ಹುಬ್ಬಳ್ಳಿ: ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಸಕಲ ಸರಕಾರಿ ಗೌರವಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಯಿತು.
ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ನಿಮಿತ್ತ ಇಲ್ಲಿನ ಮಿನಿ ವಿಧಾನಸೌಧದಲ್ಲಿ ಸೋಮವಾರ ತಹಶೀಲ್ದಾರ ಶಶಿಧರ ಮ್ಯಾಡಾಳ ಅಧ್ಯಕ್ಷತೆಯಲ್ಲಿ ನಡೆದ ಮರಾಠಾ ಸಮಾಜದ ಮುಖಂಡರ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಫೆ.19ರಂದು ಬೆಳಗ್ಗೆ 9:30ಗಂಟೆಗೆ ಶಿವಾಜಿ ಮಹಾರಾಜರ ಭಾವಚಿತ್ರವುಳ್ಳ ಮೆರವಣಿಗೆಯನ್ನು ಮರಾಠಾ ಗಲ್ಲಿಯ ಶಿವಾಜಿ ಚೌಕ್‌ನಿಂದ ಮಿನಿವಿಧಾನಸೌಧ ವರೆಗೆ ನಡೆಸಬೇಕು ಹಾಗೂ ಮಿನಿ ವಿಧಾನಸೌಧದಲ್ಲಿ ನಡೆಯುವ ಸಮಾರಂಭದಲ್ಲಿ ಜನಪ್ರತಿನಿಧಿಗಳು, ಗಣ್ಯರನ್ನು ಆಹ್ವಾನಿಸಬೇಕು.
ಡಾ| ಮಲ್ಲಿಕಾರ್ಜುನ ಬಾಳಿಕಾಯಿ ಅವರಿಂದ ಉಪನ್ಯಾಸ ನೀಡಲು ಹಾಗೂ ಮಹಾರಾಷ್ಟ್ರದ ಕೊಲ್ಲಾಪುರದ ಉಪನ್ಯಾಸಕರನ್ನು ಆಹ್ವಾನಿಸುವ ಜೊತೆಗೆ ಮರಾಠಾ ಸಮಾಜದಲ್ಲಿ ಅತೀ ಹೆಚ್ಚು ಅಂಕ ಪಡೆದಂತಹ ಐವರು ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ತಾಲೂಕು ಆಡಳಿತದಿಂದ ಸನ್ಮಾನಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಮರಾಠಾ ಸಮಾಜದ ಮುಖಂಡರು, ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.