ಹಾನಗಲ್ಲ: ಚುನಾವಣೆ ಮುಗೀತು. ಇನ್ನೇನು ಅಭ್ಯರ್ಥಿ ಲೆಕ್ಕಾಚಾರದಲ್ಲಿ ತೊಡಗಿರಬೇಕು ಎಂದು ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಮನೆಗೆ ಹೋದ್ರೆ, ಅಲ್ಲಿ ಅವರು ಫುಲ್ ಖುಷ್, ರಿಲ್ಯಾಕ್ಸ್ ಮೂಡ್‌ಲ್ಲಿ ಕಾರ್ಯಕರ್ತರ ಶ್ರಮಕ್ಕೆ ಅಭಿನಂದಿಸುತ್ತ ಕಾರ್ಯಕರ್ತರೊಂದಿಗೆ ಹರಟುತ್ತಿದ್ದರು. ಸಂಸದ ಶಿವಕುಮಾರ ಉದಾಸಿ ಎಂದಿನಂತೆ ಚುನಾವಣೇತರ ದಿನಚರಿಗೆ ಒಗ್ಗಿಕೊಂಡಿದ್ದು ಇಂದಿನ ವಿಶೇಷ.
ಮನೆಯಲ್ಲಿ ತಂದೆ ಸಿ.ಎಂ.ಉದಾಸಿ, ಅತ್ತೆ ಶಿವಗಂಗಕ್ಕ ಪಟ್ಟಣದ, ಪತ್ನಿ ರೇವತಿ ಉದಾಸಿ ಹಾಗೂ ಬಂಧುಗಳೊಂದಿಗೆ ಶಿವಕುಮಾರ ಉದಾಸಿ ಕೌಟುಂಬಿಕ ವಿಷಯಗಳ ಕುರಿತು ಚರ್ಚಿಸುತ್ತಿದ್ದರು.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ ಉದಾಸಿ, ಉತ್ತರ ಭಾರತದಲ್ಲಿ ನನ್ನ ಸ್ನೇಹಿತರ ಚುನಾವಣೆ ಇದೆ. ವಿಶೇಷವಾಗಿ ಉತ್ತರಪ್ರದೇಶ, ಬಿಹಾರ, ಜಾರ್ಖಂಡ್ ರಾಜ್ಯಗಳಲ್ಲಿ ನಡೆಯು ತ್ತಿರುವ ಚುನಾವಣೆಗಳಲ್ಲಿ ಪ್ರಚಾರಾರ್ಥ ಪಾಲ್ಗೊಳ್ಳ ಬೇಕಾಗಿದೆ. ಈ ನಡುವೆ 10 ದಿನ ಪ್ರಕೃತಿ ಚಿಕಿತ್ಸೆಗೆ ಹೋಗಬೇಕು ಎಂದುಕೊಂಡಿರುವೆ ಎನ್ನುತ್ತ ತಮ್ಮ ದಿನನಿತ್ಯದ ಚಟುವಟಿಕೆಗಳ ಜೊತೆಗೆ ತಾವಿರುವ ರೀತಿ ರಿವಾಜುಗಳನ್ನು ಹೇಳಿಕೊಂಡರು.
ಜೊತೆಗಿದ್ದ ಶಿವಕುಮಾರ ಅವರ ಪತ್ನಿ ರೇವತಿ ಪ್ರತಿಕ್ರಿಯಿಸಿ, ಚುನಾವಣೆ ಆರಂಭದ ದಿನ, ಮತದಾನ ಮುಗಿದ ದಿನ, ಈ ದಿನ ಯಾವುದರಲ್ಲೂ ಏನೂ ಬದಲಾವಣೆ ನಮ್ಮಲ್ಲಿ ಕಂಡಿಲ್ಲ. ದಿನನಿತ್ಯದಂತೆ ನನ್ನ ಪತಿ ಶಿವಕುಮಾರ ಅವರ ಇಷ್ಟದ ರೊಟ್ಟಿ ಪಲ್ಯ ಮಾಡಿಕೊಟ್ಟಿದ್ದೇನೆ. ಅವರಿಗೆ ದಿನನಿತ್ಯವು ಹಬ್ಬವೇ. ಚುನಾವಣೆ ದಿನಗಳನ್ನು ಹೊರತುಪಡಿಸಿ ಮುನ್ನಾ ದಿನವೇ ಅವರಿಗಿಷ್ಟವಾದ ಊಟೋಪಚಾರದ ಮೆನು ಕೇಳಿಕೊಂಡು ಅಡುಗೆ ಮಾಡುತ್ತೇನೆ. ಹೀಗಾಗಿ ಇಂದಿನ ದಿನ ಅದೇ ರೀತಿ ನಡೆದಿದೆ. ಇದರಲ್ಲೇನು ವಿಶೇಷವಿಲ್ಲ ಎಂದರು.
Advertisement
ಬುಧವಾರ ಬೆಳಗ್ಗೆ ಮನೆ ತುಂಬಿದ ಬಿಜೆಪಿ ಕಾರ್ಯಕರ್ತರೊಂದಿಗೆ ಹಸನ್ಮುಖೀಯಾಗಿ ಕಾಣಿಸಿಕೊಂಡ ಶಿವಕುಮಾರ, ಬೆಳಗಿನ 6 ಗಂಟೆಗೆ ತಮ್ಮ ದಿನಚರಿ ಆರಂಭಿಸಿ ರೊಟ್ಟಿ, ಪಲ್ಯ, ಮೊಸರು, ಚಟ್ನಿ ಸವಿದು ಎಂದಿನಂತೆ ಧರ್ಮಪತ್ನಿಯ ಅಡುಗೆ ರುಚಿ ಮೆಲುಕು ಹಾಕುತ್ತ, ತಮ್ಮಿಷ್ಟದ ಬಿಳಿಸಂಡಿಗೆ ಸವಿಯುತ್ತಿರುವುದು ಗಮನ ಸೆಳೆಯಿತು.
Related Articles
Advertisement