ಶಿವಮೊಗ್ಗ: ಜಿಲ್ಲೆಯಾದ್ಯಂತ ಮೇ 31ರಿಂದ ಜೂನ್ 7ರವರೆಗೆ ಕಠಿಣ ಲಾಕ್‌ಡೌನ್ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಶನಿವಾರ ಜಿಲ್ಲಾ ಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಅವರು, ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿರಂತರವಾಗಿ ಇಳಿಮುಖವಾಗುತ್ತಿದ್ದರೂ, ನಿರೀಕ್ಷಿತ ಮಟ್ಟದಲ್ಲಿ ಕಡಿಮೆಯಾಗುತ್ತಿಲ್ಲ. ಲಾಕ್ ಡೌನ್ ಜಾರಿಯಲ್ಲಿದ್ದರೂ, ಜನ ಅನಗತ್ಯವಾಗಿ ಓಡಾಡುತ್ತಿರುವ ಪ್ರಕರಣಗಳು ಕಂಡು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಸೋಮವಾರ 10 ಗಂಟೆಯಿಂದ ಒಂದು ವಾರ ಕಾಲ ಕಟ್ಟು ನಿಟ್ಟಿನಿಂದ ಲಾಕ್‌ಡೌನ್ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದರು.
ಈ ಅವ ಧಿಯಲ್ಲಿ ಔಷ ಧ ಅಂಗಡಿಗಳು, ಆಯಾ ಪ್ರದೇಶದಲ್ಲಿರುವ ತರಕಾರಿ, ಹಾಲು, ದಿನಸಿ ಅಂಗಡಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಸಗಟು ದಿನಸಿ ಮಳಿಗೆಗಳು, ಎಪಿಎಂಸಿಯಲ್ಲಿ ಮಾರಾಟಕ್ಕೆ ಅವಕಾಶ ಇಲ್ಲ. ಆದರೆ ಸಗಟು ವ್ಯಾಪಾರಿಗಳು ಚಿಲ್ಲರೆ ಅಂಗಡಿಗಳಿಗೆ ಸರಕುಗಳನ್ನು ನೇರವಾಗಿ ಪೂರೈಕೆ ಮಾಡಬಹುದು. ತಳ್ಳುಗಾಡಿಗಳಲ್ಲಿ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ನಿಗದಿಪಡಿಸಲಾಗಿರುವ ಪ್ರದೇಶ ವ್ಯಾಪ್ತಿಯಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಅವಶ್ಯಕ ಸೇವೆಗಳಿಗೆ ಗುರುತಿಸಲಾಗಿರುವ ಸರ್ಕಾರಿ ಕಚೇರಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ಕಚೇರಿಗಳು ಇರುವುದಿಲ್ಲ.
ಕನಿಷ್ಠ ಮಟ್ಟದಲ್ಲಿ ಬ್ಯಾಂಕ್ ಸೇವೆ ಇರಲಿದೆ ಎಂದು ಹೇಳಿದರು. ಹೊಟೇಲ್‌ನಲ್ಲಿ ಪಾರ್ಸೆಲ್ ಸೇವೆಗೆ ಅವಕಾಶವಿದೆ. ಮಾರ್ಗಸೂಚಿ ಪ್ರಕಾರ ಮದುವೆಗೆ ಅವಕಾಶವಿದೆ. ಆದರೆ ಮದುವೆ ಹಿಂದಿನದಿನ, ಮಾರನೇ ದಿನದ ಸಮಾರಂಭಗಳು, ಗೃಹಪ್ರವೇಶ ಇವುಗಳಿಗೆಲ್ಲ ಅನುಮತಿ ಇಲ್ಲ. ನಿಯಮ ಉಲ್ಲಂಘಿಸಿ ಸಮಾರಂಭಗಳನ್ನು ಆಯೋಜಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈಗಾಗಲೇ ಜಿಲ್ಲಾಡಳಿತದಿಂದ ಅನುಮತಿ ನೀಡಲಾಗಿರುವ ಅಗತ್ಯ ಕೈಗಾರಿಕಾ ಚಟುವಟಿಕೆಗಳಿಗೆ ಮಾತ್ರ ಅವಕಾಶವಿರುವುದು. ಅಗತ್ಯ ಸರ್ಕಾರಿ ಕಾಮಗಾರಿಗಳು ಹಾಗೂ ಮಾನ್ಸೂನ್ ಪೂರ್ವ ಕಾಮಗಾರಿಗಳನ್ನು ಬಿಟ್ಟು ಬೇರೆ ಎಲ್ಲಾ ನಿರ್ಮಾಣ ಕಾಮಗಾರಿಗಳಿಗೆ ಅನುಮತಿ ಇಲ್ಲ. ಲಾಕ್‌ಡೌನ್ ಅವ ಧಿಯಲ್ಲಿ ಅನಗತ್ಯವಾಗಿ ರಸ್ತೆಗೆ ಬರುವ ವಾಹನಗಳನ್ನು ಜಪ್ತಿ ಮಾಡುವುದು ಮಾತ್ರವಲ್ಲದೆ, ಸವಾರರ ಮೇಲೆ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದರು.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮಾತನಾಡಿ, ಕಳೆದ 7ದಿನಗಳಿಂದ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗುತ್ತಿವೆ. ನಿರೀಕ್ಷಿತ ಪ್ರಮಾಣದಲ್ಲಿ ಕೋವಿಡ್ ಪ್ರಕರಣಗಳನ್ನು ತಗ್ಗಿಸುವ ಉದ್ದೇಶದಿಂದ ಒಂದು ವಾರ ಕಾಲ ಕಠಿಣ ಲಾಕ್‌ಡೌನ್ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಪೊಲೀಸ್ ವರಿಷ್ಠಾಧಿಕಾರಿ ಲಕ್ಷಿಪ್ರಸಾದ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಎಂ.ಎಲ್.ವೈಶಾಲಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.