ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಇದು ಸಮಾಧಾನವೇ ಹೊರತು ತೃಪ್ತಿ ತಂದಿಲ್ಲ ಎಂದು ಜಿಲ್ಲಾ ಧಿಕಾರಿ ಕೆ.ಬಿ. ಶಿವಕುಮಾರ್ ಹೇಳಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಾರಕ್ಕೆ ಹೋಲಿಸಿದರೆ ಈ ಎರಡು ಮೂರು ದಿನಗಳಿಂದ 1 ಸಾವಿರ ದಾಟುತ್ತಿದ್ದ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆ.
ಇದು ಕೊಂಚ ಸಮಾಧಾನದ ಸಂಗತಿಯಾದರೂ ತೃಪ್ತಿಯಂತೂ ಇಲ್ಲ. ಶೇ.45 ರಿಂದ 47 ರಷ್ಟು ಇದ್ದ ಸೋಂಕಿತರ ಪ್ರಮಾಣ ಶೇ.37ಕ್ಕೆ ಇಳಿದಿದೆ. ಆದರೆ ಸದ್ಯದ ಸ್ಥಿತಿಯಲ್ಲಿ ಈ ಶೇ.37 ಸಹ ಹೆಚ್ಚಾಗಿದ್ದು ಸೋಂಕಿನ ಪ್ರಮಾಣ ಇನ್ನೂ ತಗ್ಗಬೇಕಿದೆ ಎಂದರು. ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ. ರೋಗಿಗಳ ದಾಖಲಾತಿ ಹಾಗೂ ಅವರ ಆರೋಗ್ಯ ಸ್ಥಿತಿ ನೋಡಿಕೊಂಡು ಬೆಡ್ ಹಂಚಿಕೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಈಗ 72 ಆಕ್ಸಿಜನ್ ಬೆಡ್ ಖಾಲಿ ಇವೆ. ಸಿಬ್ಬಂದಿ ಕೊರತೆ ಆಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 7277 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಮೆಗ್ಗಾನ್ ಆಸ್ಪತ್ರೆಯಲ್ಲಿ 600, ತಾಲೂಕು ಆಸ್ಪತ್ರೆಗಳಲ್ಲಿ 356, ಕೋವಿಡ್ ಸೆಂಟರ್‌ನಲ್ಲಿ 325 ಸೋಂಕಿತರಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ 508 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯಲ್ಲಿ 4,835 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ.
ಐಸೋಲೇಷನ್ ಟೀಂ ಮೂಲಕ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ದೂರವಾಣಿ ಮೂಲಕವೇ ವಿಚಾರಿಸಲಾಗುತ್ತಿದೆ. ಅಲ್ಲದೇ, ಖಾಸಗಿಯಾಗಿ ವೈದ್ಯರು ಮನೆಗಳಿಗೂ ಭೇಟಿ ನೀಡುತ್ತಿದ್ದಾರೆ ಎಂದರು. ಕಳೆದ ಕೆಲವು ದಿನಗಳಿಗೆ ಹೋಲಿಸಿದರೆ ಸಾವಿನ ಸಂಖ್ಯೆ ಕೂಡ ಕಡಿಮೆಯಾಗಿದೆ. ನಿನ್ನೆಯ ಅಂಕಿ ಅಂಶದ ಪ್ರಕಾರ, 5 ಮಂದಿ ಸೋಂಕಿತರು ಮೃತಪಟ್ಟಿದ್ದು, ಇದುವರೆಗೂ 557 ಸೋಂಕಿತರು ಮೃತಪಟ್ಟಿದ್ದಾರೆ. ಜಿಲ್ಲಾಡಳಿತ ಅಗತ್ಯ ಎಚ್ಚರಿಕೆ ಕ್ರಮ ಅನುಸರಿಸುತ್ತಿದೆ ಎಂದರು.
ಜಿಲ್ಲೆಯಲ್ಲಿ ರೆಮ್‌ಡೆಸಿವಿರ್ ಕಾಳಸಂತೆಯಲ್ಲಿ ಮಾರಾಟ ಮಾಡದಂತೆ ಎಚ್ಚರಿಕೆ ವಹಿಸಲಾಗಿದೆ. ಜಿಲ್ಲಾ ರಕ್ಷಣಾ ಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ 122, ಖಾಸಗಿ ಆಸ್ಪತ್ರೆಗಳಲ್ಲಿ 306 ರೆಮ್‌ಡೆಸಿವಿರ್ ಇದೆ. ತಾಲೂಕು ಆಸ್ಪತ್ರೆಗಳಲ್ಲಿ 104 ವೆಂಟಿಲೇಟರ್‌ಗಳಿವೆ. ಶಿರಾಳಕೊಪ್ಪ, ಸಾಗರ ಮತ್ತು ಹೊಸನಗರದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ ಎಂದರು.