ಬೆಳಗಾವಿ: ಮಹಾರಾಷ್ಟ್ರದ ಆರಾಧ್ಯ ಪುರುಷ ಛತ್ರಪತಿ ಶಿವಾಜಿ ಮಹಾರಾಜರ ಮೂಲ ನೆಲ ಕರ್ನಾಟಕ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ನಗರದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉದ್ಧವ್ ಠಾಕ್ರೆ ನೇತೃತ್ವದ ಸಮ್ಮಿಶ್ರ ಸರ್ಕಾರ ಕನ್ನಡಿಗರನ್ನು ಕೆರಳಿಸುವ ಹೇಳಿಕೆ ನೀಡುತ್ತಿದೆ. ಠಾಕ್ರೆ ತಮ್ಮ ಕುರ್ಚಿ ಉಳಿಸಿಕೊಳ್ಳಲು ಇಂಥಹ ವಿವಾದಾತ್ಮಕ ಹೇಳಿಕೆ ನೀಡಿ ಮಹಾರಾಷ್ಟ್ರದ ಜನರನ್ನು ಮಾನಸಿಕವಾಗಿ ಬೇರೆಡೆಗೆ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಉದ್ಧವ್ ಠಾಕ್ರೆಯನ್ನು ಕೆಳಗಿಸಲು ಕಾಂಗ್ರೆಸ್ ತಂತ್ರ ಹಣೆಯುತ್ತಿದ್ದು, ಹೀಗಾಗಿ ಕೆಳಗಿಳಿಯುವ ಮುನ್ನ ಇಂಥ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
ಕರ್ನಾಟಕದಲ್ಲಿ ಕನ್ನಡಿಗರು-ಮರಾಠಿಗರು ಬಾಂಧವ್ಯದಿಂದ ಇದ್ದಾರೆ. ಅಣ್ಣ ತಮ್ಮಂದಿರಂತೆ ಇರುವಾಗ ಠಾಕ್ರೆ ಬಂದು ಹುಳಿ ಹಿಂಡುವ ಕೆಲಸ ಮಾಡಬಾರದು. ತಮ್ಮ ಅಧಿಕಾರ ಉಳಿಸಿಕೊಳ್ಳಲು ಠಾಕ್ರೆ ಇಂಥ ಕುಲಗೆಡಿಸುವ ಕೆಲಸಕ್ಕೆ ಕೈ ಹಾಕಬಾರದು ಎಂದು ಹೇಳಿದರು.
ಇದನ್ನೂ ಓದಿ:ತ್ರಿವರ್ಣಕ್ಕಾದ ಅವಮಾನದಿಂದ ದೇಶ ಆಘಾತಕ್ಕೊಳಗಾಗಿದೆ : ಪ್ರಧಾನಿ
ಮುಖ್ಯಮಂತ್ರಿ ಉಧ್ಧವ್ ಠಾಕ್ರೆಗೆ ಇತಿಹಾಸ ಗೊತ್ತಿಲ್ಲ. ಛತ್ರಪತಿ ಶಿವಾಜಿ ಮಹಾರಾಜರು ಕರ್ನಾಟಕ ಮೂಲದವರು ಎನ್ನುವುದು ಅವರಿಗೆ ಗೊತ್ತೇ ಇಲ್ಲ. ಇವರ ವಂಶದ ಮೂಲ ಕರ್ನಾಟಕದಲ್ಲಿ ಇದ್ದರು. ಶಿವಾಜಿ ಮಹಾರಾಜರ ವಂಶದ ಮೂಲಪುರುಷ ಬೆಳ್ಳಿಯಪ್ಪ ಅವರು ಗದಗ ಜಿಲ್ಲೆಯ ಸೊರಟೂರಿನವರು ಎಂಬುದು ನಮಗೆ ಹೆಮ್ಮೆಯ ವಿಷಯ. ಕರ್ನಾಟಕದಲ್ಲಿ ಬರಗಾಲ ಇದ್ದಾಗ ಬೆಳ್ಳಿಯಪ್ಪ ಅವರು ಇಲ್ಲಿಂದ ಮಹಾರಾಷ್ಟ್ರಕ್ಕೆ ಗುಳೆ ಹೋಗುತ್ತಾರೆ. ಇಲ್ಲಿಂದ ಹೋದ ಬೆಳ್ಳಿಯಪ್ಪ ಮಹಾರಾಷ್ಟ್ರದಲ್ಲಿ ನೆಲೆಸುತ್ತಾರೆ. ಈ ವಂಶದ ನಾಲ್ಕನೇ ತಲೆಮಾರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಬರುತ್ತಾರೆ. ಇದರ ಬಗ್ಗೆ ಠಾಕ್ರೆ ಅರ್ಥ ಮಾಡಿಕೊಳ್ಳಬೇಕು ಎಂದು ಕಾರಜೋಳ ಇತಿಹಾಸವನ್ನು ತಿಳಿಸಿದರು.
ಮಹದಾಯಿ ನದಿ ನೀರು ಹಂಚಿಕೆ ಕುರಿತು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾರಜೋಳ, ಯಾರ ಮಾತನ್ನೂ ಯಾರೂ ಕೇಳಬೇಕಾಗಿಲ್ಲ. ನಾವೂ ಯಾರ ಮಾತು ಕೇಳಬೇಕಾಗಿಲ್ಲ. ನೆಲ, ಜಲ, ನಾಡು-ನುಡಿ ಪ್ರಶ್ನೆ ಬಂದಾಗ ನಾವು ನಮ್ಮ ನೆಲ-ಜಲ ಪರವಾಗಿ ಇರುತ್ತೇವೆ. ಈ ಬಗ್ಗೆ ನಮ್ಮ ಸರ್ಕಾರ ವ್ಯವಸ್ಥಿತವಾಗಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.