ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಾಗದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು. ಕೋವಿಡ್ ನಿಯಂತ್ರಣಕ್ಕೆ ಸೇವಾ ಭಾರತಿ, ಕೋವಿಡ್ ಪಡೆ ಸಂಯುಕ್ತವಾಗಿ ಆರಂಭಿಸಿರುವ ಟೆಲಿ ಮೆಡಿಸಿನ್ ಕೇಂದ್ರದ ಬ್ರೋಚರ್ ನ್ನು ಮಂಗಳವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಈಗಾಗಲೇ ಮೆಗ್ಗಾನ್ ಆಸ್ಪತ್ರೆಯಲ್ಲಿ ಆಮ್ಲಜನಕ ಘಟಕ ಕಾರ್ಯನಿರ್ವಹಿಸುತ್ತಿದೆ. ಇದರ ಜತೆಗೆ ಭದ್ರಾವತಿಯಲ್ಲಿರುವ ಘಟಕವೂ ಸಕ್ರಿಯವಾದರೆ ಜಿಲ್ಲೆಗೆ ಬೇಕಾಗುವಷ್ಟು ಆಮ್ಲಜನಕವನ್ನು ಇಲ್ಲಿಯೇ ಉತ್ಪಾದನೆ ಮಾಡಬಹುದಾಗಿದೆ. ಭದ್ರಾವತಿ ಘಟಕ ಆರಂಭಕ್ಕೆ ಸರ್ಕಾರದಿಂದ ಎಲ್ಲಾ ನೆರವು ಕೊಡಿಸಲಾಗುತ್ತದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಸಮಸ್ಯೆ ಬಗೆ ಹರಿಯುತ್ತದೆ ಎಂದರು.
ಕೋವಿಡ್ ನಿಯಂತ್ರಣ ಕೇವಲ ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ. ಸ್ವಯಂ ಸೇವಾ ಸಂಸ್ಥೆಗಳು ಕೈ ಜೋಡಿಸಿದಾಗ ಸೋಂಕು ನಿಯಂತ್ರಣ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಸೇವಾ ಭಾರತಿ, ಕೋವಿಡ್ ಸುರûಾ ಪಡೆ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಔಷಧ ವ್ಯಾಪಾರಿಗಳ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಮುಂದೆ ಬಂದಿರುವುದು ಶ್ಲಾಘನೀಯ ಎಂದು ಹೇಳಿದರು.
ಮೆಗ್ಗಾನ್ ಆಸ್ಪತ್ರೆ ಮುಂಭಾಗದಲ್ಲಿಯೇ ಟೆಂಟ್ ಹಾಕಿ ಸ್ವಯಂ ಸೇವಕರು ಕೆಲಸ ಮಾಡಲಿದ್ದಾರೆ. ರೋಗಿಗಳಿಗೆ ಹಾಗೂ ಅವರ ನೋಡಿಕೊಳ್ಳಲು ಬಂದವರಿಗೆ ಊಟ, ಮೆಡಿಸಿನ್ ಹಾಗೂ ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ಬೆಡ್‌ಗಳಿಗೆ ಸಮಸ್ಯೆಯಾಗದಂತೆ ನೋಡಿ ಕೊಳ್ಳಲಾಗುತ್ತದೆ. ಕೋವಿಡ್ ನಿಯಂತ್ರಣಕ್ಕೆ ಶಕ್ತಿ ಮೀರಿ ಯತ್ನ ಮಾಡಲಾಗುತ್ತದೆ ಎಂದರು.
ಟೆಲಿ ಮೆಡಿಸಿನ್ ಕೇಂದ್ರ ಉದ್ಘಾಟಿಸಿದ ಡಾ| ಎಂ. ಶ್ರೀಕಾಂತ್ ಹೆಗ್ಡೆ ಮಾತನಾಡಿ, ಕೋವಿಡ್ ಸೋಂಕಿತ ಎಲ್ಲರಿಗೂ ಆಸ್ಪತ್ರೆಯ ಅಗತ್ಯ ಇರುವುದಿಲ್ಲ. ಪಾಸಿಟಿವ್ ಬಂದಿದೆ ಎಂದಾಕ್ಷಣ ಭಯ ಪಟ್ಟುಕೊಳ್ಳುವವರೇ ಹೆಚ್ಚು. ಇದರಿಂದಾಗಿಯೂ ಪರಿಸ್ಥಿತಿ ಉಲ್ಬಣವಾಗುತ್ತಿದೆ. ಇದಕ್ಕೆ ಅವಕಾಶ ನೀಡದೆ ಧೈರ್ಯದಿಂದ ಎದುರಿಸುವಂತಾಗಬೇಕೆಂದು ಹೇಳಿದರು.
ಸೋಂಕಿತ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಹೋಗಬಾರದು. ಮನೆಯಲ್ಲಿಯೇ ಇದ್ದು, ಸೂಚಿತ ಔಷಧ, ಮಾತ್ರೆಗಳನ್ನು ತೆಗೆದುಕೊಳ್ಳಬೇಕು. ಗುಣಮಟ್ಟದ ಆಹಾರ ಸೇವಿಸಬೇಕು. ಕೊರೊನಾ ಮೇ ತಿಂಗಳು ಪೂರ್ತಿ ಉಲ್ಬಣ ಸ್ಥಿತಿಯಲ್ಲಿರುತ್ತದೆ ಎಂಬುದನ್ನು ಈಗಾಗಲೇ ತಜ್ಞರು ಹೇಳಿದ್ದಾರೆ.
ಹೀಗಾಗಿ ಜಾಗೃತಿ, ನಿಯಮ ಪಾಲನೆ ನಿಯಂತ್ರಣಕ್ಕೆ ಅತೀ ಮುಖ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಸೇವಾ ಭಾರತಿ ಅಧ್ಯಕ್ಷ ಡಾ| ರವಿ ಕಿರಣ್, ಐಎಂಎ ಅಧ್ಯಕ್ಷ ಡಾ| ಪರಮೇಶ್ವರ್, ಕೋವಿಡ್ ಸುರûಾ ಪಡೆಯ ಡಿ.ಎಸ್. ಅರುಣ್, ರಾಷ್ಟಿಯ ಸ್ವಯಂಸೇವಕ ಸಂಘದ ದಕ್ಷಿಣ ಪ್ರಾಂತ್ಯ ಸಹಕಾರ್ಯವಾಹ ಪಟ್ಟಾಭಿರಾಮ್, ಕೈಗಾರಿಕಾ ಸಂಘದ ಅಧ್ಯಕ್ಷ ಜೆ.ಆರ್. ವಾಸುದೇವ, ಡಾ| ಧನಂಜಯ ಸರ್ಜಿ, ಡಾ| ಶಂಭುಲಿಂಗ, ಡಾ| ಮಮತಾ, ಡಾ|ಪೃಥ್ವಿ ಮತ್ತಿತರರು ಇದ್ದರು.