ಶಿವಮೊಗ್ಗ: ಕೃಷಿಕಾಯ್ದೆ ವಿರೋಧಿ ಹೋರಾಟಕ್ಕೆ 6 ತಿಂಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಬುಧವಾರ ರೈತರು ಕಪ್ಪು ಬಾವುಟ ಹಾರಿಸಿ ಕರಾಳ ದಿನಾಚರಣೆ ಆಚರಿಸಿದರು. ಕೇಂದ್ರ ಸರ್ಕಾರ ಜಾರಿಗೆ ತಂದ 3 ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ ನವೆಂಬರ್ 26 ರಿಂದ ಚಳುವಳಿ ನಡೆಯುತ್ತಿದ್ದು, ಇವತ್ತಿಗೆ 6 ತಿಂಗಳು ತುಂಬಿದೆ.
ಕೇಂದ್ರ ಸರ್ಕಾರ ರೈತ ಮುಖಂಡರನ್ನು ಕರೆದು ಮಾತನಾಡಿಸುವ ಸೌಜನ್ಯ ಕೂಡ ತೋರಿಸುತ್ತಿಲ್ಲ ಎಂದು ರೈತರು ದೂರಿ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ನೇತೃತ್ವದಲ್ಲಿ ಭದ್ರಾವತಿ ತಾಲೂಕಿನ ಹನುಮಂತಾಪುರ ಗ್ರಾಮದಲ್ಲಿ ಕರಾಳ ದಿನ ಆಚರಿಸಿದರು. ದೇಶಾದ್ಯಂತ ಕೋವಿಡ್ ಇರುವ ಸಂಧರ್ಭದಲ್ಲಿ ರೈತರನ್ನು, ಜನರನ್ನು ಸೇರಿಸಿ ಜಿಲ್ಲಾಧಿಕಾರಿ, ತಹಶೀಲ್ದಾರ್ ಕಛೇರಿ ಎದುರು ಪ್ರತಿಭಟನೆ ಮಾಡಲು ಸಾಧ್ಯವಿಲ್ಲದ ಕಾರಣ ರೈತರು ಅವರವರ ಗ್ರಾಮಗಳಲ್ಲಿ, ಮನೆಯ ಮುಂದೆ ಕಪ್ಪು ಬಾವುಟ ಹಾರಿಸುವುದರ ಮುಖಾಂತರ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರ ಎಂ.ಎಸ್.ಪಿ. ಕನಿಷ್ಟ ಬೆಂಬಲ ಬೆಲೆ ಹಿಂದೆ ಇತ್ತು, ಈಗಲೂ ಇದೆ, ಮುಂದೆಯು ಇರುತ್ತದೆ ಎಂದು ಹೇಳುತ್ತದೆ. ಹಾಗಾದರೆ ಕರ್ನಾಟಕದಲ್ಲಿ ಬೆಳೆದಿರುವ ಭತ್ತ, ರಾಗಿ, ಜೋಳ ಇತರೆ ಬೆಳೆಗಳು ಲಾಕ್‌ಡೌನ್ ನಿಂದ ಕೇಳುವವರೇ ಇಲ್ಲದಂತಾಗಿದೆ. ಅಲ್ಲದೇ ಹಲವು ಬೆಳೆಗಳು ಜಮೀನಿನಲ್ಲೇ ಕೊಳೆತು ನಾಶವಾಗಿದೆ. ಆದರೂ, ಸರ್ಕಾರ ಎಕರೆಗೆ 4000 ರೂ. ಪರಿಹಾರ ಘೋಷಣೆ ಮಾಡಿರುವುದು ರೈತರಿಗೆ ಅವಮಾನ ಮಾಡಿದೆ. ಇದೆ ಕೋವಿಡ್ ಸಂದರ್ಭದಲ್ಲಿ ಆದಾನಿ, ಅಂಬಾನಿಗಳ ಆದಾಯ ಒಂದು ಗಂಟೆಗೆ 20 ಕೋಟಿ ರೂ. ಹೆಚ್ಚಿಗೆ ಆಗಿದೆ.
ಇನ್ನೊಂದು ಕಡೆ 1 ಗಂಟೆಗೆ 20,000 ಜನ ನಿರುದ್ಯೋಗಿಗಳಾಗುತ್ತಿದ್ದಾರೆ ಎಂದು ದೂರಿದರು. ಕೇಂದ್ರ ಸರ್ಕಾರ ಹಠಮಾರಿ ಧೋರಣೆ ಬಿಟ್ಟು ಇನ್ನಾದರೂ ಎಚ್ಚೆತ್ತುಕೊಂಡು ಚಳವಳಿ ನಡೆಸುತ್ತಿರುವ ರೈತ ಮುಖಂಡರ ಜೊತೆ ಮಾತುಕತೆ ನಡೆಸಿ ಕಾಯ್ದೆಗಳನ್ನು ವಾಪಾಸ್ಸು ಪಡೆದು ಬೆಂಬಲ ಬೆಲೆ ನೀತಿಯನ್ನು ಶಾಸನ ಬದ್ಧಗೊಳಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಟಿ.ಎಂ. ಚಂದ್ರಪ್ಪ, ಎಂ.ಪರಮಶಿವಯ್ಯ, ಎಚ್.ಎನ್.ರುದ್ರಪ್ಪ, ಎಚ್.ಎನ್. ನಾಗರಾಜಪ್ಪ, ಮಂಜಪ್ಪ, ಲೋಕೇಶ್, ಸುರೇಶ್ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು