Advertisement

ಕುವಿವಿಯಿಂದ ಕೊರತೆ ಬಜೆಟ್‌ ಮಂಡನೆ 

10:38 AM Feb 20, 2019 | |

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸಭಾಂಗಣದಲ್ಲಿ ಮಂಗಳವಾರ ನಡೆದ ವಿದ್ಯಾ ವಿಷಯಕ ಪರಿಷತ್‌ನ ಸಾಮಾನ್ಯ ಸಭೆಯಲ್ಲಿ ಹಣಕಾಸು ಅಧಿಕಾರಿ ಪ್ರೊ| ಹಿರೇಮಣಿ ನಾಯಕ್‌ ಪ್ರಸಕ್ತ (2019-20) ಸಾಲಿನ 11.65 (1165.97 ಲಕ್ಷ) ಕೋಟಿ ರೂ. ಕೊರತೆಯ ಬಜೆಟ್‌ ಮಂಡಿಸಿದರು.

Advertisement

ಒಟ್ಟಾರೆ ಸ್ವೀಕೃತಿಗಳಿಂದ 132.69 (13269.36 ಲಕ್ಷ) ಕೋಟಿ ರೂ. ನಿರೀಕ್ಷಿಸಲಾಗಿದ್ದು, ವೆಚ್ಚಗಳಿಗಾಗಿ 144.35 (14435.33 ಲಕ್ಷ) ಕೋಟಿ ರೂ. ನಿಗದಿಗೊಳಿಸಲಾಗಿದೆ ಎಂದರು. ಶೈಕ್ಷಣಿಕ ವೆಚ್ಚಗಳಿಗೆ 47.48 ಕೋಟಿ ರೂ., ಆಡಳಿತಾತ್ಮಕ ವೆಚ್ಚಗಳಿಗೆ 41.67 ಕೋಟಿ ರೂ., ಪರೀûಾ ವೆಚ್ಚಗಳಿಗಾಗಿ 13 ಕೋಟಿ ರೂ., ದೂರ ಶಿಕ್ಷಣ ನಿರ್ದೇಶನಾಲಯದ ವೆಚ್ಚಗಳಿಗೆ 9 ಕೋಟಿ ರೂ., ಅಭಿವೃದ್ಧಿ ಕಾಮಗಾರಿಗಳಿಗೆ 16.31 ಕೋಟಿ ರೂ., ವಿದ್ಯಾರ್ಥಿ ಬೆಂಬಲ ಸೇವೆಗಳಿಗಾಗಿ 4.76 ಕೋಟಿ ರೂ., ಮತ್ತು ಯುಜಿಸಿ, ಭಾರತ ಸರ್ಕಾರದ ಅನುದಾನಗಳ ಅಡಿಯಲ್ಲಿ 12.11 ಕೋಟಿ ರೂ. ವೆಚ್ಚ ಮಾಡಲು ವಿಶ್ವವಿದ್ಯಾಲಯ ಉದ್ದೇಶಿಸಿದೆ ಎಂದು ತಿಳಿಸಿದರು.

2018-19ನೇ ಸಾಲಿನಲ್ಲಿ 150.75 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದ್ದು, 2018ರ ಜನವರಿ ತಿಂಗಳ ಹೊತ್ತಿಗೆ ಸರ್ಕಾರದಿಂದ ವೇತನ ಮತ್ತು ಅಭಿವೃದ್ಧಿ ಅನುದಾನಗಳಿಗೆ 39.51 ಕೋಟಿ ರೂ., ಆಂತರಿಕ ಸಂಪನ್ಮೂಲಗಳಿಂದ 45.96 ಕೋಟಿ ರೂ., ಯುಜಿಸಿ ಮತ್ತು ಇತರೆ ಸ್ವೀಕೃತಿಗಳಿಂದ 4.04 ಕೋಟಿ ರೂ., ಸೇರಿದಂತೆ ಒಟ್ಟು 128.42 ಕೋಟಿ ರೂ. ಸ್ವೀಕೃತಿಯಾಗಿರುತ್ತದೆ ಎಂದು ತಿಳಿಸಿದರು.

 2018-19ನೇ ಸಾಲಿನಲ್ಲಿ ವೆಚ್ಚಗಳಿಗೆ 153.76 ಕೋಟಿ ರೂ.ಗಳನ್ನು ಆಯವ್ಯಯದಲ್ಲಿ ನಿಗದಿಗೊಳಿಸಲಾಗಿದ್ದು, 2018ರ ಜನವರಿ ತಿಂಗಳ ಹೊತ್ತಿಗೆ ಅಭಿವೃದ್ಧಿ ಕಾಮಗಾರಿಗಳಿಗೆ 4.11 ಕೋಟಿ ರೂ., ಶೈಕ್ಷಣಿಕ ವೆಚ್ಚಗಳಿಗೆ 35.86 ಕೋಟಿ ರೂ., ಆಡಳಿತಾತ್ಮಕ ವೆಚ್ಚಗಳಿಗೆ 32.30 ಕೋಟಿ ರೂ.,n ವಿದ್ಯಾರ್ಥಿ ಬೆಂಬಲ ಸೇವೆಗಳಿಗೆ 3.90 ಕೋಟಿ ರೂ., ಪರೀಕ್ಷಾ ವೆಚ್ಚಗಳಿಗೆ 11.66 ಕೋಟಿ ರೂ. ಮತ್ತು ದೂರ ಶಿಕ್ಷಣಕ್ಕೆ 1.90 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕುಲಪತಿ ಪ್ರೊ| ಜೋಗನ್‌ ಶಂಕರ್‌, ವಿಶ್ವವಿದ್ಯಾಲಯ ಬೋಧನೆ ಮತ್ತು ಸಂಶೋಧನೆಗೆ ಪೂರಕ ವಾತಾವರಣ ಕಲ್ಪಿಸಲು ಬದ್ಧವಾಗಿದೆ. ಕೇಂದ್ರ ಸರ್ಕಾರ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಸಂಶೋಧನೆಯ ರ್‍ಯಾಂಕಿಂಗ್‌ನಲ್ಲಿ ಕುವೆಂಪು ವಿವಿ ಇಡೀ ರಾಜ್ಯದಲ್ಲಿಯೇ ಅಗ್ರಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಶೋಧನೆ ಮತ್ತು ಆವಿಷ್ಕಾರಕ್ಕಾಗಿ ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು ಮತ್ತು ಅಧ್ಯಾಪಕರಿಗೆ ಪೂರಕವಾದ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

Advertisement

ಸಾಮಾನ್ಯವಾಗಿ ಮಾರ್ಚ್‌ ತಿಂಗಳಲ್ಲಿ ಬಜೆಟ್‌ ಮಂಡಿಸುವುದು ವಾಡಿಕೆ. ಆದರೆ, ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಇರುವುದರಿಂದ ಫೆಬ್ರವರಿ ತಿಂಗಳಲ್ಲಿಯೇ ಈ ವರ್ಷದ ಆಯವ್ಯಯ ಮಂಡಿಸಲಾಗುತ್ತಿದೆ ಎಂದು ಕುಲಸಚಿವ ಪ್ರೊ| ಎಚ್‌ ಎಸ್‌ ಭೋಜ್ಯಾನಾಯ್ಕ ಸಭೆಗೆ ತಿಳಿಸಿದರು.

ಪರೀಕ್ಷಾಂಗ  ಕುಲಸಚಿವ ಪ್ರೊ| ರಾಜಾ ನಾಯಕ, ವಿವಿಧ ನಿಕಾಯಗಳ ಡೀನರು, ನಾಮನಿರ್ದೇಶಿತ ಸದಸ್ಯರು ಸದಸ್ಯರು, ಮತ್ತು ವಿಶ್ವವಿದ್ಯಾಲಯದ ಅಧಿಕಾರಿಗಳು ಉಪಸ್ಥಿತರಿದ್ದರು.

ರ್‍ಯಾಂಕ್‌ ವಿಜೇತರಿಗೆ ಶುಲ್ಕ ವಿನಾಯಿತಿ
2019-20ನೇ ಸಾಲಿನಿಂದ ಮೊದಲ ರ್‍ಯಾಂಕ್‌ ವಿಜೇತ ವಿದ್ಯಾರ್ಥಿಗಳು, ಸಫಾಯಿ ಕರ್ಮಚಾರಿಗಳ ಮಕ್ಕಳು, ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು, ತೃತೀಯ ಲಿಂಗಿಗಳು ಮತ್ತು ಹುತಾತ್ಮ ಸೈನಿಕರ ಮಕ್ಕಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ ನೀಡಲು ಉದ್ದೇಶಿಸಲಾಗಿದೆ ಎಂದು ಪ್ರೊ| ಹಿರೇಮಣಿ ನಾಯಕ್‌ ತಿಳಿಸಿದರು.

ಸಹ್ಯಾದ್ರಿ ವಾಣಿಜ್ಯ ಕಾಲೇಜಿಗೆ ಹೊಸ ಕಟ್ಟಡ
ಮಲೆನಾಡಿನ ಪ್ರತಿಷ್ಠಿತ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಹೊಸ ಕಟ್ಟಡದ ಕಾಮಗಾರಿಯನ್ನು ಮುಂದಿನ ಆರ್ಥಿಕ ವರ್ಷದಲ್ಲಿ ಪ್ರಾರಂಭಿಸಲಾಗುವುದು ಎಂದು ಕುಲಸಚಿವ ಪ್ರೊ| ಎಚ್‌.ಎಸ್‌. ಭೋಜ್ಯಾನಾಯ್ಕ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next