ಶಿವಮೊಗ್ಗ: ಶಿವಮೊಗ್ಗ ಗ್ರಾಮಾಂತರ ಶಿಷ್ಯಮಂಡಳಿ ಶನಿವಾರ ತರಳಬಾಳು ಮಠದ ಹಿರಿಯ ಶ್ರೀಗಳಿಗೆ ಭಕ್ತಿ ಸಮರ್ಪಿಸಿತು.
ತಾಲೂಕಿನ ದೇವಕಾತಿಕೊಪ್ಪದಲ್ಲಿ ಗ್ರಾಮಾಂತರ ಶಿಷ್ಯ ಮಂಡಳಿ ಆಯೋಜಿಸಿದ್ದ ತರಳಬಾಳು ಜಗದ್ಗುರು ಲಿಂಗೈಕ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ 27ನೇ ಶ್ರದ್ಧಾಂಜಲಿ ಸಮಾರಂಭದ ದಾಸೋಹ ಮತ್ತು ಭಕ್ತಿ ಸಮರ್ಪಣೆ- ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಸಿರಿಗೆರೆ ಬ್ರಹನ್ಮಠದ ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಉದ್ಘಾಟಿಸಿ ಸಾನ್ನಿಧ್ಯ ವಹಿಸಿದ್ದರು.
ಶಾಸಕ ಕೆ.ಬಿ. ಅಶೋಕ್ ನಾಯ್ಕ ಮಾತನಾಡಿ, ಶಿವಮೊಗ್ಗ ಗ್ರಾಮಾಂತರ ವೀರಶೈವ ಸಮಾಜದ ಈ ಕಾರ್ಯ ಶ್ಲಾಘನೀಯ. ಗ್ರಾಮಾಂತರ ಭಾಗದ ಏತ ನೀರಾವರಿ ಯೋಜನೆಗಳಿಗೆ ಅನುಮೋದನೆ ದೊರೆತಿದ್ದು, ಆದಷ್ಟು ಬೇಗನೆ ಈ ಕಾಮಗಾರಿಗಳನ್ನು ಆರಂಭಿಸಲಾಗುತ್ತದೆ. ನಂತರ ಈ ಜನ ನೀರಿನ ಸೌಭಾಗ್ಯವನ್ನು ಪಡೆಯಬಹುದಾಗಿದೆ ಎಂದರು.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಬಸವರಾಜಪ್ಪ ಮಾತನಾಡಿ, ಮಲೆನಾಡು ಅಥವಾ ಹಂಕಲು ಅಲ್ಲದ ಈ ಭೂಮಿಗೆ ನೀರಾವರಿಯ ಯೋಜನೆಗಳ ಅಗತ್ಯವಿದೆ. ಶ್ರೀಗಳು ಸರ್ಕಾರದ ಮಟ್ಟದಿಂದ ಈ ಕಾರ್ಯಕ್ಕೆ ಸೂಚನೆ ನೀಡಬೇಕೆಂದು ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮಾಂತರ ತರಳಬಾಳು ಸೇವಾ ಸಮಿತಿ ಅಧ್ಯಕ್ಷ ಎಸ್. ತೀರ್ಥಪ್ಪ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಇಂದೂಮತಿ ಸಾಲಿಮs್, ಸುಮತಿ ಜಯಪ್ಪ, ಕಾರ್ಯದರ್ಶಿ ಕೆ.ಬಿ. ಚಂದ್ರಶೇಖರಪ್ಪ, ಗ್ರಾಮಾಂತರ ವೀರಶೈವ ಸಮಾಜದ ಅಧ್ಯಕ್ಷ ಎಸ್.ಎಂ. ಲೋಕೇಶಪ್ಪ, ಖಜಾಂಚಿ ಡಿ.ಬಿ. ವಿಜಯ್‌ಕುಮಾರ್, ಉಪಾಧ್ಯಕ್ಷ ಉಮೇಶ್ ಹಾಗೂ ಇತರರು ಇದ್ದರು. ಕಾರ್ಯಕ್ರಮಕ್ಕೆ ಮಾಜಿ ಶಾಸಕಿ ಶಾರದಾ ಪೂರ್ಯಾನಾಯ್ಕ ಅವರು ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದು ಕಾರ್ಯಕ್ರಮಕ್ಕೆ ಶುಭ ಕೋರಿದರು.