Advertisement

ಹೊಸ ಸವಾಲಿನ ಹಾದಿಯಲ್ಲಿ ಶಿವಲಿಂಗೇಗೌಡ ಹೆಜ್ಜೆ

11:29 PM Apr 02, 2023 | Team Udayavani |

ಹಾಸನ: ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್‌ನ ಎರಡು ದಶಕಗಳ ರಾಜಕೀಯ ಸಂಬಂಧಕ್ಕೆ ವಿದಾಯ ಹೇಳಿದ್ದಾರೆ. ಇನ್ನು ಮುಂದೆ ಕಾಂಗ್ರೆಸ್‌ನಲ್ಲಿ ಹೊಸ ರಾಜಕೀಯ ಇನ್ನಿಂಗ್ಸ್‌ ಆರಂಭಿಸಲು ಸಜ್ಜಾಗಿರುವ ಶಿವಲಿಂಗೇಗೌಡ ಅವರು ಹಾಸನ ಜಿಲ್ಲೆಯ ರಾಜಕಾರಣದಲ್ಲಿ ಬಹುದೊಡ್ಡ ರಾಜಕೀಯ ಸವಾಲನ್ನೂ ಎದುರು ಹಾಕಿಕೊಂಡಿದ್ದಾರೆ.

Advertisement

ಜೆಡಿಎಸ್‌ನಲ್ಲಿ ಜಿಲ್ಲಾ ಪಂಚಾಯತಿ ಸದಸ್ಯನಾಗಿ ಸಕ್ರಿಯ ರಾಜಕಾರಣ ಆರಂಭಿಸಿದ್ದ ಶಿವಲಿಂಗೇಗೌಡ ಅವರು, ಇದುವರೆಗೆ ನಾಲ್ಕು ವಿಧಾನಸಭಾ ಚುನಾವಣೆಗಳನ್ನು ಜೆಡಿಎಸ್‌ನಿಂದಲೇ ಎದುರಿಸಿದ್ದರು. ಗಂಡಸಿ ವಿಧಾನಸಭಾ ಕ್ಷೇತ್ರದ ಕೊನೆಯ ಚುನಾವಣೆಯಲ್ಲಿ ಹಿರಿಯ ಕಾಂಗ್ರೆಸ್‌ ನಾಯಕ ಬಿ.ಶಿವರಾಮು ಅವರೆದುರು 18 ಮತಗಳ ಅಂತರದಿಂದ ಮೊದಲ ಸೋಲು ಕಂಡರೂ ಆನಂತರ ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಶಿವರಾಮು ಅವರನ್ನೂ ಸೋಲಿಸಿದ್ದವರು.

ಕ್ಷೇತ್ರಗಳ ಪುನರ್ವಿಂಗಡಣೆಯಲ್ಲಿ ಗಂಡಸಿ ವಿಧಾನಸಭಾ ಕ್ಷೇತ್ರ ಹರಿದು ಹಂಚಿಹೋದ ನಂತರ ಅರಸೀಕೆರೆ ವಿಧಾನಸಭಾ ಕ್ಷೇತ್ರವನ್ನು 2008ರಿಂದ ಸತತ ಮೂರು ಬಾರಿ ಜೆಡಿಎಸ್‌ನಿಂದ ಪ್ರತಿನಿಧಿಸಿ ಆ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಗೆಲುವಿನ ದಾಖಲೆಯನ್ನೂ ನಿರ್ಮಿಸಿದ್ದಾರೆ.

ಅರಸೀಕೆರೆ ತಾಲೂಕು, ಗಂಡಸಿ ಹೋಬಳಿ, ಕುಡುಕುಂದಿ ಗ್ರಾಮದ ಕೃಷಿಕ ಕುಟುಂಬದ ಶಿವಲಿಂಗೇಗೌಡ ಪದವೀಧರ. ವೃತ್ತಿಯಲ್ಲಿ ಗುತ್ತಿಗೆದಾರನಾಗಿ ಆರ್ಥಿಕ ಶಕ್ತಿ ರೂಢಿಸಿಕೊಳ್ಳುತ್ತಲೇ ರಾಜಕೀಯದಲ್ಲಿ ಗಟ್ಟಿ ನೆಲೆ ಸೃಷ್ಟಿಸಿಕೊಂಡಿರುವ ಶಿವಲಿಂಗೇಗೌಡ ಅವರು ತಮ್ಮ ಗ್ರಾಮೀಣ ಭಾಷಾ ಸೊಗಡಿನಿಂದಲೇ ರಾಜ್ಯದ ಗಮನ ಸೆಳೆದ ರಾಜಕಾರಣಿ. ಹಾಗೆಯೇ ಮಹತ್ವಾಕಾಂಕ್ಷಿಯೂ ಕೂಡ.

ಎಚ್‌.ಡಿ.ದೇವೇಗೌಡರ ಕಟ್ಟಾ ಅಭಿಮಾನಿಯಾಗಿ, ಅವರ ಕುಟುಂಬದ ಆಪ್ತನಾಗಿಯೇ ರಾಜಕಾರಣ ಮಾಡಿಕೊಂಡು ಬರುತ್ತಿದ್ದ ಶಿವಲಿಂಗೇಗೌಡರಿಗೆ ದೇವೇಗೌಡರ ಕುಟುಂಬದವರು ರಾಜಕೀಯವಾಗಿಯಷ್ಟೇ ಅಲ್ಲ, ಅರಸೀಕೆರೆ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರೋತ್ಸಾಹಿಸುತ್ತಲೇ ಆರ್ಥಿಕವಾಗಿ ಬಲಾಡ್ಯರಾಗಲೂ ಸಹಕರಿಸುತ್ತಲೇ ಬಂದಿದ್ದರು. ಕುಟುಂಬದ ಸಂಬಂಧ ಸಖ್ಯ, ಪಕ್ಷವನ್ನು ಬಿಡುತ್ತಾರೆಂಬ ನಿರೀಕ್ಷೆಯೂ ದೇವೇಗೌಡರ ಕುಟುಂಬಕ್ಕಿರಲಿಲ್ಲ.

Advertisement

ಆದರೆ, ಮಹತ್ವಾಕಾಂಕ್ಷಿ ಶಿವಲಿಂಗೇಗೌಡ ಅವರು ಶಾಸಕ ಸ್ಥಾನಕ್ಕಿಂತಲೂ ಹೆಚ್ಚಿನದನ್ನು ನಿರೀಕ್ಷಿಸುತ್ತಲೇ ಇದ್ದ ಅವರು ಜೆಡಿಎಸ್‌ನಿಂದ ದಿಢೀರನೆ ಹೋಗುತ್ತಿಲ್ಲ. ಕಳೆದ ವಿಧಾನಸಭಾ ಚುನಾವಣೆ ಮತ್ತು ಆನಂತರದ ರಾಜಕೀಯ ಬೆಳವಣಿಗೆಗಳ ಸಂದರ್ಭದಲ್ಲಿಯೂ ಹೊರ ಹೋಗುವ ಸುಳಿವು ನೀಡಿದ್ದರು. ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಹಾಸನ ಜಿಲ್ಲೆಯ ಸ್ಥಾನವನ್ನು ಅರಸೀಕೆರೆ ಕ್ಷೇತ್ರಕ್ಕೇ ದಕ್ಕಿಸಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ ರೇವಣ್ಣ ಕುಟುಂಬದವರು ಡಾ.ಸೂರಜ್‌ಗೆ ಆ ಸ್ಥಾನವನ್ನು ಮೀಸಲಿರಿಸಿಕೊಂಡ ನಂತರ ಗೌಡರ ಕುಟುಂಬ, ಜೆಡಿಎಸ್‌ನಿಂದ ಅಂತರ ಕಾಯ್ದುಕೊಳ್ಳುತ್ತಲೇ ಹೋದ ಶಿವಲಿಂಗೇಗೌಡ ಈಗ ಅಂತಿಮವಾಗಿ ಜೆಡಿಎಸ್‌ ತೊರೆದಿದ್ದಾರೆ.

ಹಾಸನ ಜಿಲ್ಲೆಯಲ್ಲಿ ದೇವೇಗೌಡರ ಕುಟುಂಬವನ್ನು ಎದುರು ಹಾಕಿಕೊಂಡು ರಾಜಕಾರಣದಲ್ಲಿ ಯಶಸ್ವಿಯಾಗುವುದು ಕಷ್ಟ ಎಂಬ ಮಾತಿದೆ. ಕಾಕತಾಳೀಯವಾಗಿ ಮಾಜಿ ಶಾಸಕರಾದ ಗಂಡಸಿ ಕ್ಷೇತ್ರದ ಶಾಸಕರಾಗಿದ್ದ ಈ ನಂಜೇಗೌಡ, ಸಕಲೇಶಪುರ ಕ್ಷೇತ್ರದ ಮಾಜಿ ಶಾಸಕ ಎಚ್‌.ಎಂ.ವಿಶ್ವನಾಥ್‌, ಶ್ರವಣಬೆಳಗೊಳ ಕ್ಷೇತ್ರದ ಸಿ.ಎಸ್‌.ಪುಟ್ಟೇಗೌಡ, ಮಾಜಿ ಸಂಸದ ಎಚ್‌.ಕೆ.ಜವರೇಗೌಡ ಸೇರಿದಂತೆ ದೇವೇಗೌಡರ ಕುಟುಂಬದ ಸಂಬಂಧ ಕಡಿದುಕೊಂಡ ನಂತರ ರಾಜಕಾರಣದಲ್ಲಿ ಯಶಸ್ಸು ಸಾಧಿಸಲಾಗಲಿಲ್ಲ. ಬೇಲೂರಿನ ವೈ.ಎನ್‌.ರುದ್ರೇಶಗೌಡ ಅವರು ಮಾತ್ರ ಜೆಡಿಎಸ್‌ ಹೊರ ಹೋದ ನಂತರವೂ ಎರಡು ಬಾರಿ ಕಾಂಗ್ರೆಸ್‌ನಿಂದ ಶಾಸಕರಾಗಿದ್ದರು. ಶಿವಲಿಂಗೇಗೌಡ ಅವರೂ ಈಗ ದೇವೇಗೌಡರ ಕುಟುಂಬದ ಎದುರು ಹಾಕಿಕೊಂಡು ರಾಜಕಾರಣ ಬೇಕಾದ ಅನಿವಾರ್ಯ ರಾಜಕೀಯ ಸವಾಲನ್ನು ಎದುರು ಹಾಕಿಕೊಂಡಿದ್ದಾರೆ.

-ಎನ್‌. ನಂಜುಂಡೇಗೌಡ

Advertisement

Udayavani is now on Telegram. Click here to join our channel and stay updated with the latest news.

Next