ಶಿವಮೊಗ್ಗ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ಜಿಲ್ಲೆಯಾದ್ಯಂತ ಬೆಳಿಗ್ಗೆ ಯಿಂದಲೇ ಮೋಡಕವಿದ ವಾತಾವರಣ ಕಂಡುಬಂದಿದ್ದು, ಅಲ್ಲಲ್ಲಿ ಮಳೆಯಾಗುತ್ತಿದೆ. ಆಗುಂಬೆ, ತೀರ್ಥಹಳ್ಳಿ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ.
ನಗರದಲ್ಲಿ ಸಂಪೂರ್ಣ ಮೋಡಕವಿದ ವಾತಾವರಣವಿದ್ದು, ಆಗಾಗ ತುಂತುರು ಮಳೆಯಾಗುತ್ತಿದೆ. ವಾತಾವರಣ ಸಂಪೂರ್ಣ ಬದಲಾಗಿದ್ದು, ಶೀತಗಾಳಿ ಬೀಸುತ್ತಿದೆ. ತುಂಗಾ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗಾಜನೂರಿನ ತುಂಗಾ ಜಲಾಶಯ ಸಂಪೂರ್ಣ ಭರ್ತಿ ಯಾಗುವ ಹಂತ ತಲುಪಿದೆ. ಮುಂಜಾಗೃತಾ ಕ್ರಮವಾಗಿ ಜಲಾಶಯದಿಂದ ಸುಮಾರು 500 ಕ್ಯೂಸೆಕ್ ನೀರನ್ನು ಹೊರಗೆ ಹರಿಯ ಬಿಡಲಾಗುತ್ತಿದೆ.
ಮಳೆ ಹೆಚ್ಚಾದರೆ ಇನ್ನಷ್ಟು ನೀರನ್ನು ಜಲಾಶಯದಿಂದ ಹೊರಗೆ ಬಿಡುವ ಸಾಧ್ಯತೆ ಇದ್ದು, ತಗ್ಗುಪ್ರದೇಶದ ಜನ ಎಚ್ಚರಿಕೆ ವಹಿಸುವಂತೆ ಹಾಗೂ ಜಾನುವಾರುಗಳನ್ನು ನದಿ ಪ್ರದೇಶಕ್ಕೆ ಬಿಡದಿರುವಂತೆ ತಿಳಿಸಲಾಗಿದೆ.
ಮುಂದಿನ ಮೂರು ದಿನ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತ ಈಗಾಗಲೇ ರೆಡ್ ಅಲರ್ಟ್ ಘೋಷಣೆ ಮಾಡಿದೆ. ನದಿ, ನಾಲೆ ಹಾಗೂ ತಗ್ಗು ಪ್ರದೇಶದ ನಿವಾಸಿಗಳು ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಪರಿಸ್ಥಿತಿ ಎದುರಿಸಲು ಸನ್ನದ್ಧ ರಾಗಿರುವಂತೆ ಅಗ್ನಿಶಾಮಕ, ಮೆಸ್ಕಾಂ, ರಕ್ಷಣೆ ಹಾಗೂ ಇತರ ಇಲಾಖೆಗಳ ಅ ಧಿಕಾರಿಗಳಿಗೆ ಜಿಲ್ಲಾಡಳಿತದಿಂದ ಸೂಚನೆ ನೀಡಲಾಗಿದೆ.
ಒಂದೆರಡು ಗಂಟೆ ಸುರಿದ ಮಳೆಗೆ ನಗರದ ತಗ್ಗು ಪ್ರದೇಶ ಮತ್ತು ರಾಜಕಾಲುವೆ ಹರಿಯುವ ಪ್ರದೇಶಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗುತ್ತಿದೆ. ಸ್ಮಾರ್ಟ್ ಸಿಟಿ ಕಾಮಗಾರಿಗಳಿಂದ ಚರಂಡಿಗಳಲ್ಲಿ ನೀರು ಸರಾಗವಾಗಿ ಸಾಗುತ್ತಿಲ್ಲ. ಇದರ ಬಗ್ಗೆ ಗಮನಹರಿಸಲು ಅ ಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಮಳೆ ಹೀಗೆ ಮುಂದುವರೆದರೆ ಆಗುಂಬೆ ಭಾಗದಲ್ಲಿ ಬಸ್ ಸಂಚಾರ ಸ್ಥಗಿತಕ್ಕೂ ಯೋಚಿಸಲಾಗಿದೆ. ತಗ್ಗು ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಸೂಚನೆ ನೀಡಲಾಗಿದೆ.ಭಾರೀ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದೆ.