ಶಿವಮೊಗ್ಗ: ಬರಲಿರುವ ರಂಜಾನ್ ಹಾಗೂ ಬಸವ ಜಯಂತಿ ಆಚರಣೆಗೆ ಯಾವುದೇ ಗೊಂದಲ ಬೇಡ. ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದ್ದು, ದಾರಿ ತಪ್ಪಿಸುವ ಹೇಳಿಕೆಗಳಿಗೆ ಯಾರು ಕೂಡ ಕಿವಿಗೊಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಂಜಾನ್ ಮತ್ತು ಬಸವ ಜಯಂತಿ ಆಚರಣೆಗೆ ಯಾವುದೇ ಕಾರಣಕ್ಕೂ ತೊಂದರೆ ಆಗುವುದಿಲ್ಲ. ಕಠಿಣ ಕರ್ಫ್ಯೂ ಜಾರಿಯಲ್ಲಿದ್ದರೂ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು. ದಿನಸಿ, ತರಕಾರಿ, ಹಣ್ಣು, ಮೀನು, ಮಾಂಸ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. ಸಾರ್ವಜನಿಕರು ನಿಗದಿಪಡಿಸಿದ ಸಮಯದಲ್ಲಿ ಖರೀದಿ ಮಾಡಬಹುದಾಗಿದೆ ಎಂದರು.
ಕೊರೊನಾ ಸೋಂಕು ತಡೆಗಟ್ಟುವ ಉದ್ದೇಶದಿಂದ ಶಿವಮೊಗ್ಗ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಗುರುವಾರದಿಂದ ನಾಲ್ಕು ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್ ಮಾಡಲು ತೀರ್ಮಾನಿಸಲಾಗಿದೆ. ಕೆಲವು ಅಗತ್ಯ ಸೇವೆಗಳನ್ನು ಹೊರತುಪಡಿಸಿ ನಾಲ್ಕು ದಿನಗಳ ಕಾಲ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ. ಇದೇ ಸಂದರ್ಭ ದಲ್ಲಿ ರಂಜಾನ್ ಹಾಗೂ ಬಸವ ಜಯಂತಿ ಹಬ್ಬ ಎದುರಾಗಿದೆ. ಆದರೆ ಹಬ್ಬ ಆಚರಣೆಗೆ ಯಾವುದೇ ತೊಂದರೆ ಇಲ್ಲ. ದಾರಿತಪ್ಪಿಸುವ ಹೇಳಿಕೆಗಳನ್ನು ಸಾರ್ವಜನಿಕರು ನಂಬ ಬಾರದು ಎಂದರು.
ಬಿಜೆಪಿ ಸರ್ಕಾರ ಎಲ್ಲ ಜಾತಿ ಧರ್ಮದವರನ್ನು ಒಟ್ಟಿಗೆ ಕರೆದುಕೊಂಡು ಹೋಗಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಕೆಲವರು ಹಬ್ಬದ ಸಂದರ್ಭದಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಲಾಗಿದೆ ಎಂದು ಕೋಮು ವಿಚಾರ ಎಳೆದು ತರುತ್ತಿದ್ದು ಇದು ಸರಿಯಲ್ಲ ಎಂದರು. ಜಿಲ್ಲೆಯಲ್ಲಿ ಗುರುವಾರ, ಶುಕ್ರವಾರ, ಶನಿವಾರ ಹಾಗೂ ಭಾನುವಾರ ಸಂಪೂರ್ಣ ಲಾಕ್‌ಡೌನ್ ಮಾಡಬೇಕು ಎಂದು ತೀರ್ಮಾನ ಮಾಡಲಾಗಿದೆ. ಇದಕ್ಕೆ ಕೈಗಾರಿಕೋದ್ಯಮಿಗಳು, ಗಾಂಧಿ ಬಜಾರ್ ವರ್ತಕರ ಸಂಘ, ಸೇರಿದಂತೆ ಹಲವರು ಬೆಂಬಲ ನೀಡಿದ್ದಾರೆ.
ಆದರೆ ರಕ್ಷಣೆ, ರೈಲ್ವೆ, ಮೆಡಿಕಲ್, ಆಹಾರ ಸಂಸ್ಕರಣಾ ಘಟಕ ಇವುಗಳಿಗೆಲ್ಲಾ ಅದರಿಂದ ವಿನಾಯಿತಿ ನೀಡಲಾಗುವುದು. ಸರ್ಕಾರದ ಮಾರ್ಗಸೂಚಿಯನ್ನು ಅನುಸರಿಸಿ ಈ ನಾಲ್ಕು ಘಟಕಗಳು ಕಾರ್ಯ ನಿರ್ವಹಿಸಬಹುದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಧಿಕಾರಿ ಕೆ.ಬಿ. ಶಿವಕುಮಾರ್, ಸೂಡಾ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್ ಉಪಸ್ಥಿತರಿದ್ದರು.