Advertisement

ಜೂ. 6: ರಾಯಗಢ್‌ ಕೋಟೆಯಲ್ಲಿ ಶಿವಾಜಿ ಪಟ್ಟಾಭಿಷೇಕ ವಾರ್ಷಿಕೋತ್ಸವ

12:33 PM Jun 04, 2019 | Vishnu Das |

ಮುಂಬಯಿ: ಜೂನ್‌ 6 ರಂದು ಮಹಾರಾಷ್ಟ್ರದ ಐತಿಹಾಸಿಕ ರಾಯಗಢ್‌ ಕೋಟೆಯಲ್ಲಿ ಮರಾಠ ವೀರ ಯೋಧಛತ್ರಪತಿ ಶಿವಾಜಿ ಮಹಾರಾಜ್‌ ಅವರ ಪಟ್ಟಾಭಿಷೇಕ ಸಮಾರಂಭದ ವಾರ್ಷಿಕೋತ್ಸವವನ್ನು ಆಚರಿಸಲು ಸುಮಾರು ನಾಲ್ಕು ಲಕ್ಷ ಜನರು ಸಭೆ ಸೇರುವ ನಿರೀಕ್ಷೆಯಿದೆ ಎಂದು ಕಾರ್ಯಕ್ರಮದ ಆಯೋಜಕರು ಹೇಳಿದ್ದಾರೆ.

Advertisement

ರಾಯಗಢ ಕೋಟೆಯು ಛತ್ರಪತಿ ಶಿವಾಜಿ ಮಹಾರಾಜ್‌ ಅವರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. 1674ರ ಜೂನ್‌ 6ರಂದು ಈ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್‌ ಅವರ ಪಟ್ಟಾಭಿಷೇಕ ಮಾಡಲಾಯಿತು ಮತ್ತು ಅನಂತರ ಇಲ್ಲಿಂದ ಅವರು ಮರಾಠ ಸಾಮ್ರಾಜ್ಯವನ್ನು ಸ್ಥಾಪಿಸಿದ್ದರು.

ಶಿವಾಜಿ ಮಹಾರಾಜ್‌ ಅವರ ಪಟ್ಟಾಭಿಷೇಕದ ವಾರ್ಷಿಕೋತ್ಸವದ ಪ್ರಯುಕ್ತ ಜರಗಲಿರುವ ‘ರಾಯಗಢ್‌ ಶಿವರಾಜ್ಯಾಭಿಷೇಕ್‌ -2019’ ಸಮಾರಂಭದ ಸಂದರ್ಭದಲ್ಲಿ ಮುಂಬಯಿಯಿಂದ ಸುಮಾರು 170 ಕಿ.ಮೀ ದೂರದಲ್ಲಿರುವ ರಾಯಗಢ್‌ ಜಿಲ್ಲೆಯ ರಾಯಗಢ್‌ ಕೋಟೆಯಲ್ಲಿ ಜೂನ್‌ 5 ಮತ್ತು 6ರಂದು ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಜೂ.5ರಂದು ವಿಶ್ವ ಪರಿಸರ ದಿನ ಬರುತ್ತದೆ ಮತ್ತು ಜೂ. 6ರಂದು ಶಿವಾಜಿ ಮಹಾರಾಜ್‌ ಅವರ ಪಟ್ಟಾಭಿಷೇಕದ ವಾರ್ಷಿಕೋತ್ಸವ. ಈ ಹಿನ್ನೆಲೆಯಲ್ಲಿ ನಾವು ಕೋಟೆಗಳು ಮತ್ತು ಅವುಗಳ ಸಂರಕ್ಷಣೆ, ಪರಂಪರೆ, ಇತಿಹಾಸ ಹಾಗೂ ಪರಿಸರಕ್ಕೆ ಸಂಬಂಧಿಸಿರುವ ವಿವಿಧ ವಿಷಯಗಳನ್ನು ಸೇರಿಸಿಕೊಂಡು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಕೊಲ್ಲಾಪುರದ ರಾಜ ಮನೆತನದವರಾದ ಮತ್ತು ಛತ್ರಪತಿ ಶಿವಾಜಿ ಮಹಾರಾಜ್‌ ಅವರ 13ನೇ ನೇರ ವಂಶಸ್ಥನಾದ ಸಂಭಾಜಿರಾಜೇ ಛತ್ರಪತಿ ಅವರು ಹೇಳಿದ್ದಾರೆ. ಛತ್ರಪತಿ ಪ್ರಸ್ತುತ ರಾಯಗಢ ಡೆವಲಪೆ¾ಂಟ್‌ ಅಥಾರಿಟಿಯ (ಆರ್ಡಿಎ) ಕಾರ್ಯಾಧ್ಯಕ್ಷ ಮತ್ತು ರಾಷ್ಟ್ರಪತಿ ನಾಮನಿರ್ದೇಶಿತ ರಾಜ್ಯಸಭಾ ಸದಸ್ಯರಾಗಿದ್ದಾರೆ.

5 ರಾಷ್ಟ್ರಗಳ ರಾಜತಾಂತ್ರಿಕರ ಆಗಮನ ಶಿವಾಜಿ ಮಹಾರಾಜ್‌ ಅವರ ಪಟ್ಟಾಭಿಷೇಕ ಮಾಡುವಾಗ ಬ್ರಿಟಿಷಿಗ ಹೆನ್ರಿ ಆಕ್ಸೆನೆxನ್‌ ಅವರು ಉಪಸ್ಥಿತರಿದ್ದರು. ಈ ವರ್ಷ ನಾವು ಐದು ರಾಷ್ಟ್ರಗಳ ರಾಜತಾಂತ್ರಿಕರನ್ನು ಹೊಂದಲಿದ್ದೇವೆ ಎಂದು ಸಂಭಾಜಿರಾಜೇ ಛತ್ರಪತಿ ಅವರು ತಿಳಿಸಿದ್ದಾರೆ. ಅವರ ಪ್ರಕಾರ, ಚೀನಾ, ಪೋಲ್ಯಾಂಡ್‌ ಗ್ರೀಸ್‌, ಬಲ್ಗೇರಿಯಾ ಮತ್ತು ಟ್ಯುನೀಷಿಯಾದ ರಾಯಭಾರಿಗಳು ಗುರುವಾರದ ಕಾರ್ಯಕ್ರಮದಲ್ಲಿ ಹಾಜರಾಗಲಿದ್ದಾರೆ.

Advertisement

ಬುಧವಾರದಿಂದ ಜನರು ಕೋಟೆಯ ಸುತ್ತಲೂ ಜಮಾಯಿಸಲು ಪ್ರಾರಂಭಿಸಲಿದ್ದಾರೆ. ಅಂದು ಸರಪಂಚ್‌ಗಳು (ಗ್ರಾಮ ಮುಖ್ಯಸ್ಥರು) ಮತ್ತು ಕೋಟೆಯ ಸುತ್ತಲಿನ 21 ಗ್ರಾಮಗಳ ಜನರ ಉಪಸ್ಥಿತಿಯಲ್ಲಿ ಪೂಜೆಯೊಂದನ್ನು ನಡೆಸಲಾಗುವುದು ಎಂದವರು ಹೇಳಿದ್ದಾರೆ.

ಶಿವಾಜಿ ಯುಗದ ಸಮರ ಕಲೆಗಳ ಪ್ರದರ್ಶನ ಮತ್ತು ರಾಯಗಢ್‌ ಕೋಟೆಯಲ್ಲಿ ಐತಿಹಾಸಿಕ ವಸ್ತುಗಳ ಪ್ರದರ್ಶನ ನಡೆಯಲಿದೆ. ಇದರ ಜತೆಗೆ, ಆರ್‌ಡಿಎ ಕೈಗೊಂಡ ವಿವಿಧ ಕಾರ್ಯಗಳ ಬಗ್ಗೆ ಪ್ರಸ್ತುತಿಯನ್ನು ನೀಡಲಾಗುವುದು. ಅನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಛತ್ರಪತಿ ಅವರು ತಿಳಿಸಿದ್ದಾರೆ.

ಗುರುವಾರದಂದು ಶಿವಾಜಿ ಮಹಾರಾಜ್‌ ಅವರ ಪಲ್ಲಕ್ಕಿಯ ಆಗಮನದ ಅನಂತರ ಧ್ವಜಾರೋಹಣ ನಡೆಯಲಿದೆ ಎಂದವರು ಹೇಳಿದ್ದಾರೆ. ಶಿವಾಜಿ ಮಹಾರಾಜ್‌ ಅವರ ವಂಶಸ್ಥರು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next