Advertisement

ಕೊರೊನಾ ನಿಯಂತ್ರಣಕ್ಕಾಗಿ ಶ್ರೀಶೈಲದ ಯಾತ್ರೆಯನ್ನು ಸ್ಥಗಿತಗೊಳಿಸಿ: ಶ್ರೀಶೈಲ ಜಗದ್ಗುರುಗಳು

09:58 AM Mar 16, 2020 | keerthan |

ಬನಹಟ್ಟಿ: ದೇಶದಲ್ಲಿ ಮಾರಕ ಕೊರೊನಾ ವೈರಸ್ ಹಲವಾರು ಕಡೆಗಳಲ್ಲಿ ಹರಡುತ್ತಿರುವುದರಿಂದ ಶ್ರೀಶೈಲದ ಯುಗಾದಿ ಜಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸುವ ಭಕ್ತರು ತಮ್ಮ ಯಾತ್ರೆಯನ್ನು ಸ್ಥಗಿತಗೊಳಿಸಬೇಕೆಂದು ಶ್ರೀ ಶ್ರೀಶೈಲ ಜಗದ್ಗುರು ಡಾ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದ್ದಾರೆ.

Advertisement

ಭಾನುವಾರ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಸೋಂಕು ಒಂದು ಮಾರಣಾಂತಿಕ ರೋಗಾಣು ಆಗಿದ್ದು ಸೋಂಕು ತಗುಲಿದ ಒಬ್ಬ ವ್ಯಕ್ತಿಯು ಸಾವಿರ ಜನರು ಒಂದೆಡೆ ಸೇರಿದಾಗ ಅವರ ಮಧ್ಯದಲ್ಲಿ ಬಂದು ಸೀನಿದರೆ ಅಥವಾ ಕೆಮ್ಮಿದರೆ ಅವನಿಂದ ಇನ್ನೊಬ್ಬರಿಗೆ, ಅವನಿಂದ ಮತ್ತೊಬ್ಬನಿಗೆ ಹೀಗೆ ಕ್ರಮೇಣ ಆ ಸಾವಿರ ಜನರಿಗೂ ತಗುಲುವ ಸಾಧ್ಯತೆ ಇರುತ್ತದೆ. ಈ ಸೋಂಕು ತಗುಲಿದ ನಂತರ ಇದನ್ನು ತಡೆಗಟ್ಟಲು ಯಾವುದೇ ಔಷದ ಇಲ್ಲದ ಕಾರಣ ಇದು ಎಲ್ಲಿಯೂ ಹರಡದಂತೆ ಇದರ ವಿರುದ್ಧ ಹೋರಾಡುವುದು ಎಲ್ಲರ ಕರ್ತವ್ಯವಾಗಿದೆ ಎಂದರು.

ದೇವಸ್ಥಾನಗಳು ಭಾರತ ದೇಶದ ಮನುಕುಲದ ಕಲ್ಯಾಣ ಕೇಂದ್ರಗಳಾಗಿದ್ದು ಇವು ಮನುಷ್ಯರ ಮಾರಣ ಹೋಮಕ್ಕೆ ಕಾರಣವಾಗಬಾರದು. ಆದ್ದರಿಂದ ಭಾವಾವೇಶಕ್ಕೆ ಒಳಗಾಗಿ ವಾಸ್ತವಿಕ ಪರಿಸ್ಥಿತಿಯನ್ನು ಅಲಕ್ಷಿಸಿ ಭಕ್ತಿಯ ಹೆಸರಿನಲ್ಲಿ ಹುಚ್ಚು ಧೈರ್ಯವನ್ನು ಪ್ರದರ್ಶಿಸಲು ಪ್ರಯತ್ನಿಸದೇ ಎಲ್ಲ ಭಕ್ತರು ತಮ್ಮ ಶ್ರೀಶೈಲ ಯಾತ್ರೆಯನ್ನು ಸ್ಥಗಿತಗೊಳಿಸುವುದು ಸೂಕ್ತ ಎಂಬ ಸಲಹೆ ನೀಡಿದರು.

ಈಗಾಗಲೇ ಪಾದಯಾತ್ರೆಯ ಮೂಲಕ ಶ್ರೀಶೈಲಕ್ಕೆ ಹೊರಟು ಮಾರ್ಗಮಧ್ಯದಲ್ಲಿ ಇರುವವರು ಕೂಡ ಮರಳಿ ಹೋಗುವುದು ಒಳ್ಳೆಯದು ಅಥವಾ ವಾಹನಗಳ ಮೂಲಕ ನೇರವಾಗಿ ಕ್ಷೇತ್ರಕ್ಕೆ ಹೋಗಿ ದೇವರ ದರ್ಶನ ಪಡೆದು ತಕ್ಷಣ ಮರಳಿ ತಮ್ಮ ತಮ್ಮ ಗ್ರಾಮಕ್ಕೆ ಬರುವುದು ಉತ್ತಮ. ಅನೇಕರು ಕಂಬಿಗಳನ್ನು ತೆಗೆದುಕೊಂಡು ಹೊರಟವರು ಮರಳಿ ಬರಲು ಸಾಧ್ಯವಿಲ್ಲದವರು ದಾರಿಯಲ್ಲಿ ವೈದ್ಯರ ಸಲಹೆ ಪಡೆದು ಕರೊನಾ ಸೋಂಕು ತಗಲದಿರುವ ಎಚ್ಚರಿಕೆಯ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುತ್ತ ಶ್ರೀಶೈಲಕ್ಕೆ ಹೋಗಿ ತಮ್ಮ ಪ್ರಾಚೀನ ಪಾರಂಪರಿಕ ವಿಧಿವಿಧಾನಗಳನ್ನು ಪೂರೈಸಿ ಆದಷ್ಟು ಶೀಘ್ರ ಶ್ರೀಶೈಲದಿಂದ ಹೊರಟು ತಮ್ಮ ತಮ್ಮ ಊರುಗಳನ್ನು ಸೇರಬೇಕು ಎಂದರು.

ಶ್ರೀಶೈಲಕ್ಕೆ ಜಾತ್ರೆಗೆ ಬರುವ ಭಕ್ತರೆಲ್ಲರ ಅನುಕೂಲ ಮತ್ತು ಸಂತೋಷಕ್ಕಾಗಿ ಶ್ರೀಶೈಲ ಪೀಠದಿಂದ ಮಾ. 19 ರಿಂದ 23 ರವರೆಗೆ ಐದು ದಿನಗಳ ಕಾಲ “ಮಲ್ಲಯ್ಯನ ಭಕ್ರ ಬೃಹತ್ ಸಮಾವೇಶ” ಮತ್ತು ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಯೋಜಿಸಿ ಮಾ. 21ರಂದು ಕರ್ನಾಟಕದ ಮುಖ್ಯ ಮಂತ್ರಿಗಳಾದ ಮಾನ್ಯ ಬಿ ಎಸ್ ಯಡಿಯೂರಪ್ಪನವರನ್ನು ಆಹ್ವಾನಿಸಲಾಗಿತ್ತು. ಆದರೆ ಈ ಕೊರೊನಾ ಕಾರಣದಿಂದ ಸಂಪೂರ್ಣ ಈ ಕಾರ್ಯಕ್ರಮವನ್ನೇ ರದ್ದುಗೊಳಿಸಲಾಗಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next