ಹಿರಿಯ ಯಕ್ಷಗಾನ ಕಲಾವಿದ, ಸ್ತ್ರೀ ಪಾತ್ರಧಾರಿ ಕುರ್ನಾಡು ಶಿವಣ್ಣ ಆಚಾರ್ಯರಿಗೆ ಈ ವರ್ಷದ ಬೋಳೂರು ದೋಗ್ರ ಪೂಜಾರಿ ಪ್ರಶಸ್ತಿ ಪ್ರಕಟವಾಗಿದೆ.ದಮಯಂತಿ, ಕಯಾದು, ಗುಣಸುಂದರಿ, ದೇಯಿ ಬೈದೆತಿ ,ಕಟೀಲು ಕ್ಷೇತ್ರ ಮಹಾತ್ಮೆಯ ಜಾಬಾಲಿ, ಪಂಚವಟಿಯ ರಾಮ, ದೇವಿ ಮಹಾತ್ಮೆಯ ಮಾಲಿನಿ, ದಿತಿ, ದೇವಿ, ಇಂದ್ರಜಿತು ಕಾಳಗದ ಲಕ್ಷ್ಮಣ ಇತ್ಯಾದಿ ವೇಷಗಳನ್ನು ನಿರ್ವಹಿಸಿರುವ ಶಿವಣ್ಣ ಆಚಾರ್ಯ ಹಲವಾರು ವರ್ಷಗಳ ಕಾಲ ಪೋಷಕ ಪಾತ್ರಗಳನ್ನು ನಿರ್ವಹಿಸಿ ಅನುಭವ ಸಾಧಿಸಿದ ಬಳಿಕ ಪ್ರಧಾನ ಪಾತ್ರಗಳತ್ತ ಹೆಜ್ಜೆ ಹಾಕಿದರು.
ಬಂಟ್ವಾಳ ತಾಲೂಕಿನ ಪುಣಚ ಇವರ ಹುಟ್ಟೂರು. ಅಚ್ಚುತ ಆಚಾರ್ಯ ಮತ್ತು ಸರಸ್ವತಿ ದಂಪತಿಗಳ ಪುತ್ರ. 15.6.1942ರಂದು ಜನನ. ಶೈಕ್ಷಣಿಕ ವಿದ್ಯಾಭ್ಯಾಸ 4ನೇ ತರಗತಿಯವರೆಗೆ. ಪುಣಚ ನಾಗಪ್ಪ ಭಂಡಾರಿ ಅವರಿಂದ ಯಕ್ಷಗಾನ ನಾಟ್ಯ ಕಲಿತರು. ಪುಳಿಂಚ ರಾಮಯ್ಯ ಶೆಟ್ಟಿ, ಕೋಳ್ಯೂರು ನಾರಾಯಣ ಭಟ್ ಅವರುಗಳಿಂದಲೂ ನಾಟ್ಯಗಾರಿಕೆಯನ್ನು ಅಭ್ಯಾಸ ಮಾಡಿದ ಇವರು ಹಿರಿಯ ಕಲಾವಿದರ ಒಡನಾಟ ಗಳಿಸಿದರು. ಭಾಗವತರಾಗಿದ್ದ ಚಿಕ್ಕಪ್ಪ ಶ್ರೀನಿವಾಸ ಆಚಾರ್ಯ ಅವರಿಂದಲೂ ಪ್ರೇರಣೆ ಪಡೆದಿದ್ದಾರೆ.
ಸ್ತ್ರೀಪಾತ್ರಕ್ಕೆ ಬೇಕಾದ ರೂಪವಿದ್ದುದರಿಂದ ಈ ಪಾತ್ರಗಳಿಗೆ ಇವರನ್ನು ಆಯ್ಕೆ ಮಾಡಿದ್ದರು. ರೂಪಕ್ಕೆ ತಕ್ಕ ಅಭಿನಯ, ನಾಟ್ಯ, ಭಾವಪೂರ್ಣ ಪಾತ್ರ ನಿರ್ವಹಣೆ ಇವರಿಗೆ ಪ್ರಸಿದ್ಧಿಯನ್ನು ತಂದು ಕೊಟ್ಟಿತು. ಪುಂಡು ವೇಷ, ಕಿರೀಟ ವೇಷಗಳನ್ನೂ ಮಾಡಿದ್ದಾರೆ. ಧರ್ಮಸ್ಥಳ, ಕೂಡ್ಲು, ಮೂಲ್ಕಿ, ವೇಣೂರು, ಸುಂಕದಕಟ್ಟೆ, ಮಲ್ಲ, ನಂದಾವರ ಮೊದಲಾದ ಮೇಳಗಳಲ್ಲಿ ತಿರುಗಾಟ ನಡೆಸಿದ ಇವರು ಪ್ರಸಿದ್ಧ ಕಲಾವಿದರೊಂದಿಗೆ ಪಾತ್ರ ನಿರ್ವಹಿಸಿದ್ದಾರೆ.
ಸುಭದ್ರೆ, ಚಂದ್ರಮತಿ ಮೊದಲಾದ ಪಾತ್ರಗಳನ್ನು ಭಾವನಾತ್ಮಕವಾಗಿ ನಿರ್ವಹಿಸುತ್ತಿದ್ದರು. ರಾವಣ ವಧೆ ಪ್ರಸಂಗದಲ್ಲಿ ಶೇಣಿಯವರ ರಾವಣ, ಶಿವಣ್ಣ ಆಚಾರ್ಯರ ಮಂಡೋದರಿ ಕೆಲವು ಬಾರಿ ನಡೆದಿತ್ತು. ಪೆರುವಡಿ ನಾರಾಯಣ ಭಟ್ಟರ ಬಾಹುಕ, ಇವರ ದಮಯಂತಿ, ಪೆರುವಡಿಯವರ ಪಾಪಣ್ಣ, ಆಚಾರ್ಯರ ಗುಣಸುಂದರಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದೆ.
17ರಂದು ಪ್ರಶಸ್ತಿ ಪ್ರದಾನ
ಮೇಳಗಳ ಸಂಚಾಲಕರೂ ಆಗಿದ್ದ ಕೀರ್ತಿಶೇಷ ಬೋಳೂರು ದೋಗ್ರ ಪೂಜಾರಿ ಅವರ 38ನೆಯ ವರ್ಷದ ಸಂಸ್ಮರಣಾ ಪ್ರಶಸ್ತಿ ಮಂಗಳೂರು ಪುರಭವನದಲ್ಲಿ ಜುಲೈ 17ರಂದು ಪ್ರದಾನವಾಗಲಿದೆ. ಇದೇ ಸಂದರ್ಭದಲ್ಲಿ ಪ್ರಸಿದ್ದ ಕಲಾದರ ಕೂಡುವಿಕೆಯಿಂದ “ಸುದರ್ಶನ ವಿಜಯ’ ಎಂಬ ತಾಳಮದ್ದಳೆ ನಡೆಯಲಿದೆ.
ಎಲ್.ಎನ್.ಭಟ್ ಮಳಿ