ಕುಂದಗೋಳ: ಹಲ್ಲೆ ಪ್ರಕರಣದಿಂದ ತಾಲೂಕಿನ ಕಳಸ ಗ್ರಾಮ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ಶಾಸಕ ಸಿ.ಎಸ್. ಶಿವಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಉಭಯ ಕೋಮಿನ ಮುಖಂಡರೊಂದಿಗೆ ಚರ್ಚಿಸಿದರು. ಎಲ್ಲರೂ ಸೇರಿ ಸಮಸ್ಯೆ ಬಗೆಹರಿಸಿಕೊಂಡು ಒಂದಾಗಿ ಬಾಳ್ಳೋಣ ಎಂದು ಕರೆ ನೀಡಿದರು.
ಮಹಿಳೆಯರ ಅಳಲು: ಗ್ರಾಮದ ಮಲಕಾರಿ ದರ್ಗಾಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ಶಾಂತಿ ನೆಲೆಸಲು ಪ್ರಾರ್ಥಿಸಿದರು. ಅಲ್ಲಿ ಮುಸ್ಲಿಂಮಹಿಳೆಯರು ಶಾಸಕರನ್ನು ಭೇಟಿಯಾಗಿ ಅಳಲು ತೋಡಿಕೊಮಡರು. ನಮ್ಮ ಮನೆಯಲ್ಲಿ ಗಂಡಸರು ಇಲ್ಲದಂತಾಗಿದೆ. ನಮಗೆ ತುಂಬಾ ತೊಂದರೆಯಾಗಿದೆ.
ವೈಯಕ್ತಿಕ ಹಿತಾಸಕ್ತಿ ಮಾಡಿದ ಇಬ್ಬರ ಮೇಲೆ ಕ್ರಮ ಕೈಗೊಳ್ಳಿ. ತಮಗೆ ತೊಂದರೆ ನೀಡಬೇಡಿ. ನಾವು ಸಾಮರಸ್ಯದಿಂದ ಬಾಳುತ್ತೇವೆ ಎಂದು ಹೇಳಿದರು. ನಂತರ ಶಾಸಕರು ರಾಮನಗೌಡ ಪಾಟೀಲ ಅವರ ಮನೆಯಲ್ಲಿ ಹಿರಿಯರ ಮತ್ತು ಯುವಕರ ಜೊತೆ ಸಮಸ್ಯೆ ಬಗ್ಗೆ ಸಮಾಲೋಚಿಸಿದರು. ಹಲ್ಲೆಗೊಳಗಾದ ಪ್ರವೀಣ ಕಳಸೂರ ಅವರ ದೊಡ್ಡಪ್ಪ ಮಹಾಂತಪ್ಪ ಕಳಸೂರ ಮಾತನಾಡಿ, ಅನೇಕ ಬಾರಿ ಶಾಂತಿ ಸಭೆ ಮಾಡಿದ್ದಾರೆ.
ಆದರೂ ಈ ರೀತಿ ಘಟನೆ ನಡೆದಿರುವುದು ಖೇದಕರ. ಅವರ ಮಕ್ಕಳು ದಾಂಧಲೆ ಮಾಡುವಾಗ ಅವರ ಹಿರಿಯರು ಏಕೆ ಹೇಳಲಿಲ್ಲ. ಅವರು ಮಾಡಿರುವ ಕೃತ್ಯ ಅತಿರೇಖವಾಗಿದೆ. ಏನು ಮಾಡುತ್ತೀರೋ ನೀವೇ ಸರಿ ಮಾಡಿ ಎಂದು ಶಾಸಕರಿಗೆ ಹಾಗೂ ಸಿಪಿಐಗೆ ಹೆಳಿದರು.
ಶಾಸಕ ಸಿ.ಎಸ್. ಶಿವಳ್ಳಿ ಮಾತನಾಡಿ, ಎಲ್ಲಿಯದೋ ಸಮಸ್ಯೆ ತಂದು ಊರಿನ ಸಮಾಜದ ಸ್ಥಾಸ್ಥ ಹಾಳು ಮಾಡುತ್ತಿದ್ದಾರೆ. ಇದಕ್ಕೆ ಎರಡೂ ಸಮಾಜದವರು ಆಸ್ಪದ ಕೊಡದೆ ಎಲ್ಲರೂ ಅಣ್ಣ ತಮ್ಮಂದಿರಂತೆ ಬದುಕಬೇಕು ಎಂದರು. ನಿರಪರಾಧಿಗಳಿಗೆ ಹಾಗೂ ಮಹಿಳೆಯರಿಗೆ ತೊಂದರೆಯಾಗದ ರೀತಿ ಕ್ರಮ ಜರುಗಿಸಿ ಎಂದು ಸಿಪಿಐ ವೆಂಕಟಸ್ವಾಮಿ ಅವರಿಗೆ ಹೇಳಿದರು.
ರಾಮನಗೌಡ ಪಾಟೀಲ, ರಾಮಣ್ಣ ಪೂಜಾರ, ಬೀರಪ್ಪ ಕುರಬರ, ಇರ್ಷಾದಹ್ಮದ ಹೂಲಗೂರ, ಅಜೀಜ ಕ್ಯಾಲಕೊಂಡ, ಇಬ್ರಾಹಿಂ ಮೀರಾನವರ, ಫಕ್ಕಿರೇಶ ಕೇಳಗಿನಮನಿ, ಎಮ್.ಎಸ್. ಲಾಟಿ, ಯಲ್ಲಪ್ಪ ಹೊಸಮನಿ ಮುಂತಾದವರಿದ್ದರು.