Advertisement

ಸೇವಾ ಭಾರತಿಯಿಂದ ಕೋವಿಡ್‌ ಟೆಲಿಮೆಡಿಸಿನ್‌ ಕೇಂದ್ರ

11:00 PM May 04, 2021 | Shreeraj Acharya |

ಶಿವಮೊಗ್ಗ: ಸೇವಾ ಭಾರತಿ ಕರ್ನಾಟಕ ಕೋವಿಡ್‌ ಸುರûಾ ಪಡೆ ವತಿಯಿಂದ ವೈದ್ಯಕೀಯ ಮತ್ತು ಇತರೆ ಸೌಲಭ್ಯಗಳ ಬಗ್ಗೆ ಮಾಹಿತಿ ಮತ್ತು ಸೇವೆ ನೀಡುವ ಉದ್ದೇಶದಿಂದ ಶಿವಮೊಗ್ಗದ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಟೆಲಿಮೆಡಿಸಿನ್‌ ಕೇಂದ್ರ ಆರಂಭಿಸಲಾಗುತ್ತಿದೆ ಎಂದು ಸೇವಾ ಭಾರತೀ ಕರ್ನಾಟಕದ ಮುಖ್ಯಸ್ಥ ಡಾ| ರವಿಕಿರಣ್‌ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಕೋವಿಡ್‌ ಸೋಂಕು ಹೆಚ್ಚು ಜನರಲ್ಲಿ ಕಾಣಿಸಿಕೊಳ್ಳುವ ಬಗ್ಗೆ ತಜ್ಞರು ವರದಿ ನೀಡಿದ್ದು, ಇಂತಹ ಸಂದರ್ಭವನ್ನು ಸಮರ್ಥವಾಗಿ ಎದುರಿಸಬೇಕಾಗಿದೆ. ಈಗಾಗಲೇ ಶಿವಮೊಗ್ಗ ಜಿಲ್ಲಾಡಳಿತ ಉತ್ತಮ ಕ್ರಮ ಕೈಗೊಂಡಿದ್ದು, ಆದಾಗಿಯೂ ಸೋಂಕಿನ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ. ಜಿಲ್ಲಾಡಳಿತ ಮತ್ತು ವೈದ್ಯಕೀಯ ಸಿಬ್ಬಂದಿ ಹಾಗೂ ಇತರೆ ಸಿಬ್ಬಂದಿ ಮೇಲೆ ಅತೀವ ಒತ್ತಡ ಇರುವುದರಿಂದ ಸೇವಾ ಭಾರತಿ ಕರ್ನಾಟಕ ಐಎಂಎ, ಕೋವಿಡ್‌ ಸುರಕ್ಷಾ ಪಡೆ ಹಾಗೂ ನಗರದ ಹಲವಾರು ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಟೆಲಿಮೆಡಿಸನ್‌ ಕೇಂದ್ರ ಆರಂಭಿಸಲಾಗುತ್ತಿದೆ ಎಂದರು.

ಕೋವಿಡ್‌ ಸೋಂಕಿತರು ಮತ್ತು ಇತರೆ ಆರೋಗ್ಯದ ತೊಂದರೆ ಇರುವವರು ಅನಗತ್ಯವಾಗಿ ಆಸ್ಪತ್ರೆಗೆ ಬರುವುದನ್ನು ಮತ್ತು ಊಟ, ಉಪಾಹಾರಗಳಿಗೆ ಹೊರಗೆ ಬರುವುದನ್ನು ತಪ್ಪಿಸಿ ತನ್ಮೂಲಕ ಸೋಂಕು ಹರಡುವುದನ್ನು ತಪ್ಪಿಸುವ ಸಲುವಾಗಿ ಕೋವಿಡ್‌ ಟೆಸ್ಟ್‌ ಬಗ್ಗೆ ಮಾಹಿತಿ, ಆಹಾರ-ಔಷಧ  -ಆ್ಯಂಬುಲೆನ್ಸ್‌ ಸೇವೆ, ರಕ್ತ ಪರೀಕ್ಷೆ ಮನೆಬಾಗಿಲಿಗೆ, ಆರೈಕೆ ಕೇಂದ್ರಗಳ ಮಾಹಿತಿ, ನಗರದ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳ ಬೆಡ್‌ ಸೌಲಭ್ಯಗಳ ಮಾಹಿತಿ, ತಜ್ಞ ವೈದ್ಯರೊಂದಿಗೆ ಸಂವಾದ, ಲಾಡ್ಜ್ಗಳಲ್ಲಿ ಉಳಿದುಕೊಂಡು ಚಿಕಿತ್ಸೆ ಪಡೆಯುವವರಿಗೆ ಸಹಾಯ ಸೇರಿದಂತೆ ಹಲವಾರು ಸೇವೆಗಳನ್ನು ಕೇಂದ್ರದಿಂದ ಒದಗಿಸಲಾಗುವುದು ಎಂದರು.

ಸೋಂಕಿನ ಲಕ್ಷಣಗಳಿಲ್ಲದೆ ಕೋವಿಡ್‌ ಪಾಸಿಟಿವ್‌ ಆಗಿರುವ ವ್ಯಕ್ತಿಗಳು ಹೊರಗೆ ಓಡಾಡುತ್ತಿದ್ದು, ಅಂತಹವರಿಗೆ ಅಗತ್ಯ ನೆರವು ನೀಡಿ ಮನೆಯಲ್ಲೇ ಕ್ವಾರಂಟೈನ್‌ ಆಗಲು ಸಹಕಾರ ನೀಡಿ ರೋಗ ಹರಡುವುದನ್ನು ತಡೆಯುವ ಪ್ರಯತ್ನ ಮಾಡಬೇಕಾಗಿದೆ. ರಕ್ತದ ಕೊರತೆ ಉಂಟಾಗಬಾರದೆಂದು ಈಗಾಗಲೇ ಕೋವಿಡ್‌ ಸುರûಾ ಪಡೆಯಿಂದ 500 ಕ್ಕೂ ಹೆಚ್ಚು ಯುನಿಟ್‌ ರಕ್ತ ಸಂಗ್ರಹಿಸಲಾಗಿದ್ದು, ಜೂನ್‌ ಅಂತ್ಯದ ವೇಳೆಗೆ ಕನಿಷ್ಠ 3 ಸಾವಿರ ಯುನಿಟ್‌ ರಕ್ತ ಖರೀದಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.

ಆರ್‌.ಎಸ್‌.ಎಸ್‌. ಮುಖಂಡ ಪಟ್ಟಾಭಿರಾಮ್‌ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ಟೆಲಿ ಮೆಡಿಸನ್‌ ಕೇಂದ್ರ ಆರಂಭಿಸಲಾಗುತ್ತಿದ್ದು, ಮುಂದೆ ತಾಲೂಕು ಕೇಂದ್ರಗಳಲ್ಲಿ ಸಹ ಕೇಂದ್ರ ಆರಂಭಿಸುವ ಚಿಂತನೆಯಿದೆ. ಕೊರೋನಾ ತಡೆಗಟ್ಟಲು ಸರ್ಕಾರದ ನೆರವಿನೊಂದಿಗೆ ಉಚಿತ ಸೇವೆ ಒದಗಿಸಲು ಬದ್ಧರಾಗಿದ್ದೇವೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪ ಮಾತನಾಡಿ, ಆರ್‌ಎಸ್‌ಎಸ್‌ನ ಅಂಗ ಸಂಸ್ಥೆಯಾದ ಸೇವಾ ಭಾರತಿ ಕರ್ನಾಟಕ ಕೋವಿಡ್‌ ಸುರûಾ ಪಡೆಯು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಆರಂಭಿಸುತ್ತಿರುವ ಟೆಲಿಮೆಡಿಸನ್‌ ಕೇಂದ್ರದ ಉದ್ಘಾಟನೆ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿದ್ದು, ಡಾ| ಶ್ರೀಕಾಂತ್‌ ಹೆಗಡೆ, ಡಿ.ಎಚ್‌. ಶಂಕರಮೂರ್ತಿ, ಪಟ್ಟಾಭಿರಾಮ್‌ ಹಾಗೂ ತಾವು ಭಾಗವಹಿಸುತ್ತಿದ್ದೇವೆ. ಈ ಕೇಂದ್ರಕ್ಕೆ ಸರ್ಕಾರದಿಂದ ಎಲ್ಲಾ ನೆರವು ಒದಗಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಶಾಸಕ ಅಶೋಕ್‌ನಾಯ್ಕ, ಕೆ.ಈ. ಕಾಂತೇಶ್‌, ಡಿ.ಎಸ್‌.ಅರುಣ್‌, ಸು ಧೀಂದ್ರ, ಎಸ್‌.ಎಸ್‌. ಜ್ಯೋತಿಪ್ರಕಾಶ್‌, ರುದ್ರೇಶ್‌, ವಾಸುದೇವ್‌ ಇನ್ನಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next