ಶಿವಮೊಗ್ಗ: ನಗರದ ಹೃದಯ ಭಾಗದಲ್ಲಿರುವ ಶುಭಮಂಗಳ ಸಮುದಾಯ ಭವನದಲ್ಲಿ 100 ಹಾಸಿಗೆಗಳ ಉಚಿತವಾದ ಕೋವಿಡ್ ಆರೈಕೆ ಕೇಂದ್ರ ತೆರೆಯಲಾಗುತ್ತಿದ್ದು, ಮೇ 20 ರಿಂದ ಇದು ಆರಂಭಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಶುಭಮಂಗಳ ಸಮುದಾಯ ಭವನದಲ್ಲಿ ಆರೈಕೆ ಕೇಂದ್ರದ ಸಿದ್ಧತೆಗಳನ್ನು ಪರಿಶೀಲಿಸಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸೇವಾ ಭಾರತಿ, ಕೋವಿಡ್ ಪಡೆ, ಮೆಟ್ರೋ ಆಸ್ಪತ್ರೆ, ಐಎಂಎ, ಗಾಂಧಿ ಬಜಾರ್ ವರ್ತಕರ ಸಂಘ ಮುಂತಾದವರ ಸಹಕಾರದಲ್ಲಿ ಈ ಆರೈಕೆ ಕೇಂದ್ರ ಸ್ಥಾಪಿಸಲಾಗುತ್ತಿದೆ. ಈ ಕೇಂದ್ರವು ಅತ್ಯಾಧುನಿಕವಾಗಿದ್ದು, ಸಂಪೂರ್ಣ ಉಚಿತವಾಗಿದೆ.
ಮೆಗ್ಗಾನ್ ಆಸ್ಪತ್ರೆಯಿಂದ ಸೂಚಿಸಲಾದ ರೋಗಿಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುವುದು ಎಂದರು. ಈ ಆರೈಕೆ ಕೇಂದ್ರದಲ್ಲಿ ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಲ್ಲೇ ಇದ್ದು, ಚೇತರಿಕೆ ಕಾಣುತ್ತಿರುವ ರೋಗಿಗಳನ್ನು ಕರೆತಂದು ಉಪಚರಿಸಲಾಗುವುದು. ಇದಲ್ಲದೆ ಸೋಂಕಿನಿಂದ ಬಾಧಿ ತರಾಗಿದ್ದರೂ ಯಾವುದೇ ರೋಗ ಲಕ್ಷಣ ಇಲ್ಲದವರನ್ನೂ ಇಲ್ಲಿ ಬೇರ್ಪಡಿಸಿ ಉಪಚರಿಸಲಾಗುವುದು ಎಂದರು.
ಸೇವಾ ಭಾರತಿ ಕರ್ನಾಟಕ ಶಿವಮೊಗ್ಗ ವಿಭಾಗದ ಪ್ರಮುಖರಾದ ಡಾ| ರವಿಕಿರಣ್ ಮಾತನಾಡಿ, ಈ ಆರೈಕೆ ಕೇಂದ್ರವು ಸಚಿವ ಕೆ.ಎಸ್. ಈಶ್ವರಪ್ಪನವರ ನೇತೃತ್ವದಲ್ಲಿ ನಡೆಯಲಿದೆ. ಎರಡು ರೀತಿಯ ಸೋಂಕಿತರಿಗೆ ಇಲ್ಲಿ ಅವಕಾಶ ನೀಡಲಾಗುವುದು ಎಂದರು.
ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್. ಅರುಣ್ ಮಾತನಾಡಿ, ಮೇ 20 ರಂದು ಬೆಳಗ್ಗೆ 11 ಗಂಟೆಗೆ ಶುಭಮಂಗಳ ಸಮುದಾಯ ಭವನದಲ್ಲಿ ಆರೈಕೆ ಕೇಂದ್ರ ಉದ್ಘಾಟನೆಯಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಪಟ್ಟಾಭಿರಾಮ್, ಸುನಿತಾ ಅಣ್ಣಪ್ಪ, ಶಂಕರ್ ಗನ್ನಿ, ಕೆ.ವಿ. ಅಣ್ಣಪ್ಪ, ಸುವರ್ಣಾ ಶಂಕರ್, ಎಸ್. ದತ್ತಾತ್ರಿ, ವಾಸುದೇವ್, ಡಾ| ಪೃಥ್ವಿ, ಡಾ| ತೇಜಸ್ವಿ, ಡಾ| ರವಿ, ಸುರೇಂದ್ರ ಮೊದಲಾದವರಿದ್ದರು.