ಕಳೆದ 50ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ತ್ರಿವಿಧ ದಾಸೋಹ ತತ್ವದ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದ ಕಾಯಕಯೋಗಿ, ಸಂತರ ಸಂತ, ಶತಾಯುಷಿ ಡಾ.ಸಿದ್ದಗಂಗಾಶ್ರೀಗಳು(111ವರ್ಷ) ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಲಿಂಗೈಕ್ಯರಾಗಿದ್ದಾರೆ. ಬರೋಬ್ಬರಿ 111 ವಸಂತಗಳನ್ನು ಕಂಡಿದ್ದ ಡಾ.ಶಿವಕುಮಾರ ಸ್ವಾಮಿ ಮಾಗಡಿ ತಾಲೂಕಿನ ವೀರಾಪುರದ ಹೊನ್ನೇಗೌಡ, ಗಂಗಮ್ಮ ದಂಪತಿಯ 13ನೇ ಪುತ್ರನಾಗಿ 1907ರ ಏಪ್ರಿಲ್ 1ರಂದು ಜನಿಸಿದ್ದರು.
(ಓದಿ:ನಡೆದಾಡುವ ದೇವರು, ಶತಾಯುಷಿ ಸಿದ್ದಗಂಗಾಶ್ರೀ ಲಿಂಗೈಕ್ಯ) ಶಿವಣ್ಣ ಎಂಬ ಅಂದಿನ ಬಾಲಕ ಶಿವಕುಮಾರ ಸ್ವಾಮೀಜಿಯಾಗಿ ಭಕ್ತರ ಪಾಲಿಗೆ ನಡೆದಾಡುವ ದೇವರಾಗಿದ್ದರು. ವೈದ್ಯರ ಹಲವು ವಿಧದ ಚಿಕಿತ್ಸೆಯ ನಡುವೆಯೂ ಫಲಕಾರಿಯಾಗದೆ ಇಂದು ಬೆಳಗ್ಗೆ 11.44ಕ್ಕೆ ದೈವಾಧೀನರಾಗಿದ್ದಾರೆ. ನಾಳೆ ಮಧ್ಯಾಹ್ನ 3ಗಂಟೆವರೆಗೆ ಸ್ವಾಮೀಜಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ತದನಂತರ ಸಕಲ ಸರ್ಕಾರಿ ಗೌರವಗಳೊಂದಿಗೆ ಶ್ರೀಗಳ ಅಂತ್ಯಕ್ರಿಯೆ ನಡೆಯಲಿದೆ. ಸಿದ್ದಗಂಗಾಶ್ರೀ ಲಿಂಗಕೈರಾಗಿದ್ದ ಹಿನ್ನೆಲೆಯಲ್ಲಿ ನಾಳೆ ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಿಸಿದೆ. ರಾಜ್ಯದಲ್ಲಿ ಮೂರು ದಿನಗಳ ಶೋಕಾಚರಣೆ ನಡೆಯಲಿದೆ.