ಈ ಬಾರಿಯ ಮಹಾಶಿವರಾತ್ರಿ ಹಬ್ಬಕ್ಕೆ ಸಾಲು ಸಾಲು ಚಿತ್ರಗಳು ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿವೆ. ಈ ಚಿತ್ರಗಳ ಸಾಲಿನಲ್ಲಿ ಬಹುತೇಕ ಹೊಸಬರ “ಶಿವ’ ಎನ್ನುವ ಚಿತ್ರವೂ ತನ್ನ ಬಿಡುಗಡೆಯನ್ನು ಘೋಷಿಸಿಕೊಂಡಿದೆ. ಅಂದಹಾಗೆ, ಈ ಚಿತ್ರದ ಹೆಸರು “ಶಿವ’ ಅಂತಿದ್ದರೂ, ಪುರಾಣ-ಪುಣ್ಯಕಥೆಗಳಲ್ಲಿ ಬರುವ ಶಿವನಿಗೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಚಿತ್ರದ ಕಥೆಗೆ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ ಚಿತ್ರತಂಡ ತಮ್ಮ ಚಿತ್ರಕ್ಕೆ “ಶಿವ’ ಅಂಥ ಹೆಸರನ್ನಿಟ್ಟುಕೊಂಡಿದೆಯಂತೆ. ಇನ್ನು ಬಿಡುಗಡೆಗೂ ಮುನ್ನ ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, “ಶಿವ’ನ ವಿಶೇಷತೆಗಳು ಮತ್ತು ಬಿಡುಗಡೆಯ ತಯಾರಿಯ ಬಗ್ಗೆ ಒಂದಷ್ಟು ಮಾತನಾಡಿತು.
ಮೊದಲಿಗೆ ಚಿತ್ರದ ಬಗ್ಗೆ ಮಾತನಾಡಿದ ನಾಯಕ ನಟ ಕಂ ನಿರ್ದೇಶಕ ರಘು ವಿಜಯ ಕಸ್ತೂರಿ, “ಇದೊಂದು ಪಕ್ಕಾ ಹಳ್ಳಿಯ ಸೊಗಡಿನ ಕಥೆಯಿರುವ ಸಿನಿಮಾ. ಮಂಡ್ಯ ಜಿಲ್ಲೆಯ ಹಳ್ಳಿ ಹಿನ್ನಲೆಯಲ್ಲಿ ಇಡೀ ಸಿನಿಮಾ ನಡೆಯುತ್ತದೆ. ನವಿರಾದ ಪ್ರೇಮಕಥೆಯ ಜೊತೆಗೆ ಲೋಕಲ್ ರೌಡಿಸಂ, ಲೋಕಲ್ ಪಾಲಿಟಿಕ್ಸ್, ಲೋಕಲ್ ಗ್ಯಾಂಗಸ್ಟರ್ ಸುತ್ತ ಸಿನಿಮಾದ ಕಥೆ ನಡೆಯುತ್ತದೆ. ಯಾರಿಗೂ ಮುಜುಗರವಾಗದಂಥ ನಿರೂಪಣೆ ಸಿನಿಮಾದಲ್ಲಿದ್ದು, ಮನೆಮಂದಿ ಕೂತು ನೋಡುವಂಥ ಸಿನಿಮಾ ಮಾಡಿದ್ದೇವೆ. ಸಿನಿಮಾದಲ್ಲಿ ಮಾಸ್ ಕಂಟೆಂಟ್, ಜೊತೆಗೊಂದು ಮೆಸೇಜ್ ಎಲ್ಲವೂ ಇದೆ. ಎಲ್ಲರ ಪರಿಶ್ರಮದಿಂದ ಇಂಥದ್ದೊಂದು ಒಳ್ಳೆಯ ಸಿನಿಮಾ ಮಾಡಿದ್ದೇವೆ. ಯಾರಿಗೂ ಕೇರ್ ಮಾಡದ, ಯಾವುದಕ್ಕೂ ತಲೆ ಕೆಡಿಸಿಕೊಳ್ಳದ, ಊರಿನವರಿಗೆ ಉಪಕಾರಿಯಾಗಿರುವ ಹುಡುಗನ ಪಾತ್ರ ನನ್ನದು. ಈ ಹುಡುಗನ ಜೀವನದಲ್ಲಿ ಏನೇನು ನಡೆಯುತ್ತದೆ ಅನ್ನೋದೇ ಈ ಸಿನಿಮಾ’ ಎಂದು ತಮ್ಮ ಚಿತ್ರ ಮತ್ತು ಪಾತ್ರ ಪರಿಚಯ ಮಾಡಿಕೊಟ್ಟರು.
ಚಿತ್ರದಲ್ಲಿ ನಿರ್ದೇಶಕ ಕಂ ನಾಯಕ ರಘುವಿಜಯ ಕಸ್ತೂರಿಗೆ ನಾಯಕಿಯಾಗಿ ಧರಣಿ ಜೋಡಿಯಾಗಿದ್ದಾರೆ. ಇಲ್ಲಿ ಅವರದ್ದು ಹಳ್ಳಿಯಲ್ಲಿ ಟೀಚರ್ ಆಗಿ ಕೆಲಸ ಮಾಡುವ ಹುಡುಗಿಯ ಪಾತ್ರವಂತೆ. ಉಳಿದಂತೆ ನಿಶಾಂತ್, ಬೇಬಿ ಸಾನ್ವಿ, ಪಾಲಳ್ಳಿ ಉಮೇಶ್, ಸತೀಶ್, ಗೀತಾ, ರಂಜನ್ ಶೆಟ್ಟಿ, ಶ್ರೀವತ್ಸ, ಚೇತನ್ ರಾವ್, ಭೂಪತಿ, ಮಂಜು ಸೂರ್ಯ, ಉಮೇಶ ಕೋಟೆ ಮೊದಲಾದ ಕಲಾವಿದರ ತಾರಾಗಣ ಚಿತ್ರದಲ್ಲಿದೆ.
ಆರ್.ವಿ.ಕೆ ಕ್ರಿಯೇಶನ್ಸ್’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ರಘು ವಿಜಯ ಕಸ್ತೂರಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದ ಹಾಡುಗಳಿಗೆ ಸತೀಶ ಬಾಬು ಸಂಗೀತ ಸಂಯೋಜಿಸಿ¨ªಾರೆ. ಚಿತ್ರಕ್ಕೆ ರಮೇಶ ರಾಜ್ ಛಾಯಾಗ್ರಹಣ, ಕುಮಾರ ಕೋಟೆಕೊಪ್ಪ ಸಂಕಲನವಿದೆ. ಶ್ರೀರಂಗಪಟ್ಟಣ, ಮಂಡ್ಯ ಸುತ್ತಮುತ್ತ ಚಿತ್ರದ ಚಿತ್ರೀಕರಣ ಮಾಡಲಾಗಿದೆ.
ಸದ್ಯ ತನ್ನ ಟೀಸರ್, ಟ್ರೇಲರ್ ಮೂಲಕ ಚಿತ್ರದ ಪ್ರಚಾರ ಕಾರ್ಯಗಳನ್ನು ನಡೆಸುತ್ತಿರುವ ಚಿತ್ರತಂಡ, ಇದೇ ಫೆಬ್ರವರಿ 21ರಂದು ಶಿವರಾತ್ರಿ ಹಬ್ಬದ ಸಂಭ್ರಮದಲ್ಲಿ “ಶಿವ’ನನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ. ಇನ್ನು “ಶಿವ’ ಚಿತ್ರದ ಶೀರ್ಷಿಕೆಗೆ ರೌದ್ರ, ರೋಚಕ, ರಮಣೀಯ ಎಂಬ ಅಡಿ ಬರಹವಿದ್ದು, “ಶಿವ’ಎಷ್ಟರ ಮಟ್ಟಿಗೆ ಪ್ರೇಕ್ಷಕ ಪ್ರಭುಗಳಿಗೆ ಹತ್ತಿರವಾಗಲಿದ್ದಾನೆ ಅನ್ನೋದು ಕೆಲ ದಿನಗಳಲ್ಲೆ ಗೊತ್ತಾಗಲಿದೆ.
– ಜಿ. ಎಸ್. ಕಾರ್ತಿಕ ಸುಧನ್