾನು ಯಾರನ್ನೂ ರಕ್ಷಿಸಿಲ್ಲ ಎಂದು ಬಹಿರಂಗವಾಗಿ ಸಿದ್ದರಾಮಯ್ಯ ಹೇಳಲಿ ಎಂದು ಸವಾಲು ಹಾಕಿದರು.
ವಿನಾಕಾರಣ ಟೀಕೆ: ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಸಚಿವರು ಮತ್ತು ಶಾಸಕರು ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಸರಕಾರ ರಾಜ್ಯದ ಜನ ಮೆಚ್ಚುವಂತೆ ಕೆಲಸ ಮಾಡುತ್ತಿದೆ. ಆದರೆ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯನವರಿಗೆ ತೃಪ್ತಿ-ಸಮಾಧನಾವೇ ಇಲ್ಲ. ವಿನಾಕಾರಣ ತಪ್ಪು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಕೊರೊನಾಕ್ಕೆ ವ್ಯಾಕ್ಸಿನ್ ಹೊರಬಂದ ತಕ್ಷಣ ಇವರೇ ಜನರ ಹಾದಿ ತಪ್ಪಿಸಿದರು.
ವ್ಯಾಕ್ಸಿನ್ ಬಗ್ಗೆ ತಾನು ಅಪಪ್ರಚಾರ ಮಾಡಿಲ್ಲ ಎಂದು ಸಿದ್ದರಾಮಯ್ಯ ತಾಯಿ ಚಾಮುಂಡೇಶ್ವರಿ ಮೇಲೆ ಆಣೆ ಮಾಡಿ ಹೇಳಲಿ. ವ್ಯಾಕ್ಸಿನ್‌ನಿಂದ ಅಡ್ಡ ಪರಿಣಾಮ ಆಗುತ್ತೆ, ಅದರಲ್ಲಿ ಔಷಧವಿಲ್ಲ, ಇದನ್ನು ಹಾಕಿಸಿಕೊಂಡರೆ ಮಕ್ಕಳಾಗಲ್ಲ ಎಂದೆಲ್ಲ ಅಪಪ್ರಚಾರ ಮಾಡಿದವರೇ ಇವರು. ಆಗ ಜನರ ದಿಕ್ಕು ತಪ್ಪಿಸಿ ಈಗ ಮತ್ತೆ ಸರಕಾರ ಬಗ್ಗೆ ಟೀಕೆ ಮಾಡುತ್ತಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸಾವು-ನೋವು ಹೆಚ್ಚಳಕ್ಕೆ ಕಾಂಗ್ರೆಸ್ ಕೊಡುಗೆ ದೊಡ್ಡದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.