ಮುಂಬಯಿ: ಇಂಧನ ಬೆಲೆ ಹೆಚ್ಚಳವಾಗಲು ಅಮೆರಿಕದಲ್ಲಿ ಬೀಸಿದ ಚಂಡಮಾರುತ ಕಾರಣ ಎಂದಿರುವ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಹೇಳಿಕೆಯನ್ನು ಲೇವಡಿ ಮಾಡಿರುವ ಶಿವಸೇನೆ ಚಂಡಮಾರುತದಿಂದ ಅಮೆರಿಕ ಅಥವ ಯುರೋಪ್‌ನಲ್ಲೇಕೆ ಇಂಧನ ಬೆಲೆ ಹೆಚ್ಚಲಿಲ್ಲ ಎಂದು ಪ್ರಶ್ನಿಸಿದೆ.
ಧರ್ಮೇಂದ್ರ ಪ್ರಧಾನ್ ಕೆಲ ದಿನಗಳ ಹಿಂದೆ ಇಂಧನ ಬೆಲೆಯೇರಲು ಅಮೆರಿಕದಲ್ಲಿ ಬೀಸಿದ ಚಂಡಮಾರುತ ಕಾರಣ. ಇದೊಂದು ತಾತ್ಕಾಲಿಕ ವಿದ್ಯಮಾನವಾಗಿದ್ದು, ಬೆಲೆ ಕಡಿಮೆ ಯಾಗಲಿದೆ ಎಂದಿದ್ದರು. ಇಂಧನ ಬೆಲೆ ಹೆಚ್ಚಳವನ್ನು ತೀವ್ರವಾಗಿ ಪ್ರತಿಭಟಿಸು ತ್ತಿರುವ ಶಿವಸೇನೆ ಬೀದಿಗಿಳಿದು ಹೋರಾಟ ಮಾಡುತ್ತಿದೆ.
2014ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೇರಿದ ಬಳಿಕ ಅಡುಗೆ ಗ್ಯಾಸ್, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಹೆಚ್ಚುತ್ತಿರುವುದೇಕೆ ಎಂದೂ ಶಿವಸೇನೆ ಪ್ರಶ್ನಿಸಿದೆ. ಚಂಡಮಾರುತದಿಂದ ಇಂಧನ ಬೆಲೆ ಹೆಚ್ಚುವುದಾದರೆ ಅಮೆರಿಕ ಮತ್ತು ಯುರೋಪ್‌ನಲ್ಲೂ ಹೆಚ್ಚಬೇಕಿತ್ತು. ಭಾರತದಲ್ಲಿ ಮಾತ್ರ ಹೆಚ್ಚುತ್ತಿರುವುದೇಕೆ? ಮೋದಿ ಸರಕಾರ ಬಂದ ಬಳಿಕ ಅಭಿವೃದ್ಧಿ ದರ ಕುಸಿದಿದೆ, ಔದ್ಯೋಗೀಕರಣ ಕುಂಠಿತಗೊಂಡಿದೆ ಮತ್ತು ನಿರುದ್ಯೋಗ ಹೆಚ್ಚಳವಾಗಿದೆ ಎಂದು ಎನ್‌ಡಿಎ ಅಂಗವಾಗಿರುವ ಶಿವಸೇನೆ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಟೀಕಿಸಿದೆ.
ಶಿಕ್ಷಣದಿಂದ ಹಿಡಿದು ಕೊತ್ತಂಬರಿ ಸೊಪ್ಪು ಮತ್ತು ಸಕ್ಕರೆ ತನಕ ಪ್ರತಿಯೊಂದರ ಬೆಲೆ ಹೆಚ್ಚಾಗಿದೆ. ಶಿವಸೇನೆ ಸಂಸದರು ಮತ್ತು ಶಾಸಕರು ಗೆದ್ದು ಬಂದಿರುವುದು ಮೋದಿ ಅಲೆಯಿಂದ ಎನ್ನುವವರಿಗೆ ಕಳೆದ 25-30 ವರ್ಷಗಳಿಂದ ತಾವು ಉಳಿದಿರುವುದು ಶಿವಸೇನೆಯ ಅಲೆಯಿಂದ ಎನ್ನುವುದು ಮರೆತು ಹೋಗಿದೆ. ಮೋದಿ ಅಲೆ ಅಷ್ಟು ಪ್ರಬಲವಾಗಿದ್ದರೆ ಜನಸಾಮಾನ್ಯರ ಸಮಸ್ಯೆಗಳೇಕೆ ಪರಿಹಾರವಾಗುತ್ತಿಲ್ಲ ಎಂದು ಬಿಜೆಪಿಯನ್ನು ಚುಚ್ಚಿದೆ.
ಶಿವಸೇನೆ ಮುಂಬಯಿ ಮತ್ತಿತ ರೆಡೆಗಳಲ್ಲಿ ಹಣದುಬ್ಬರ ಮತ್ತು ಬೆಲೆಯೇರಿಕೆ ವಿರುದ್ಧ ತೀವ್ರ ಆಂದೋಲನ ನಡೆಸಿತ್ತು. ಇದನ್ನು ಟೀಕಿಸಿದ ಆಶೀಶ್ ಶೆಲಾರ್ ಅವರು (ಶಿವಸೇನೆ) ಅಧಿಕಾರಕ್ಕೆ ಬಂದಿರುವುದು ಮೋದಿ ಅಲೆಯಿಂದಾಗಿ ಮತ್ತು ಅವರು ಅಧಿಕಾರದಲ್ಲಿರುವುದು ಬಿಜೆಪಿ ಯಿಂದಾಗಿ ಎಂದಿದ್ದರು. ಅದಕ್ಕೆ ಶಿವಸೇನೆ ಇಂದು ತಿರುಗೇಟು ನೀಡಿದೆ.