ಸಾಗರ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಬೆಡ್ ಲಭ್ಯತೆ ಇಲ್ಲದ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ. ಇದರಿಂದ ಸೋಂಕಿತರು ಮುಂದಿನ ದಿನಗಳಲ್ಲಿ ಸಾಗರ ಉಪವಿಭಾಗೀಯ ಆಸ್ಪತ್ರೆಯನ್ನು ಅವಲಂಬಿಸುವುದು ಅನಿವಾರ್ಯವಾಗಲಿದೆ ಎಂದು ಎಂಎಸ್‌ಐಎಲ್ ಅಧ್ಯಕ್ಷ, ಶಾಸಕ ಎಚ್. ಹಾಲಪ್ಪ ಹರತಾಳು ಆತಂಕ ವ್ಯಕ್ತಪಡಿಸಿದರು.
ತಾಲೂಕಿನ ಕೊರೊನಾ ಪರಿಸ್ಥಿತಿ ಕುರಿತು ಸಾಗರ ಉಪವಿಭಾಗದ ಸಹಾಯಕ ಆಯುಕ್ತರು ಹಾಗೂ ಇತರ ಅಧಿ ಕಾರಿಗಳ ಜೊತೆಗೆ ಬುಧವಾರ ತುರ್ತು ಸಭೆ ನಡೆಸಿದ ನಂತರ ಮಾತನಾಡಿದ ಅವರು, ಪ್ರಸ್ತುತ ಸುತ್ತಮುತ್ತಲ ಹಳ್ಳಿಯ ಮಾಹಿತಿ ಗಮನಿಸಿದಾಗ ಮುಂದಿನ ಮೂರ್‍ನಾಲ್ಕು ದಿನಗಳಲ್ಲಿ ಸಾಗರ ಆಸ್ಪತ್ರೆಯಲ್ಲೂ ಸೋಂಕಿತರು ತುಂಬುವ ಸಾಧ್ಯತೆ ಇದೆ. ಇದರಿಂದ ಅಗತ್ಯವಿರುವ ರೋಗಿಗಳಿಗೆ ಆಕ್ಸಿಜನ್ ಕೊರತೆ ಎದುರಿಸಬೇಕಾಗಲಿದೆ ಎಂದರು.
ಇಷ್ಟೆಲ್ಲ ರೋಗದ ತೀವ್ರತೆ ಇದ್ದಾಗಲೂ ಕೊರೊನಾ ನಿಯಮ ಮೀರಿ ಜನ ಮದುವೆ ಮನೆ ಮತ್ತು ಕುರಿ ಊಟದಲ್ಲಿ ಸೇರುತ್ತಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ ವಿಪರೀತವಾಗಲಿದೆ. ಇನ್ನಾದರೂ ಜನ ನಿಯಮ ಪಾಲಿಸಬೇಕು ಮತ್ತು ಸ್ವತಃ ಕೊರೊನಾ ನಿಯಂತ್ರಣಕ್ಕೆ ಪ್ರಯತ್ನ ಮಾಡಬೇಕು ಎಂದರು.
ಇಲ್ಲಿಯ ಆಸ್ಪತ್ರೆ ಮೇಲೆ ಒತ್ತಡ ಆಗುವ ಮುನ್ನವೇ ಅಗತ್ಯ ವ್ಯವಸ್ಥೆ ಕಲ್ಪಿಸಲು ಹರಸಾಹಸ ಮಾಡಲಾಗುತ್ತಿದೆ. ಒಳ್ಳೆಯ ವೈದ್ಯಕೀಯ ಸಿಬ್ಬಂದಿ ನಮ್ಮೊಂದಿಗಿದೆ. ಆದರೆ ಆಕ್ಸಿಜನ್, ಸಿಲಿಂಡರ್ ಕೊರತೆ ಇದೆ. ಸಿಲಿಂಡರ್ ಸಾಮರ್ಥ್ಯವನ್ನು 40ಕ್ಕೆ ಏರಿಸಿಕೊಳ್ಳಲಾಗಿದೆ. ಆದರೆ ಅದು ಸಾಕಾಗುವುದಿಲ್ಲ. ಇಲ್ಲಿಯ ಕೈಗಾರಿಕೋದ್ಯಮಿಗಳ ಸಹಕಾರ ಪಡೆದು ಅವರಲ್ಲಿರುವ ಸಿಲಿಂಡರ್ ಕೂಡ ಬಳಸಿಕೊಳ್ಳುವ ಮೂಲಕ ಕನಿಷ್ಠ 100 ಸಿಲಿಂಡರ್ ಲಭ್ಯತೆಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಲಸಿಕೆ ತೆಗೆದುಕೊಳ್ಳಲು ಜನ ಬರುತ್ತಿದ್ದಾರೆ. ಆದರೆ ಅವರಿಗೆ ಲಸಿಕೆ ಲಭ್ಯತೆಯ ಮಾಹಿತಿ ಇಲ್ಲ. ಈ ಸಮಸ್ಯೆ ಕೂಡ ಆಗದ ರೀತಿಯಲ್ಲಿ ಬಂದಿರುವ ಎಲ್ಲರಿಗೂ ಲಸಿಕೆ ನೀಡುವ ಪ್ರಯತ್ನ ಮಾಡಲಾಗುತ್ತಿದೆ. ಸಾಗರ ಉಪವಿಭಾಗೀಯ ವ್ಯವಸ್ಥೆಯಾಗಿರುವುದರಿಂದ ಬೇರೆ ಬೇರೆ ಭಾಗದವರೂ ಇಲ್ಲಿಯ ಆಸ್ಪತ್ರೆ ನಂಬಿ ಬರುತ್ತಿರು ವುದರಿಂದ ಸೂಕ್ತ ರೀತಿಯ ಚಿಕಿತ್ಸೆ ನೀಡುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಸಹಾಯಕ ಆಯುಕ್ತ ಡಾ.ಎಲ್.ನಾಗರಾಜ್, ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ, ವೈದ್ಯಾ ಧಿಕಾರಿ ಡಾ. ಪ್ರಕಾಶ್ ಬೋಸ್ಲೆ, ನಗರ ಸಭಾಧ್ಯಕ್ಷೆ ಮಧುರಾ ಶಿವಾನಂದ, ಉಪಾಧ್ಯಕ್ಷ ವಿ.ಮಹೇಶ್ ಇದ್ದರು.