Advertisement

ಶಿವಪುರ: ಟಿಪ್ಪರ್‌ ಮೇಲೆ ಕುಸಿದು ಬಿದ್ದ ಬಂಕರ್‌: ಇಬ್ಬರು ಸಾವು 

07:30 AM Aug 13, 2017 | Team Udayavani |

ಹೆಬ್ರಿ: ಶಿವಪುರ ಕಲ್ಮುಂಡ ಬಳಿ ಇರುವ ಮೂಕಾಂಬಿಕಾ ಕ್ರಶರ್‌ ಘಟಕದಲ್ಲಿ ಜಲ್ಲಿ ತುಂಬಿದ ಬಂಕರ್‌ ಕುಸಿದು ಟಿಪ್ಪರ್‌ನ ಮೇಲೆ ಬಿದ್ದ ಪರಿಣಾಮ ಇಬ್ಬರು ಕಾರ್ಮಿಕರು ಸ್ಥಳದಲ್ಲೆ ಮೃತಪಟ್ಟ ಘಟನೆ ಶನಿವಾರಸಂಭವಿಸಿದೆ.

Advertisement

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮೂಳ್ಕೂರು ಮೂಲದ ಪರಶುರಾಮ ಅವರ ಪುತ್ರ ಸಂಜೀವ (28) ಹಾಗೂ ಉತ್ತರ ಪ್ರದೇಶದ ಜಗದೀಶ್‌ಯಾನೆ ಅಜಿತ್‌ (27) ಮೃತಪಟ್ಟವರು. ಸಂಜೀವ ಅವರು ಟಿಪ್ಪರ್‌ ಚಲಾಯಿಸುತ್ತಿದ್ದರು. ಅಜಿತ್‌ ಟಿಪ್ಪರ್‌ನ ಮೇಲೆ ಇದ್ದರು.

ಶನಿವಾರ ಬೆಳಿಗ್ಗೆ ಸುಮಾರು 9.30ರ ಹೊತ್ತಿಗೆ ಬಂಕರ್‌ನಲ್ಲಿದ್ದ ಜಲ್ಲಿಯನ್ನು ಟಿಪ್ಪರ್‌ಗೆ ತುಂಬಿ ಟಿಪ್ಪರ್‌ ಅನ್ನು ಹಿಂದಕ್ಕೆ ಚಲಾಯಿಸುತ್ತಿರುವಾಗ ಬಂಕರ್‌ನ ಪಿಲ್ಲರ್‌ ತುಂಡಾಗಿ ಬೃಹತ್‌ ಗಾತ್ರದ ಬಂಕರ್‌ ಟಿಪ್ಪರ್‌ ಮೇಲೆ ಕುಸಿದು ಬಿದ್ದಿದೆ. ಪರಿಣಾಮ ಟಿಪ್ಪರ್‌ನ ಚಾಲಕ ಹಾಗೂ ಕಾರ್ಮಿಕ ಸ್ಥಳದಲ್ಲೆ ಮೃತಪಟ್ಟಿದ್ದಾರೆ. 

3 ಗಂಟೆ ತೆರವು ಕಾರ್ಯ
ಘಟನೆ ನಡೆದು ಸುಮಾರು 3ಗಂಟೆಗಳ ಕಾಲ ತೆರವು ಕಾರ್ಯಾ ಚರಣೆ ನಡೆಯಿತು. ಅಪಘಾತದ ತೀವ್ರತೆಯಿಂದ ಟಿಪ್ಪರ್‌ ಒಳಗೆ ಸಿಲುಕಿಕೊಂಡು ತೀವ್ರವಾಗಿ ಗಾಯ ಗೊಂಡ ಚಾಲಕನನ್ನು ಹೊರತೆಗೆಯಲು ಕಷ್ಟಪಡ ಬೇಕಾಯಿತು. ಸುಮಾರು ಮೂರು ಜೆಸಿಬಿಗಳನ್ನು ಉಪಯೋಗಿಸಿಕೊಂಡು ಸಾರ್ವಜನಿಕರ ಸಹಕಾರದಿಂದ ಹೆಬ್ರಿ ಪೊಲೀಸರು ಮೃತದೇಹವನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು.

ಕ್ರಶರ್‌ ವಿರುದ್ಧ ಪ್ರಕರಣ
ಕ್ರಶರ್‌ ಘಟಕದೊಳಗೆ ಸೂಕ್ತ ಭದ್ರತೆ ಇಲ್ಲದೆ ಅನಾಹುತ ಸಂಭವಿಸಿದೆ ಎಂದು ಹೆಬ್ರಿ ಠಾಣೆಯಲ್ಲಿ ಘಟಕದ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಉಡುಪಿ ಎಸ್‌ಪಿ ಡಾ| ಸಂಜಯ್‌ ಎಂ. ಪಾಟೀಲ್‌, ಕಾರ್ಕಳ ವೃತ್ತ ನಿರೀಕ್ಷಕ ಜಾಯ್‌ ಅಂತೋನಿ, ಹೆಬ್ರಿ ಠಾಣಾಧಿಕಾರಿ ಜಗನ್ನಾಥ ಮತ್ತಿತರ ಅಧಿಕಾರಿಗಳು ಭೇಟಿ ನೀಡಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next