ಮುಂಬಯಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಸೇನಾ ಸಂಸದ ಸಂಜಯ್ ರಾವುತ್ ಅವರನ್ನು ಭಾನುವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ವಶಕ್ಕೆ ಪಡೆದಿದೆ.
ರಾವುತ್ ಅವರ ನಿವಾಸದ ಹೊರಗೆ ಭಾರಿ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪತ್ರಾ ಚಾಲ್ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ನಿವಾಸದ ಮೇಲೆ ದಾಳಿ ನಡೆಸಿ ಇಡಿ ಅವರನ್ನು ವಶಕ್ಕೆ ಪಡೆದಿದೆ.
ಇಡಿ ಅಧಿಕಾರಿಗಳು ವಶಕ್ಕೆ ಪಡೆದು ಕರೆದೊಯ್ಯುವ ವೇಳೆ ಕೇಸರಿ ಶಾಲು ಧರಿಸಿ ಹೊರ ಬಂದ ರಾವುತ್ ಮನೆಯ ಹೊರಗಿದ್ದ ಬೆಂಬಲಿಗರತ್ತ ಕೈ ಬೀಸಿದರು. ಕಾರಿನ ಮೇಲೇರಿ ಶಾಲು ಗಾಳಿಯಲ್ಲಿ ಹಾರಿಸಿ ಅಧಿಕಾರಿಗಳೊಂದಿಗೆ ತೆರಳಿದರು.
ದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ ಅಧಿವೇಶನದ ಕಾರಣ ನೀಡಿ ಎರಡು ಬಾರಿ ವಿಚಾರಣೆಗೆ ಗೈರಾಗಿದ್ದ ರಾವುತ್ ಅವರ ನಿವಾಸಕ್ಕೆ ಭಾನುವಾರ ಬೆಳಗ್ಗೆ 7 ಗಂಟೆಗೆ ಇ ಡಿ ತಂಡ ಸಿಐಎಸ್ಎಫ್ ಅಧಿಕಾರಿಗಳೊಂದಿಗೆ ಬಾಂಡುಪ್ ನಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿತ್ತು.
ರಾವುತ್ ಅವರು ನಾನು ಹಗರಣದಲ್ಲಿ ಭಾಗಿಯಾಗಿಲ್ಲ, ಸತ್ತರೂ ಶರಣಾಗುವ ಪ್ರಶ್ನೆಯೇ ಇಲ್ಲ ಎಂದಿದ್ದರು.