ಶಿವಮೊಗ್ಗ: ಕೊರೊನಾದಿಂದ ಮೃತಪಟ್ಟವರ ಮೃತದೇಹ ಸಾಗಿಸಲು ಖಾಸಗಿ ಆ್ಯಂಬುಲೆನ್ಸ್‌ನವರು ಹೆಚ್ಚಿನ ಹಣ ಕೇಳಿದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.
ಅವರು ಮಂಗಳವಾರ ಪ್ರಧಾನಿ ಮೋದಿಯವರು ಜಿಲ್ಲಾ ಧಿಕಾರಿಗಳೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕೊರೊನಾ ನಿಯಂತ್ರಣ ವಿಚಾರವಾಗಿ ಪ್ರಧಾನಿ ಮೋದಿಯವರು ಜಿಲ್ಲಾ ಧಿಕಾರಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಎಲ್ಲಾ ರೀತಿಯ ಎಚ್ಚರಿಕೆ ಕ್ರಮಕೈಗೊಳ್ಳಲು ಸೂಚಿಸಿದ್ದಾರೆ. ಅಗತ್ಯ ನೆರವು ನೀಡುವುದಾಗಿ ಹೇಳಿದ್ದಾರೆ ಮತ್ತು ಎಲ್ಲಾ ಜಿಲ್ಲೆಗಳ ಮಾಹಿತಿ ಪಡೆದಿದ್ದಾರೆ ಎಂದರು.
ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಶವಗಳನ್ನು ಸಾಗಿಸುವ ಖಾಸಗಿ ಆ್ಯಂಬುಲೆನ್ಸ್‌ಗಳು ಹೆಚ್ಚಿನ ದರ ವಸೂಲಿ ಮಾಡುತ್ತಿವೆ. ಶಿವಮೊಗ್ಗದಿಂದ ಶಿಕಾರಿಪುರಕ್ಕೆ 26 ಸಾವಿರ ರೂ. ಪಡೆದ ಉದಾಹರಣೆ ಇದೆ. ಇದನ್ನೆಲ್ಲ ಸಹಿಸಲಾಗದು. ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಈಗಾಗಲೇ ನಿಗದಿಪಡಿಸಿದ ದರವನ್ನೇ ಪಡೆಯಬೇಕು ಎಂದು ತಿಳಿಸಿದರು.
ಕೆಲವು ಖಾಸಗಿ ಆ್ಯಂಬುಲೆನ್ಸ್ ಮಾಲೀಕರು ಪಿಪಿಇ ಕಿಟ್‌ಗೆ ಹೆಚ್ಚುವರಿ ಹಣ ಖರ್ಚಾಗುವುದರಿಂದ ಹೆಚ್ಚು ಹಣ ಪಡೆಯಲಾಗುತ್ತದೆ ಎಂದು ಬಲವಂತವಾಗಿ ವಸೂಲಿ ಮಾಡುತ್ತಿದ್ದಾರೆ. ಮಹಾನಗರ ಪಾಲಿಕೆ ವತಿಯಿಂದ ಮೃತದೇಹದ ಜೊತೆಗೆ ಎರಡು ಪಿಪಿಇ ಕಿಟ್ ನೀಡುತ್ತಿದ್ದು, ಇನ್ನೆರಡು ನೀಡಿದರೆ ಹೆಚ್ಚುವರಿ ಹಣ ಕೇಳುವುದು ತಪ್ಪಲಿದೆ ಎಂದು ಪತ್ರಕರ್ತರು ಸಲಹೆ ನೀಡಿದರು.
ಇದಕ್ಕೆ ತಕ್ಷಣವೇ ಒಪ್ಪಿಕೊಂಡ ಸಚಿವರು ಸ್ಥಳದಲ್ಲಿಯೇ ಪ್ರತಿ ಮೃತದೇಹದ ಜೊತೆಗೆ 4 ಪಿಪಿಇ ಕಿಟ್ ಕೊಡುವಂತೆ ಅ ಧಿಕಾರಿಗಳಿಗೆ ಸೂಚನೆ ನೀಡಿದರಲ್ಲದೆ ಆ್ಯಂಬುಲೆನ್ಸ್‌ನವರು ನಿಗದಿತ ದರ ಮಾತ್ರ ಪಡೆದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದರು. ಇನ್ನು ಮುಂದೆ ನಿಗದಿತ ದರಕ್ಕಿಂತ ಹೆಚ್ಚುವರಿ ಹಣ ಪಡೆಯುವವರ ವಿರುದ್ಧ ಕ್ರಮ ಕೈಗೊಂಡು ಆ್ಯಂಬುಲೆನ್ಸ್ ಸೀಜ್ ಮಾಡಲಾಗುವುದು ಎಂದು ಹೇಳಿದರು.
ಅದೇ ರೀತಿ, ತರಕಾರಿ ಮಾರಾಟ ವಾಹನಗಳಿಗೆ ಅವಕಾಶ ನೀಡಲಾಗಿದ್ದು, ಅವರು ತರಕಾರಿ ದರಪಟ್ಟಿಯನ್ನು ನಮೂದಿಸಬೇಕು, ಹೆಚ್ಚಿನ ಬೆಲೆ ಪಡೆಯಬಾರದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಧಿಕಾರಿ ಕೆ.ಬಿ. ಶಿವಕುಮಾರ್, ಅಪರ ಜಿಲ್ಲಾ ಧಿಕಾರಿ ಜಿ.ಅನುರಾಧ, ಜಿಪಂ ಸಿಇಒ ಎಂ.ಎಲ್. ವೈಶಾಲಿ, ಜಿಲ್ಲಾ ಪೊಲೀಸ್ ಅ ಧೀಕ್ಷಕ ಲಕ್ಷಿಪ್ರಸಾದ್ ಇದ್ದರು.