ಮೈಸೂರು: ಶಿವಬಸಪ್ಪ ನಮ್ಮ ಜೊತೆನೇ ಇದ್ರು, ಈ ಜೆಡಿಎಸ್-ಬಿಜೆಪಿಯವರು ಕರ್ಕೊಂಡೋಗಿ ಉಪ ಚುನಾವಣೆಲಿ ನನ್ನ ವಿರುದ್ಧ ನಿಲ್ಲುಸುºಟ್ರ, ಒಳ್ಳೆ ಫೈಟ್ ಕೊಟ್ಟಿದ್ರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೆನೆದರು.
ಚಾಮುಂಡೇಶ್ವರಿ ಕ್ಷೇತ್ರದ ದಾರಿಪುರ ಗ್ರಾಮದಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು, ಈ ಗ್ರಾಮ 35 ವರ್ಷಗಳಿಂದ ನನಗೆ ಪರಿಚಿತ. 2006ರ ಜಿದ್ದಾಜಿದ್ದಿ ಉಪ ಚುನಾವಣೆಯಲ್ಲೂ ನನ್ನ ಕೈಹಿಡಿದಿದ್ರು ಎಂದರು.
ಆಗ ನಮ್ಮ ಸರ್ಕಾರ ಇರಲಿಲ್ಲ. ನಾನು ಕಾಂಗ್ರೆಸ್ ಸೇರಿದ್ದೆ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ, ಯಡಿಯೂರಪ್ಪ ಉಪ ಮುಖ್ಯಮಂತ್ರಿ. ಇಬ್ಬರೂ ಸೇರಿ ಶಿವಬಸಪ್ಪ ಅವರನ್ನು ಅಭ್ಯರ್ಥಿಯಾಗಿ ನಿಲ್ಲುಸುºಟ್ರಾ. ಅವರು ಒಳ್ಳೇ ಫೈಟ್ ಕೊಟ್ರಾ, ಆದರೂ 257 ಮತಗಳ ಅಂತರದಿಂದ ಗೆಲ್ಲಿಸಿದ್ದೀರಿ.
ಕ್ಷೇತ್ರ ಪುನರ್ ವಿಂಗಡಣೆ ನಂತರ ನಮ್ಮೂರು ಸಿದ್ದರಾಮನಹುಂಡಿ ಬರುವುದರಿಂದ ವರುಣಾದಲ್ಲಿ 2008,2013ರಲ್ಲಿ ನಿಂತು ಗೆದ್ದೆ, ಈಗ ಮುಖ್ಯಮಂತ್ರಿಯಾಗಿ ಬಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ. ಹಿಂದೆ ನೀವು ಗೆಲ್ಲಿಸಿದಾಗ ಮುಖ್ಯಮಂತ್ರಿಯಾಗಿರಲಿಲ್ಲ. ಈಗ ಗೆಲ್ಲಿಸಿದರೆ ಮತ್ತೂಮ್ಮೆ ಮುಖ್ಯಮಂತ್ರಿಯಾಗುವ ಅವಕಾಶವಿದೆ ಎಂದರು.
ತಾಪಂ, ಜಿಪಂ ಚುನಾವಣೆಯಲ್ಲಿ ಜೆಡಿಎಸ್ ಗೆಲ್ಲಿಸಿದ್ದೀರಿ, ಈ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ಜಯಪುರದ ಸಭೆ ವೇಳೆ ಕೆಲವರು ಮುಂದಿನ ಪ್ರಧಾನಿ ಸಿದ್ದರಾಮಯ್ಯಗೆ ಜೈ ಎಂದು ಘೋಷಣೆ ಕೂಗಿದಾಗ ಮೊದಲು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಎಂಎಲ್‌ಎ ಗೆಲ್ಲಿಸ್ರಪ್ಪ, ಆ ಮೇಲೆ ನೋಡೋಣ ಎಂದು ಹೇಳಿದರು.