ಸಾಮಾನ್ಯವಾಗಿ ಒಂದೇ ಚಿತ್ರದಲ್ಲಿ ಕುಟುಂಬದ ಸದಸ್ಯರೆಲ್ಲರೂ ಸೇರಿ ಒಟ್ಟಿಗೆ ಕೆಲಸ ಮಾಡುವ ಅವಕಾಶ, ಸಂದರ್ಭ ಸಿಗುವುದು ತುಂಬಾ ವಿರಳ. ಆದರೆ ಇಲ್ಲೊಂದು ಚಿತ್ರ ಅಂಥದ್ದೊಂದು ವಿರಳ, ಅಪರೂಪದ ಸಂದರ್ಭವನ್ನು ಒದಗಿಸಿಕೊಟ್ಟಿದ್ದು, ತೆರೆ ಹಿಂದೆ ಮತ್ತು ತೆರೆ ಮುಂದೆ ಚಿತ್ರರಂಗದ ಹಲವು ಕುಟುಂಬದ ಸದಸ್ಯರನ್ನು ಒಟ್ಟಿಗೆ ಕೆಲಸ ಮಾಡುವಂಥೆ ಮಾಡಿದೆ. ಅಂದಹಾಗೆ, ಆ ಚಿತ್ರದ ಹೆಸರು “ಶಿವಾರ್ಜುನ’.
ಕನ್ನಡ ಚಿತ್ರರಂಗದಲ್ಲಿ ವಿರಳ ಮತ್ತು ಅಪರೂಪವೆಂಬಂತೆ ಒಂದೇ ಕುಟುಂಬದ ಹಲವು ಸದಸ್ಯರು ಈ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ ಎಂಬುದು ವಿಶೇಷ. ಚಿರಂಜೀವಿ ಸರ್ಜಾ ನಾಯಕನಾಗಿರುವ ಈ ಚಿತ್ರಕ್ಕೆ ಚಿರು ಪತ್ನಿ ಮೇಘನಾ ರಾಜ್ ಒಂದು ಹಾಡಿಗೆ ಧ್ವನಿಯಾಗಿದ್ದಾರೆ. ಇನ್ನು ಚಿತ್ರದಲ್ಲಿ ತೆರೆಮೇಲೆ ಸಾಧು ಕೋಕಿಲ ಕಾಮಿಡಿ ಕಚಗುಳಿ ಇಟ್ಟರೆ, ತೆರೆಹಿಂದೆ ಸಾಧು ಕೋಕಿಲ ಪುತ್ರ ಸುರಾಗ್ ಕೋಕಿಲ ಚಿತ್ರದ ಸುಮಧುರ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ.
ಉಳಿದಂತೆ ಚಿತ್ರದ ಪೋಷಕ ಪಾತ್ರಕ್ಕೆ ಬಣ್ಣ ಹಚ್ಚಿರುವ ನಟಿ ತಾರಾ ಮತ್ತು ಅವರ ಪುತ್ರ ಕೃಷ್ಣ ಇಬ್ಬರೂ ಚಿತ್ರದಲ್ಲಿ ಒಟ್ಟಾಗಿ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ದೃಶ್ಯಗಳನ್ನು ತಮ್ಮ ಕ್ಯಾಮರಾದಲ್ಲಿ ತೆರೆಮೇಲೆ ಬರುವಂತೆ ಸೆರೆಹಿಡಿದಿರುವುದು ತಾರಾ ಅವರ ಪತಿ ಛಾಯಾಗ್ರಹಕ ವೇಣು. ಮೊದಲಿನಿಂದಲೂ ಚಿರಂಜೀವಿ ಸರ್ಜಾ ಕುಟುಂಬಕ್ಕೆ ಹತ್ತಿರವಿರುವ ಶಿವಾರ್ಜುನ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇಡೀ ಚಿತ್ರದಲ್ಲಿ ಇಂಥದ್ದೊಂದು ಅಪರೂಪದ ತಾರಾ ಸಮಾಗಮವನ್ನು ಕಂಡು “ಶಿವಾರ್ಜುನ’ ಚಿತ್ರಕ್ಕೆ ಸಾಥ್ ನೀಡಿರುವ ನಟ ಧ್ರುವ ಸರ್ಜಾ, ಇತ್ತೀಚೆಗೆ ಅಣ್ಣನ ಚಿತ್ರದ ಟ್ರೇಲರ್ ಅನ್ನು ಅದ್ಧೂರಿಯಾಗಿ ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಹೌದು, “ಖಾಕಿ’ ಚಿತ್ರದ ನಂತರ ನಟ ಚಿರಂಜೀವಿ ಸರ್ಜಾ ಅಭಿನಯದ “ಶಿವಾರ್ಜುನ’ ಚಿತ್ರ ಸದ್ಯ ಪ್ರಮೋಶನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದು, ಇದೇ ಮಾರ್ಚ್ 12ರಂದು ಚಿತ್ರ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಚಿತ್ರಕ್ಕೆ ಶಿವ ತೇಜಸ್ ಆ್ಯಕ್ಷನ್-ಕಟ್ ಹೇಳಿದ್ದಾರೆ. ಆ್ಯಕ್ಷನ್ ಕಂ ರೊಮ್ಯಾಂಟಿಕ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾಗೆ ನಾಯಕಿಯರಾಗಿ ಕನ್ನಡ ದತ್ತ ಮತ್ತೂಂದು ಸೂಪರ್ ಹಿಟ್ ಚಿತ್ರ ಅಮೃತಾ ಅಯ್ಯಂಗಾರ್, ಅಕ್ಷತಾ ಶ್ರೀನಿವಾಸ್ ಜೋಡಿಯಾಗಿ ಅಭಿನಯಿಸಿದ್ದಾರೆ.
ಉಳಿದಂತೆ ಸಾಧು ಕೋಕಿಲ, ತಾರಾ, ದಿನೇಶ್ ಮಂಗಳೂರು, ಅವಿನಾಶ್, ಕಿಶೋರ್, ರವಿ ಕಿಶನ್, ಶಿವರಾಜ್ ಕೆ.ಆರ್ ಪೇಟೆ, ನಯನಾ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಟ್ರೇಲರ್ ಮತ್ತು ಹಾಡುಗಳ ಮೂಲಕ ಹೊರಬಂದು ಸೋಶಿಯಲ್ ಮೀಡಿಯಾಗಳಲ್ಲಿ ಒಂದಷ್ಟು ಸೌಂಡ್ ಮಾಡುತ್ತಿರುವ “ಶಿವಾರ್ಜುನ’ ಸಿನಿಪ್ರಿಯರಿಗೆ ಎಷ್ಟರ ಮಟ್ಟಿಗೆ ಇಷ್ಟವಾಗುತ್ತಾನೆ ಅನ್ನೋದು ಇನ್ನೇನು ಕೆಲ ದಿನಗಳಲ್ಲೇ ಗೊತ್ತಾಗಲಿದೆ.