ಕೊಳ್ಳೇಗಾಲ: ನಡೆದಾಡುವ ದೇವರು ಲಿಂಗೈಕ್ಯ ಡಾ.ಶಿವಕುಮಾರಸ್ವಾಮಿ ಅವರಿಗೆ ಭಾರತ ರತ್ನ ನೀಡುವುದಕ್ಕಿಂತ ಜನರು ನೀಡಿರುವ ವಿಶ್ವರತ್ನ ಪ್ರಶಸ್ತಿ ಶೇಷ್ಠ ಎಂದು ವಾಟಾಳು ಸೂರ್ಯಸಿಂಹಾಸನ ಮಠದ ಡಾ.ಸಿದ್ದಲಿಂಗಶಿವಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಲಿಂಗೈಕ್ಯ ಡಾ.ಶಿವಕುಮಾರಸ್ವಾಮಿ ಅವರ 115ನೇ ಜಯಂತ್ಯುತ್ಸವ ಅಂಗವಾಗಿ ಏರ್ಪಡಿಸಿದ್ದ ಗುರುವಂದನಾ ಮತ್ತು ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾಯಕವನ್ನು ನಂಬಿ ಬಾಲ್ಯದಿಂದಲೂ ಗುರುತಿಸಿಕೊಂಡ ಹಿನ್ನೆಲೆಯಲ್ಲಿ ಅವರ ಕಾರ್ಯವೈಖರಿ ಕಂಡು ಮಠಾಧ್ಯಕ್ಷರನ್ನಾಗಿ ಸಣ್ಣ ವಯಸ್ಸಿನಲ್ಲೇ ಆಯ್ಕೆಗೊಂಡ ಮಹಾಸ್ವಾಮೀಜಿ ಎಂದು ಲಿಂಗೈಕ್ಯ ಡಾ.ಶಿವಕುಮಾರಸ್ವಾಮಿ ಅವರ ಸ್ಮರಣೆ ಮಾಡಿದರು. ಜಯಂತ್ಯುತ್ಸವ ಸಾರ್ಥಕ: ಶಾಸಕ ಎನ್. ಮಹೇಶ್ ಮಾತನಾಡಿ, ಅನ್ನ ಮತ್ತು ಅಕ್ಷರ ದಾಸೋಹ ಮಾಡಿದ ಸ್ವಾಮೀಜಿಯ ಹೆಸರಿನಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡಿರುವುದು ಅರ್ಥಪೂರ್ಣ. ಪ್ರತಿ ಯೊಬ್ಬರು ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ನಡೆದಾಗ ಮಾತ್ರ 115ನೇ ಜಯಂತ್ಯುತ್ಸವ ಸಾರ್ಥಕವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಹಸಿವು ಮುಕ್ತ ಮಾಡಿದ ಮಹಾದಾಸೋಹಿ: ಡಾ.ಶಿವಕುಮಾರ ಸ್ವಾಮಿ ಅವರ ಭಾವಚಿತ್ರವನ್ನು ಅನಾವರಣ ಮಾಡಿದ ಮಾಜಿ ಶಾಸಕಿ ಪರಿಮಳಾ ನಾಗಪ್ಪ ಮಾತನಾಡಿ, ದಾಸೋಹಕ್ಕಾಗಿ ಶಿವಕುಮಾರಸ್ವಾಮಿ ಅವರು ಭಿಕ್ಷಾಟನೆ ಮಾಡಿ ತಂದ ಆಹಾರ ಧಾನ್ಯದಲ್ಲಿ ಮಠಕ್ಕೆ ಬಂದ ಎಲ್ಲಾ ಅತಿಥಿಗಳಿಗೆ ಉಣಬಡಿಸಿ, ಹಸಿವು ಮುಕ್ತ ಮಾಡಿದ ಮಹಾದಾಸೋಹಿ ಎಂದು ವರ್ಣನೆ ಮಾಡಿದರು.
ನಿಜವಾದ ಪವಾಡ ಪುರುಷ: ಜನರು ಪವಾಡ ಪುರುಷರನ್ನು ಕಂಡಿಲ್ಲ. ಆದರೆ, ಸಿದ್ಧಗಂಗಾ ಶ್ರೀಗಳ ಶ್ರಮದ ಫಲವಾಗಿ ಮಠದಲ್ಲಿ ನೀಡುತ್ತಿದ್ದ ದಾಸೋಹದಿಂದ ನಿಜವಾದ ಪವಾಡ ಪುರುಷನನ್ನು ಪ್ರತಿ ಯೊಬ್ಬರು ಶಿವಕುಮಾರಸ್ವಾಮಿ ಅವರಿಂದ ಕಂಡಂತೆ ಆಗಿದೆ ಎಂದು ಹೇಳಿದರು.
ಎಸ್ಪಿ ಶಿವಕುಮಾರ್ ಮಾತನಾಡಿ, ಡಾ.ಶಿವಕುಮಾರಸ್ವಾಮಿ ಅವರ 115ನೇ ಜಯಂತಿ ಅಂಗವಾಗಿ 115 ಜನರು ರಕ್ತದಾನ ಮಾಡಿ ಜೀವ ಉಳಿಸುವ ಕೆಲಸ ಮಾಡುತ್ತಿದ್ದು, ಇದೊಂದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಬೇಕು ಎಂದು ಹೇಳಿದರು.
ಲಿಂಗೈಕ್ಯ ಡಾ.ಶಿವಕುಮಾರಸ್ವಾಮಿ ಜಯಂತಿ ಅಂಗವಾಗಿ ವೀರಶೈವ ಲಿಂಗಾಯಿತ ಪ್ರಗತಿಪರ ಸಂಘಟನೆ ಮುಖಂಡರು ಪಾನಕ, ಮಜ್ಜಿಗೆ, ಮೊಸರನ್ನ, ರೈಸ್ ಬಾತ್, ಹೆಸರು ಬೇಳೆ ವಿತರಣೆ ಮಾಡಿದರು.
ಮಹಾಸಭಾ ಜಿಲ್ಲಾಧ್ಯಕ್ಷ ನಂದೀಶ್ ಮೂಡ್ಲೂಪುರ, ತಾಲೂಕು ಅಧ್ಯಕ್ಷ ಮಹದೇವ ಪ್ರಸಾದ್, ಮಹಿಳಾ ಘಟಕದ ಅಧ್ಯಕ್ಷೆ ಜಗದಾಂಬ ಇದ್ದರು.