Advertisement

ಸಮಾಜೋದ್ಧಾರ ಕಾರ್ಯ ಮಾಡಿದ ಶಿವ ಶರಣರು

11:45 AM Apr 30, 2019 | Team Udayavani |

ಧಾರವಾಡ : ವೀರವಿರಾಗಿಣಿ ಅಕ್ಕಮಹಾದೇವಿ, ಬಸವಣ್ಣನವರು, ಅಲ್ಲಮಪ್ರಭುದೇವರು ಸೇರಿದಂತೆ ವಿವಿಧ ಶರಣರು ಹಿಂಸೆಯನ್ನು ದೂರ ಮಾಡಲೆತ್ನಿಸಿ ಈ ಜಗತ್ತಿನಲ್ಲಿ ನಡೆಯುತ್ತಿದ್ದ ಶೋಷಣೆಯನ್ನು ಧಿಕ್ಕರಿಸಿ ಸಮಾಜೋದ್ಧಾರ ಕಾರ್ಯ ಮಾಡಿದ್ದಾರೆ ಎಂದು ಡಾ|ಶರಣಮ್ಮ ಗೋರೆಬಾಳ ಅಭಿಪ್ರಾಯಪಟ್ಟರು.

Advertisement

ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಬಸವಕೇಂದ್ರ ವತಿಯಿಂದ ಆಯೋಜಿಸಿದ್ದ ‘ಅರಿವಿನ ಅಂಗಳ’ ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಜೀವನ ಕುರಿತಾಗಿ ಅವರು ಉಪನ್ಯಾಸ ನೀಡಿದರು.

12 ನೇ ಶತಮಾನದ ಪೂರ್ವದಲ್ಲಿ ಮಹಿಳೆಯನ್ನು ನಾಲ್ಕ ಗೋಡೆಗಳ ಮಧ್ಯೆ ಬಂಧಿಸಿಡುತ್ತಿದ್ದರು. ಆಗ ಸ್ತ್ರೀಯರಿಗೆ ಸ್ವಾತಂತ್ರ್ಯವಿರಲಿಲ್ಲ. ಅಕ್ಕಮಹಾದೇವಿಯನ್ನು ಮದುವೆಯಾಗಿದ್ದ ಕೌಶಿಕ ಮಹಾರಾಜ ಆಕೆಯನ್ನು ತನ್ನ ಅಧೀನದಲ್ಲಿರಿಸಿಕೊಂಡು ಶೋಷಣೆ ಮಾಡುತ್ತಿದ್ದ. ಅದನ್ನು ಧಿಕ್ಕರಿಸಿ ಚೆನ್ನಮಲ್ಲಿಕಾರ್ಜುನ ದೇವರೇ ನನ್ನ ಗಂಡನೆಂದು ಆತನ ದರ್ಶನಕ್ಕೆ ಹೊರಟಳು. ಶ್ರಿಶೈಲಕ್ಕೆ ಹೋಗಿ ಚೆನ್ನಮಲ್ಲಿಕಾರ್ಜುನ ದರ್ಶನ ಪಡೆದು ನಂತರ ಕದಳಿ ವನದಲ್ಲಿ ಆಕೆ ಲಿಂಗೈಕ್ಯಳಾದಳು. ಅಕ್ಕಮಹಾದೇವಿ ಮನೆಯಿಂದ ಹೊರಟ ನಂತರ ಆಕೆಗೆ ದಾರಿಯುದ್ದಕ್ಕೂ ಕಷ್ಟಗಳೇ ಬಂದವು ಆದರೂ ಹೆದರದೆ ಮುನ್ನಡೆದಳು ಆಕೆಯ ಧೈರ್ಯ, ಸಾಹಿತ್ಯ, ನಡೆ ನುಡಿಗಳು ಮಹಿಳೆಯರ ಮನದಲ್ಲಿ ಮೂಡಿದ ಪರಿಣಾಮ ಇಂದು ಸ್ತ್ರೀ ಸ್ವತಂತ್ರಳಾಗಿ ಬದುಕುವಂತಾಗಿದೆ ಎಂದರು.

ಅಂತರಂಗದ ಅರಿವಿನ ಕಣ್ಣು ತೆರೆಸಿ ಕರುಣೆ-ವಿನಯ-ಸಮತೆಗಳನ್ನು ಸ್ಪುರಿಸುವರೋ ಅಂತಹವರು ಜಾತಿ ಮತ ಪಂಥಾತೀತವಾಗಿ ಶ್ರೇಷ್ಠರಾಗುತ್ತಾರೆ. ಧರ್ಮ ಎಂದಿಗೂ ಶೋಷಣೆ ಮಾಡಲ್ಲ. ಶೋಷಣೆ ಮಾಡುವ ಧರ್ಮ ಧರ್ಮವೇ ಅಲ್ಲ. ಸಕಲ ಜೀವಾತ್ಮರಿಗೂ ಲೇಸು ಬಯಸುವ ಧರ್ಮವೆಂದರೆ ಅದು ಬಸವಧರ್ಮ, ಶರಣ ಧರ್ಮ ಎಂಬುದನ್ನು ಮನುಷ್ಯ ಅರ್ಥ ಮಾಡಿಕೊಳ್ಳಬೇಕು ಎಂದರು.

ಬಸವಕೇಂದ್ರ ಅಧ್ಯಕ್ಷ ಶಿವಣ್ಣ ಶರಣ್ಣನವರ, ನಟರಾಜ ಮೂರಶಿಳ್ಳಿ, ಮಲ್ಲಿಕಾರ್ಜುನ ಚೌಧರಿ, ಶಿವಶರಣ ಕಲಬಶೆಟ್ಟರ, ಚನಬಸಪ್ಪ ಕಗ್ಗಣ್ಣವರ, ಉಮೇಶ ಕಟಗಿ, ಶಾರದಾ ಕೌದಿ, ಸುನಿತಾ ಮೂರಶಿಳ್ಳಿ ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ಬಾಗೇವಾಡಿ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next