ಶಿವಮೊಗ್ಗ: ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಕನಿಷ್ಠ 600 ಕ್ಕೂ ಹೆಚ್ಚು ವೆಂಟಿಲೇಟರ್‌ಗಳನ್ನು ತಕ್ಷಣವೇ ಒದಗಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್. ಎಸ್.ಸುಂದರೇಶ್ ಆಗ್ರಹಿಸಿದರು. ಸೋಮವಾರ ಕಾಂಗ್ರೆಸ್ ಕಚೇರಿಯಲ್ಲಿ ಕೋವಿಡ್ ನಿಯಂತ್ರಣ ಸಹಾಯವಾಣಿ ಕೊಠಡಿಗೆ ಚಾಲನೆ ನೀಡಿ, ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 2ನೇ ಹಂತದ ಕೊರೊನಾ ಏರುಗತಿಯಲ್ಲಿ ಸಾಗಿದೆ. ಇದನ್ನು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಮೆಗ್ಗಾನ್ ಆಸ್ಪತ್ರೆ ಸೇರಿದಂತೆ ಎಲ್ಲಾ ಆಸ್ಪತ್ರೆಗಳಲ್ಲೂ ಸೌಲಭ್ಯಗಳ ಕೊರತೆಯಿದೆ. ಬಹಳ ಮುಖ್ಯವಾಗಿ ವೆಂಟಿಲೇಟರ್‌ಗಳ ಕೊರತೆಯಿದ್ದು, ಈಗಿರುವ ಅಂಕಿಅಂಶದ ಪ್ರಕಾರ ಕೇವಲ 30 ರಿಂದ 40 ವೆಂಟಿಲೇಟರ್‌ಗಳು ಇರಬಹುದು ಎಂದರು.
ಈ ಕಾರಣದಿಂದ ರೋಗಿಗಳು ಹೆಚ್ಚು ಮೃತಪಡುತ್ತಿದ್ದಾರೆ. ನಿನ್ನೆ ಒಂದೇ ದಿನ 12 ಜನ ಮೃತಪಟ್ಟಿರುವುದಕ್ಕೆ ಇದು ಸಾಕ್ಷಿ ಎಂದ ಅವರು, ಜಿಲ್ಲೆಯಲ್ಲಿ ಕನಿಷ್ಠ ಪಕ್ಷ 600 ವೆಂಟಿಲೇಟರ್ ಗಳನ್ನಾದರೂ ಅಳವಡಿಸಬೇಕಾದ ಅವಶ್ಯಕತೆ ಇದೆ. ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಸಚಿವ ಕೆ.ಎಸ್. ಈಶ್ವರಪ್ಪ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ವೆಂಟಿಲೇಟರ್ ಸಿಗದೆ ಮೃತಪಟ್ಟ ಎಲ್ಲರ ಸಾವಿಗೂ ಇವರೇ ಹೊಣೆಗಾರರು ಎಂದರು.
ಸರ್ಕಾರ ವಿಳಂಬ ಮಾಡದೆ ನಗರದಲ್ಲಿರುವ ಸುಸಜ್ಜಿತ ಕಲ್ಯಾಣ ಮಂದಿರಗಳು, ಹೋಟೆಲ್ ಗಳನ್ನು ಈಗಲೇ ವಶಕ್ಕೆ ಪಡೆದು ಅಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಹಕಾರಿಯಾಗುವಂತೆ ತಾತ್ಕಾಲಿಕ ಆಸ್ಪತ್ರೆಗಳನ್ನಾಗಿ ಬದಲಾಯಿಸಲು ಕ್ರಮ ತೆಗೆದುಕೊಳ್ಳಬೇಕು. ಜೊತೆಗೆ ಕಳೆದ ಬಾರಿ ಆಶಾ ಕಾರ್ಯಕರ್ತರು ಸೇರಿದಂತೆ ಅನೇಕರಿಗೆ ತರಬೇತಿ ನೀಡಲಾಗಿತ್ತು. ಇವರನ್ನು ಮತ್ತೆ ಕೋವಿಡ್ ವಾರಿಯರ್ಸ್‌ರನ್ನಾಗಿ ನೇಮಕ ಮಾಡಿಕೊಳ್ಳಬೇಕು. ತಕ್ಷಣವೇ ಲಸಿಕೆಗಳನ್ನು ಪೂರೈಸಬೇಕು. ಆಮ್ಲಜನಕ ಅಗತ್ಯತೆಯನ್ನು ಈಗಿನಿಂದಲೇ ಸರಿಪಡಿಸಬೇಕು ಎಂದು ಆಗ್ರಹಿಸಿದರು. ಕರ್ಫ್ಯೂವನ್ನು 10 ಗಂಟೆಗೆ ಸೀಮಿತಗೊಳಿಸಿರುವುದರಿಂದ ಜನರ ಒತ್ತಡ ಹೆಚ್ಚಾಗುತ್ತಿದೆ. ಅದನ್ನು ಸ್ಪಲ್ವ ವಿಸ್ತರಿಸಿದರೆ ಜನ ಜಂಗುಳಿ ತಪ್ಪಿಸಬಹುದು ಎಂದರು.
ಬಿಜೆಪಿ ಅವಸಾನ: ಬಿಜೆಪಿ ಪಂಚರಾಜ್ಯದ ಚುನಾವಣೆಯಲ್ಲಿ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಇದು ಬಿಜೆಪಿಯ ಅವಸಾನ ಎಂದ ಅವರು, ಮಸ್ಕಿಯಲ್ಲಿ ನಾವು ಗೆದ್ದಿದ್ದೇವೆ. ಬಿಜೆಪಿಗೆ ಜನ ತಕ್ಕಪಾಠ ಕಲಿಸಿದ್ದಾರೆ. ಬಸವ ಕಲ್ಯಾಣದಲ್ಲಿ ಕಾಂಗ್ರೆಸ್ ಸೋತಿದೆ ನಿಜ. ಆದರೆ ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅತಿ ಕಡಿಮೆ ಅಂತರದಲ್ಲಿ ಸೋತಿದೆ. ಒಟ್ಟಾರೆ ಈ ಚುನಾವಣೆಯಿಂದ ಬಿಜೆಪಿಯಂತು ಪಾಠ ಕಲಿಯಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್, ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್, ಮುಖಂಡರಾದ ಡಾ| ಶ್ರೀನಿವಾಸ್ ಕರಿಯಣ್ಣ, ವಿಶ್ವನಾಥ್ ಕಾಶಿ, ಎಲ್.ರಾಮೇಗೌಡ, ನಾಗರಾಜ್, ಯಮುನಾ ರಂಗೇಗೌಡ, ಚಂದ್ರಭೂಪಾಲ್, ದೇವೇಂದ್ರಪ್ಪ, ಸುವರ್ಣ ನಾಗರಾಜ್, ಸೌಗಂ ಧಿಕ, ಸ್ಟೆಲಮಾರ್ಟಿನ್, ಎನ್.ಡಿ. ಪ್ರವೀಣ್ ಸೇರಿದಂತೆ ಹಲವರಿದ್ದರು.