Advertisement

ಕಮರ್ಶಿಯಲ್‌ ಪ್ಯಾಕೇಜ್‌ನಲ್ಲಿ ಶಿವ ನರ್ತನ!

10:17 AM Mar 15, 2020 | Lakshmi GovindaRaj |

ರಾಮದುರ್ಗ-ರಾಯದುರ್ಗ ಎಂಬ ಎರಡು ಊರುಗಳು. ಆ ಊರಿನ ಇಬ್ಬರು ಸಾಹುಕಾರರ ದ್ವೇಷಕ್ಕೆ ದೊಡ್ಡ ಇತಿಹಾಸವೇ ಇದೆ. ಈ ದ್ವೇಷದ ಪರಿಣಾಮ 20 ವರ್ಷ ಗಳಿಂದ ಆ ಊರಲ್ಲಿ ಜಾತ್ರೆಯೇ ನಡೆಯುತ್ತಿಲ್ಲ. ಹೀಗಿ ರುವಾಗ ಆ ಊರ ಸಾಹುಕಾರರ ದ್ವೇಷ ತಣಿಸಿ, ಜಾತ್ರೆ ಮಾಡಲು ಒಬ್ಟಾತ ಬರುತ್ತಾನೆ. ಜಾತ್ರೆ ನಡೆಯುತ್ತದೆ. ಜೊತೆಗೆ ರಕ್ತದೋಕುಳಿ ಕೂಡಾ!  ಈ ಕಥೆಯನ್ನು ಕೇಳಿದಾಗ ನಿಮಗೆ ಒಂದಷ್ಟು ತೆಲುಗು ಸಿನಿಮಾಗಳು ಕಣ್ಣಮುಂದೆ ರಪ್‌ ಅಂತ ಪಾಸಾಗಿ ಮರೆಯಾಗಬಹುದು.

Advertisement

ಹಾಗಂತ ಇದು ತೆಲುಗು ಸಿನಿಮಾದ ಕಥೆಯಲ್ಲ. ಈ ವಾರ ತೆರೆಕಂಡಿರುವ “ಶಿವಾರ್ಜುನ’ ಚಿತ್ರದ ಒನ್‌ಲೈನ್‌. “ಶಿವಾರ್ಜುನ’ ಒಂದು ಪಕ್ಕಾ ಕಮರ್ಷಿಯಲ್‌ ಎಂಟರ್‌ಟೈನರ್‌. ಒಂದು ಕಮರ್ಷಿಯಲ್‌ ಸಿನಿಮಾದಲ್ಲಿ ಏನಿರಬೇಕೋ ಆ ಎಲ್ಲಾ ಅಂಶಗಳು ಈ ಚಿತ್ರದಲ್ಲಿ ಸ್ವಲ್ಪ ಹೆಚ್ಚೇ ತುಂಬಿ ತುಳುಕುತ್ತಿವೆ. ಕಾಮಿಡಿ, ರೊಮ್ಯಾನ್ಸ್‌, ಹಾಡು, ಫೈಟ್‌ ಕೊನೆಗೆ ಒನ್‌ಲೈನ್‌ ಕಥೆ. ಇವೆಲ್ಲವನ್ನು ಮಿಶ್ರಮಾಡಿ ಪ್ರೇಕ್ಷಕರ ಮುಂದೆ ಬಡಿಸಲಾಗಿದೆ. ಕಥೆಯ ಹಂಗಿಗೆ ನಿರ್ದೇಶಕರು ಬಿದ್ದಿಲ್ಲ.

ಇಡೀ ಸಿನಿಮಾವನ್ನು ಸನ್ನಿವೇಶಗಳ ಮೂಲಕ ಕಟ್ಟಿಕೊಡಬೇಕೆಂಬ ಅವರ ಉದ್ದೇಶ ತೆರೆಮೇಲೆ ಎದ್ದು ಕಾಣುತ್ತದೆ. ಸಿನಿಮಾ ಆರಂಭವಾಗಿ ಇಂಟರ್‌ವಲ್‌ವರೆಗೆ ಚಿತ್ರದ ಕಥೆ ಏನು ಎಂಬುದನ್ನು ಊಹಿಸಿ ಕೊಳ್ಳೋದೇ ಪ್ರೇಕ್ಷಕರಿಗೆ ಒಂದು ಸವಾಲಿನ ಕೆಲಸ. ಆ ತರಹದ ಒಂದಷ್ಟು ಟ್ವಿಸ್ಟ್‌ಗಳನ್ನು ಸಿನಿಮಾದಲ್ಲಿಟ್ಟಿದ್ದಾರೆ. ಚಿತ್ರದ ದ್ವಿತೀ ಯಾರ್ಧದಲ್ಲಿ ಜಾತ್ರೆ ಸೆಟಪ್‌ನಲ್ಲಿ ನಡೆಯುವ ಫೈಟ್‌, ಗಾಳಿಯಲ್ಲಿ ಹಾರುವ ಕೆಜಿಗಟ್ಟಲೆ.

ಅರಶಿನ, ಕುಂಕುಮವನ್ನು ನೋಡುವ ಮುನ್ನ ಭರ್ಜರಿ ಕಾಮಿಡಿಯನ್ನು ಪ್ರೇಕ್ಷಕರು ಕಣ್ತುಂಬಿ ಕೊಳ್ಳಬೇ ಕೆಂಬುದು ನಿರ್ದೇಶಕರ ಉದ್ದೇಶದಂತಿದೆ. ಅದೇ ಕಾರಣದಿಂದ ಆರಂಭದಿಂದಲೇ ಸಿಕ್ಕಾಪಟ್ಟೆ ಕಾಮಿಡಿ ದೃಶ್ಯಗಳು ಬರುತ್ತವೆ. ಕೇವಲ ಕಾಮಿಡಿಯಲ್ಲ. ಆ ಕಾಮಿಡಿಗೆ ಹಾಟ್‌ ಟಚ್‌ ಕೂಡಾ ಕೊಟ್ಟಿದ್ದಾರೆ. ಒಂದು ಹಂತಕ್ಕೆ ಈ ಚಿತ್ರದ ಹೀರೋ ಸಾಧುಕೋಕಿಲನಾ ಎಂಬ ಸಣ್ಣ ಸಂದೇಹ ಬರುವ ಮಟ್ಟಿಗೆ ಸಾಧು ತೆರೆಮೇಲೆ “ಕುಣಿ’ದಾಡಿದ್ದಾರೆ.

ಚಿತ್ರ ಗಂಭೀರವಾಗೋದು ದ್ವಿತೀಯಾರ್ಧದಲ್ಲಿ. ಈ ಸಿನಿಮಾಕ್ಕೊಂದು ಕಥೆ ಇದೆ ಎಂದು ಗೊತ್ತಾ ಗೋದು ಕೂಡಾ ಅಲ್ಲೇ. ಈ ಚಿತ್ರಕ್ಕೊಂದು ಫ್ಲ್ಯಾಶ್‌ಬ್ಯಾಕ್‌ ಕೂಡಾ ಇದ್ದು, ದ್ವಿತೀಯಾರ್ಧವನ್ನು ಅದೇ ಆವರಿಸಿಕೊಳ್ಳುತ್ತದೆ. ಮೊದಲೇ ಹೇಳಿದಂತೆ ಇದೊಂದು ಕಮರ್ಶಿಯಲ್‌ ಎಂಟರ್‌ಟೈನರ್‌ ಆಗಿರೋದರಿಂದ ಇಲ್ಲಿ ಲಾಜಿಕ್‌ ಹುಡುಕುವಂತಿಲ್ಲ. ಬಂದಿದ್ದನ್ನು ಬಂದಂತೆ ಸ್ವೀಕರಿಸಿಕೊಂಡು ಮುಂದೆ ಸಾಗಬೇಕು.

Advertisement

ಹಾಡು, ಫೈಟ್‌, ರೊಮ್ಯಾನ್ಸ್‌ … ಎಲ್ಲವೂ ಆಗಾಗ ಬರುತ್ತಿರುತ್ತದೆ. ಪಕ್ಕಾ ತೆಲುಗು ಕಮರ್ಷಿಯಲ್‌ ಸಿನಿಮಾ ಇಷ್ಟಪಡುವವರಿಗೆ “ಶಿವಾರ್ಜುನ’ ಖುಷಿ ಕೊಡಬಹುದು. ನಾಯಕ ಚಿರಂಜೀವಿ ಸರ್ಜಾ ಅವರಿಗೆ ಈ ತರಹದ ಪಾತ್ರ ಹೊಸದೇನಲ್ಲ. ಈ ಹಿಂದೆಯೂ “ಸಿಂಗ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಪಕ್ಕಾ ಆ್ಯಕ್ಷನ್‌ ಹೀರೋ ಆಗಿ, ರೆಬೆಲ್‌ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಇಲ್ಲೂ ಅದೇ ಮುಂದುವರೆದಿದೆ.

ತಮ್ಮ ಪಾತ್ರಕ್ಕೆ ಎಂದಿನಂತೆ ಚಿರಂಜೀವಿ ನ್ಯಾಯ ಒದಗಿಸಿದ್ದಾರೆ. ಚಿತ್ರದಲ್ಲಿ ನಾಯಕಿಯರಿಗೆ ಹೆಚ್ಚೇನು ಸ್ಕೋಪ್‌ ಅಲ್ಲ. ಆದರೆ, ಅಕ್ಷತಾ ಶ್ರೀನಿವಾಸ್‌ ಗ್ಲಾಮರ್‌ಗೆ ಸೀಮಿತವಾದರೆ, ಅಮೃತಾ ಬಜಾರಿ ಯಾಗಿ ಕಾಣಿಸಿಕೊಂಡಿದ್ದಾರೆ. ತಾರಾ ಜೊತೆಗೆ ಅವರ ಪುತ್ರ ಕೂಡಾ ತೆರೆಹಂಚಿಕೊಂಡಿದ್ದು, ಬಾಲ ನಟನಾಗಿ ಭರವಸೆ ಮೂಡಿಸಿದ್ದಾರೆ. ಉಳಿದಂತೆ ರವಿಕಿಶನ್‌, ಕಿಶೋರ್‌, ಅವಿನಾಶ್‌, ಸಾಧುಕೋಕಿಲ, ವಿಶ್ವ, ಶಿವರಾಜ್‌ ಕೆ.ಆರ್‌.ಪೇಟೆ ಎಲ್ಲರೂ ನಟಿಸಿದ್ದಾರೆ.

ಚಿತ್ರ: ಶಿವಾರ್ಜುನ
ನಿರ್ಮಾಣ: ಎಂ.ಬಿ.ಮಂಜುಳಾ ಶಿವಾರ್ಜುನ್‌
ನಿರ್ದೇಶನ: ಶಿವತೇಜಸ್‌
ತಾರಾಗಣ: ಚಿರಂಜೀವಿ, ಅಕ್ಷತಾ, ಅಮೃತಾ, ತಾರಾ, ಅವಿನಾಶ್‌, ರವಿಕಿಶನ್‌, ಸಾಧುಕೋಕಿಲ ಮತ್ತಿತರರು.

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next