ಮುಂಬೈ:ನೌಕಾಪಡೆಯ ಮಾಜಿ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಶಿವಸೇನಾ ಮುಖಂಡ ಕಮಲೇಶ್ ಕದಂಬ ಸೇರಿದಂತೆ ಆರು ಮಂದಿಯನ್ನು ಮುಂಬೈ ಪೊಲೀಸರು ಶುಕ್ರವಾರ (ಸೆ.11, 2020) ಬಂಧಿಸಿರುವುದಾಗಿ ವರದಿ ತಿಳಿಸಿದೆ.
ವರದಿಯ ಪ್ರಕಾರ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಟೀಕಿಸುವ ಕಾರ್ಟೂನ್ ಅನ್ನು ನೌಕಾಪಡೆ ಮಾಜಿ ಅಧಿಕಾರಿ ವಾಟ್ಸಪ್ ನಲ್ಲಿ ಫಾರ್ವರ್ಡ್ ಮಾಡಿರುವುದಾಗಿ ಆರೋಪಿಸಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿ ವಿವರಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ನೌಕಾಪಡೆ ಮಾಜಿ ಅಧಿಕಾರಿಯನ್ನು ಮದನ್ ಶರ್ಮಾ (65ವರ್ಷ) ಎಂದು ಗುರುತಿಸಲಾಗಿದೆ. ಶಿವಸೇನಾ ಮುಖಂಡ ಕದಂಬ್ ಹಾಗೂ ಪಕ್ಷದ ಕಾರ್ಯಕರ್ತರು ಹಲ್ಲೆ ನಡೆಸಿದ ಪರಿಣಾಮ ಶರ್ಮಾ ಅವರ ಕಣ್ಣಿಗೆ ಏಟು ಬಿದ್ದಿರುವುದಾಗಿ ವರದಿ ತಿಳಿಸಿದೆ.
ಇಡೀ ಪ್ರಕರಣ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಮುಂಬೈನ ಕಾಂದಿವಲಿಯ ಲೋಖಾಂಡವಾಲಾ ಕಾಂಪ್ಲೆಕ್ಸ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಐಪಿಸಿ ಸೆಕ್ಷನ್ 325ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉದ್ಧವ್ ಅವರ ಕಾರ್ಟೂನ್ ಫಾರ್ವರ್ಡ್ ಮಾಡಿದ ವಿಚಾರಕ್ಕೆ ತನ್ನ ಮೇಲೆ 8ರಿಂದ ಹತ್ತು ಮಂದಿ ತಂಡ ದಾಳಿ ನಡೆಸಿ, ಹೊಡೆದಿದ್ದರು. ಅಷ್ಟೇ ಅಲ್ಲ ನನಗೆ ಬೆದರಿಕೆ ಕರೆ ಕೂಡಾ ಬಂದಿತ್ತು. ನನ್ನ ಇಡೀ ಜೀವಮಾನ ದೇಶಕ್ಕಾಗಿ ಸೇವೆ ಸಲ್ಲಿಸಿದ್ದೇನೆ. ಸರಕಾರ ಈ ರೀತಿ ನಡೆದುಕೊಳ್ಳಬಾರದು ಎಂದು ಶರ್ಮಾ ಎಎನ್ ಐ ಜತೆ ಮಾತನಾಡುತ್ತ ತಿಳಿಸಿದ್ದಾರೆ.