Advertisement

ಚಟ್ಟಕ್ಕೆ ಹೆಗಲು ಕೊಟ್ಟ ಯುವಕರು

09:13 PM May 25, 2021 | Shreeraj Acharya |

„ಕುಮುದಾ ನಗರ

Advertisement

ಹೊಸನಗರ: ಕೊರೊನಾದಿಂದ ಇಡೀ ದೇಶವೇ ನಲುಗಿ ಹೋಗಿದೆ. ಕೊರೊನಾ ಸೋಂಕು ತಗುಲಿದೆ ಎಂಬ ಮಾಹಿತಿ ಸಿಕ್ಕರೆ ಸಾಕು. ಅಲ್ಲಿಂದ ಜನ ಕಾಲ್ಕಿಳುವ ಹೊತ್ತಿನಲ್ಲಿ ಯಾವುದೇ ಅಳುಕಿಲ್ಲದೆ ಕೊರೊನಾ ಸೋಂಕಿತ ಶವದ ಚಟ್ಟಕ್ಕೆ ಹೆಗಲುಕೊಟ್ಟು, ಶವಸಂಸ್ಕಾರ ಪೂರ್ಣಗೊಳಿಸಿದ ಯುವಕರ ತಂಡ ಗ್ರಾಮಸ್ಥರ ಪ್ರಶಂಸೆಗೆ ಪಾತ್ರವಾಗಿದೆ.

ಹೌದು,ಕೊರೊನಾ ಸೋಂಕು ಮನೆಯ ಯಜಮಾನನನ್ನು ಬಲಿ ತೆಗೆದುಕೊಂಡ ದುಃಖ ಒಂದೆಡೆಯಾದರೆ ಭಯದ ವಾತಾವರಣ ಸೃಷ್ಟಿಸಿರುವ ಕೊರೊನಾ ಮಧ್ಯೆ ಮೃತರ ಶವಸಂಸ್ಕಾರ ನಡೆಸೋದು ಹೇಗೆ ಎಂಬ ಚಿಂತೆಯಲ್ಲಿ ಆ ಕುಟುಂಬವಿತ್ತು. ಆದರೆ ಅವರ ನೆರವಿಗೆ ನಿಂತ ಯುವಕರ ತಂಡವೊಂದು ಚಟ್ಟಕ್ಕೆ ಹೆಗಲು ಕೊಟ್ಟಿದ್ದು ಅಲ್ಲದೆ ಶವಸಂಸ್ಕಾರವನ್ನು ಪೂರ್ಣವಾಗಿ ನೆರವೇರಿಸಿ ಆ ಕುಟುಂಬದ ಪಾಲಿಗೆ ಆಸರೆಯಾಗಿ ನಿಂತು ಮಾದರಿ ಕಾರ್ಯ ಮಾಡಿದೆ.

ಅಂಡಗದೋದೂರು ಗ್ರಾಮದ ಕೃಷ್ಣಮೂರ್ತಿ (61) ಎಂಬುವವರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದು ಶುಕ್ರವಾರ ರಾತ್ರಿ ಕುಂದಾಪುರದ ಆಚಾರ್ಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಮನೆಯ ಯಜಮಾನನನ್ನು ಕಳೆದುಕೊಂಡ ದುಃಖ ಒಂದೆಡೆಯಾದರೆ, ಕೊರೊನಾ ಭಯದ ವಾತಾವರಣ ಸೃಷ್ಟಿಸಿದ ಸಂದರ್ಭದಲ್ಲಿ ಅಂತ್ಯ ಸಂಸ್ಕಾರ ಹೇಗೆ ಮಾಡೋದು ಎಂಬ ಚಿಂತೆ ಕುಟುಂಬದವರಾಗಿತ್ತು.

ಆಗ ನೆರವಿಗೆ ಬಂದಿದ್ದು ತೀರ್ಥಹಳ್ಳಿಯ ಪೂರ್ಣೇಶ ಕೆಳಕೆರೆ, ಸುಭಾಶ ಕುಲಾಲ್‌, ಆದರ್ಶ ಹುಂಚದಕಟ್ಟೆ ಮತ್ತು ಶಹಾಬ್‌ ಎಂಬ ಯವಕರ ತಂಡ. ಇವರಿಗೆ ಸಾಥ್‌ ನೀಡಿದ್ದು ಅಂಡದೋದೂರು ಗ್ರಾಪಂ ಅಧ್ಯಕ್ಷ ಹೆರೆಟೆ ಆದರ್ಶ. ಕುಂದಾಪುರದಿಂದ ಅಂಡಗದೋದೂರಿಗೆ ಶವ ಬರುತ್ತಿದ್ದ ಹಾಗೆ ಯಾವುದೇ ಅಂಜಿಕೆ ಅಳುಕಿಲ್ಲದೆ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿಕೊಂಡು ಚಟ್ಟ ಕಟ್ಟುವುದರಿಂದ ಹಿಡಿದು ಶವಸಂಸ್ಕಾರದ ಅಂತಿಮ ಹಂತದವರೆಗೆ ಅಲ್ಲೇ ಇದ್ದು ಮಾನವೀಯತೆ ಮೆರೆದಿದ್ದಾರೆ.

Advertisement

ಇದು 5ನೇ ಶವಸಂಸ್ಕಾರ: ತೀರ್ಥಹಳ್ಳಿಯಲ್ಲಿ “ದೇಶಕ್ಕಾಗಿ ನಾವು’ ಸಂಘಟನೆ ಕಟ್ಟಿಕೊಂಡಿರುವ ಈ ಯುವಕರ ತಂಡ ಕೊರೊನಾದಲ್ಲಿ ನೊಂದು ಬೆಂದವರ ಹಿತದೃಷ್ಟಿಯಿಂದ ಉಚಿತವಾಗಿ ಸೇವೆ ನೀಡುತ್ತ ಗಮನ ಸೆಳೆದಿದೆ. ಈಗಾಗಲೇ ತಮ್ಮದೇ ಸ್ವಂತ ಖರ್ಚಿನಲ್ಲಿ ವಾಹನವೊಂದನ್ನು ಬಿಟ್ಟು ಅನಾರೋಗ್ಯ ಪೀಡಿತರ ಸೇವೆಗೆ ಮುಂದಾಗಿದೆ.

ಅಲ್ಲದೆ ಕನ್ನಂಗಿ, ಆಯನೂರು, ಬಸವಾಪುರ, ಕೊಗ್ಗರೆ, ಹರಳಿಮಠದ ಸಮೀಪದ ನೀರುಳ್ಳಿ ಮತ್ತು ಅಂಡಗದೋದೂರು ಸೇರಿ ಈಗಾಗಲೇ 5 ಶವ ಸಂಸ್ಕಾರವನ್ನು ಕೂಡ ನಡೆಸಿದೆ. ಯುವ ವಾರಿಯರ್ಸ್‌ ಪಡೆಯನ್ನು ಕೂಡ ಕಟ್ಟಿಕೊಂಡಿರುವ ಈ ಯುವಕರು ಈಗಾಗಲೇ 200ಕ್ಕೂ ಹೆಚ್ಚು ಬಡ ಕುಟುಂಬಗಳನ್ನು ಗುರುತಿಸಿ ಅಗತ್ಯ ವಸ್ತುಗಳ ಕಿಟ್‌ ನೀಡಿದೆ.

ಅಲ್ಲದೆ ಪ್ರತಿನಿತ್ಯ ದೇವಸ್ಥಾನ, ಬಸ್‌ ನಿಲ್ದಾಣ ಸೇರಿದಂತೆ ವಿವಿಧ ಭಾಗದಲ್ಲಿ ಹಸಿದು ಕುಳಿತ ವ್ಯಕ್ತಿಗಳನ್ನು ಗುರುತಿಸಿ 50ಕ್ಕೂ ಹೆಚ್ಚು ಜನರಿಗೆ ಊಟವನ್ನು ನೀಡುತ್ತಿದೆ. ಆರೋಗ್ಯ ಸಮಸ್ಯೆಯಿಂದ ಸಂಪರ್ಕದ ನಿರೀಕ್ಷೆಯಲ್ಲಿದ್ದ ರೋಗಿಗಳಿಗೆ ಆಸರೆಯಾಗಿದೆ. ಮಾತ್ರವಲ್ಲ, ಕೊರೊನಾದಿಂದ ಗುಣಮುಖರಾಗಿ ಬರುವ ವ್ಯಕ್ತಿಗಳನ್ನು ಮನೆಗೆ ತಲುಪಿಸುವ ಕೆಲಸ ಮಾಡುತ್ತಿದೆ.

ಅಲ್ಲದೆ ಸಹಾಯವಾಣಿಯನ್ನು ಆರಂಭಿಸಿದ್ದು ಯಾವುದೇ ಸಮಯದಲ್ಲಿ ಕರೆ ಬಂದರೂ ಅಲ್ಲಿಗೆ ಹೋಗಿ ಸ್ಪಂದಿಸುವ ಕೆಲಸವನ್ನು ಯುವ ತಂಡ ಮಾಡುತ್ತಿದ್ದು ಗಮನ ಸೆಳೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next