ಶಿವಮೊಗ್ಗ: ನಗರದಲ್ಲಿ ವ್ಯಾಕ್ಸಿನ್ ಪಡೆಯಲು ಜನರ ಪರದಾಟ ಮುಂದುವರಿದಿದೆ. ಇಲ್ಲಿನ ಕುವೆಂಪು ರಸ್ತೆಯಲ್ಲಿ ವ್ಯಾಕ್ಸಿನ್ ಟೋಕನ್ ಪಡೆಯಲು ಬೆಳಿಗ್ಗೆ 6 ಗಂಟೆಯಿಂದಲೇ ಸಾರ್ವಜನಿಕರು ಸಾಲಲ್ಲಿ ನಿಲ್ಲುತ್ತಿದ್ದಾರೆ. ವ್ಯಾಕ್ಸಿನ್ ಪಡೆಯುವ ಬಗ್ಗೆ ಸರಿಯಾದ ಮಾಹಿತಿಯೂ ಸಿಗದಿರುವುದರಿಂದ ಜನ ತೊಂದರೆ ಅನುಭವಿಸುವಂತಾಗಿದೆ.
ಲಸಿಕಾ ಕೇಂದ್ರದ ಅವ್ಯವಸ್ಥೆಯ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುವೆಂಪು ರಸ್ತೆಯಲ್ಲಿರುವ ಆರೋಗ್ಯ ಇಲಾಖೆ ಕಚೇರಿ ಆವರಣದಲ್ಲಿ ಕೋವಿಶಿಲ್ಡ್ ಲಸಿಕಾ ಕೇಂದ್ರ ತೆರೆದಿದ್ದು, ದಿನಕ್ಕೆ 200 ಲಸಿಕೆ ಮಿತಿ ಇರುವುದರಿಂದ ಸಾರ್ವಜನಿಕರು ಬೆಳಿಗ್ಗೆಯಿಂದಲೇ ಸಾಲುಗಟ್ಟಿ ನಿಲ್ಲುತ್ತಿದ್ದು, 9 ಗಂಟೆಗೆ ಆಗಮಿಸುವ ಸಿಬ್ಬಂದಿ ಟೋಕನ್ ನೀಡುತ್ತಿದ್ದಾರೆ.
ಬೆಳಿಗ್ಗೆ 7 ಗಂಟೆಯಿಂದಲೇ ಟೋಕನ್ ನೀಡಬೇಕು ಆಗ ಉಳಿದವರು ಅನವಶ್ಯಕವಾಗಿ ಕಾಯುವುದು ತಪ್ಪಲಿದೆ. ಕೋವಿಡ್ ಉಲ್ಬಣವಾಗುತ್ತಿರುವ ಈ ಸಂದರ್ಭದಲ್ಲಿ ಸಾಮಾಜಿಕ ಅಂತರವಿಲ್ಲದೆ ಈ ರೀತಿ ಕೇಂದ್ರದ ಹೊರಗಡೆ ನಿಲ್ಲುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ವಯಸ್ಸಾದವರು ಮತ್ತು ರೋಗಿಗಳು ಕೂಡ ಲಸಿಕೆ ಪಡೆಯಲು ಬರುವುದರಿಂದ ಈ ಲಸಿಕಾ ಕೇಂದ್ರವನ್ನು ಬೆಳಿಗ್ಗೆ ಬೇಗನೆ ತೆರೆದು ಟೋಕನ್ ನೀಡಬೇಕು ಮತ್ತು ಕೇಂದ್ರದ ಹೊರಗಡೆ 18 ರಿಂದ 45 ವರ್ಷದ ಒಳಗಿನವರಿಗೆ ಲಸಿಕೆ ಹಾಕಲಾಗುವುದಿಲ್ಲ ಎಂದು ನಾಮಫಲಕ ಹಾಕಬೇಕು ಎಂದು ಜನ ಒತ್ತಾಯಿಸಿದ್ದಾರೆ.
ಮೊದಲ ಹಂತದ ಕೋವಿಶೀಲ್ಡ್ ಪಡೆದವರಿಗೆ ಮಾತ್ರ ಎರಡನೇ ಲಸಿಕೆ ಲಭ್ಯವಿದೆ. ಹೊಸದಾಗಿ ಪಡೆಯುವವರಿಗೆ ಲಭ್ಯವಿಲ್ಲ ಎಂದು ಫಲಕ ಹಾಕಲಾಗಿದೆ. ಆದರೆ ಮೊದಲ ಲಸಿಕೆ ಪಡೆಯುವವರಿಗೂ ಅವಕಾಶ ನೀಡುತ್ತಿದ್ದಾರೆ. ಇದರಿಂದ ಎರಡನೇ ಲಸಿಕೆ ಪಡೆಯುವ ಅವಧಿ ಮುಗಿದಿದ್ದರೂ ಕೂಡ ಅವರಿಗೆ ದೊರೆಯುತ್ತಿಲ್ಲ. ಇದು ಕೂಡ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇದೇ ರೀತಿ ಸಿಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಎರಡನೇ ಡೋಸ್ ಲಸಿಕೆ ನೀಡಲಾಗುತ್ತಿದೆ. ಆದರೆ ಕೋವ್ಯಾಕ್ಸಿನ್ ಕೊರತೆಯಿಂದಾಗಿ ನಿಗದಿತ ಅವ ಧಿ ಮುಗಿದಿದ್ದರೂ ಸಹ ಲಸಿಕೆ ಲಭ್ಯವಿಲ್ಲದೆ ಪ್ರತಿನಿತ್ಯ ಸಾರ್ವಜನಿಕರು ನಿರಾಸೆಯಿಂದ ಇಲ್ಲಿಗೆ ಬಂದು ವಾಪಸ್ ಮನೆಗೆ ತೆರಳುವಂತಾಗಿದೆ. ಲಸಿಕೆ ಬಗ್ಗೆ ನಿಖರವಾದ ಮಾಹಿತಿ ತಿಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.