ಭದ್ರಾವತಿ: ಜಿಲ್ಲೆಯಲ್ಲಿ ಬೇರೆ ತಾಲೂಕುಗಳಿಗೆ ಹೋಲಿಸಿದರೆ ಭದ್ರಾವತಿಯಲ್ಲಿ ಅತಿ ಹೆಚ್ಚು ಕೋವಿಡ್ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಇದನ್ನು ನಿಯಂತ್ರಿಸಲು ಕಠಿಣ ಕ್ರಮ ಅನಿವಾರ್ಯವಾಗಿದೆ. ಸಾರ್ವಜನಿಕರು ಇದಕ್ಕೆ ಸಹಕಾರ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು. ಶನಿವಾರ ಬೆಳಗ್ಗೆ ತಾಲೂಕು ಬಿಜೆಪಿ ಘಟಕದ ವತಿಯಿಂದ ಆರಂಭಿಸಿರುವ ಕೋವಿಡ್ ಪಡೆಗೆ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ನಗರದಲ್ಲಿ ಕೋವಿಡ್ ಮಾರ್ಗಸೂಚಿಗಳು ಕಟ್ಟುನಿಟ್ಟಾಗಿ ಪಾಲನೆಯಾಗದೆ ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ಜನರು ಓಡಾಡುತ್ತಿದ್ದುದನ್ನು ಗಮನಿಸಿ, ಇದು ಸೋಂಕು ಹೆಚ್ಚಳಕ್ಕೆ ದಾರಿಯಾಗುತ್ತಿದೆ ಎಂಬುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಇಲಾಖಾ ಅಧಿ ಕಾರಿಗಳ ಸಭೆ ನಡೆಸಿ, ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ, ತಾಲೂಕು ಆಡಳಿತ ಹಾಗೂ ನಗರಸಭೆ ಕಠಿಣ ಕ್ರಮ ಕೈಗೊಂಡಿರುವುದು ಸಮಾಧಾನದ ವಿಚಾರ. ಆದರೂ, ಬೇರೆ ತಾಲೂಕುಗಳಿಗೆ ಹೋಲಿಕೆ ಮಾಡಿದರೆ, ಭದ್ರಾವತಿಯಲ್ಲಿ ಹೆಚ್ಚು ಪ್ರಕರಣಗಳು ಬರುತ್ತಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಕಠಿಣ ಕ್ರಮ ಅನಿವಾರ್ಯವಾಗಿದೆ ಎಂದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಭದ್ರಾವತಿ ಬಿಜೆಪಿ ಘಟಕದ ವತಿಯಿಂದ ಕೋವಿಡ್ ಸುರûಾ ಪಡೆ ಆರಂಭಿಸಿರುವುದು ಸ್ವಾಗತಾರ್ಹ. ಕೋವಿಡ್ ಸೋಂಕಿತರಿಗೆ ಹಾಗೂ ಸೋಂಕಿತರ ಆರೈಕೆಗಾಗಿ ಆಸ್ಪತ್ರೆ ಹೊರಗಿನಿಂದಲೇ ಸಹಕಾರ ನೀಡುವ ಅವರ ಕುಟುಂಬಸ್ಥರಿಗೆ ಇದರಿಂದ ಸಹಾಯವಾಗಲಿದೆ. ಇದೇ ವೇಳೆ ತಾಲೂಕಿನಲ್ಲಿ ನಿರಂತರವಾಗಿ ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿರುವುದನ್ನು ತಡೆಗಟ್ಟಬೇಕಾದ ಅಗತ್ಯ ಇದೆ. ಹೀಗಾಗಿ ಸರ್ಕಾರದ ಮಾರ್ಗ ಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದರು.
ಕೋವಿಡ್ ಸುರûಾ ಪಡೆ ವತಿಯಿಂದ ಸೇವೆಗೆ ಅನುಕೂಲವಾಗುವಂತೆ ಒಂದು ಆ್ಯಂಬುಲೆನ್ಸ್ ವಾಹನವನ್ನು ಇದೇ ಸಂದರ್ಭದಲ್ಲಿ ಉದ್ಘಾಟಿಸಲಾಯಿತು. ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಕುಟುಂಬಸ್ಥರಿಗೆ ಹಾಗೂ ಸಂಕಷ್ಟದಲ್ಲಿರುವ ಕೆಲವು ನಾಗರಿಕರಿಗೆ ಕೋವಿಡ್ ಪಡೆಯ ವತಿಯಿಂದ ಫುಡ್‌ಕಿಟ್ ವಿತರಿಸಲಾಯಿತು.
ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್, ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ದತ್ತಾತ್ರಿ, ನಗರ ಒಳ ಚರಂಡಿ ಮತ್ತು ನೀರು ಸರಬರಾಜು ನಿಗಮದ ನಿರ್ದೇಶಕ ಮಂಗೋಟೆ ರುದ್ರೇಶ್, ತಾಲೂಕು ಘಟಕದ ಅಧ್ಯಕ್ಷ ಪ್ರಭಾಕರ್,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ. ಶ್ರೀನಾಥ್, ಸೂಡಾ ಸದಸ್ಯ ಹಾಗೂ ನಗರಸಭಾ ಸದಸ್ಯರಾದ ಕದಿರೇಶ್, ಅನುಪಮ ಚನ್ನೇಶ್, ಅನಿತ ಮಲ್ಲೇಶ್, ಶಶಿಕಲಾ ನಾರಾಯಣಪ್ಪ ಮತ್ತಿತರರು ಇದ್ದರು.