ಶಿರ್ವ: ಬಂಟಕಲ್ಲು- ಬಿ.ಸಿ.ರೋಡ್ ಮುಖ್ಯರಸ್ತೆಯ ಪಾಸ್ಕಲ್ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಮಂಗಳವಾರ ಮುಂಜಾನೆ ಕಾರೊಂದು ಹೈಟೆನ್ಶನ್ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಕಂಬ ಮುರಿದು ಹಾನಿ ಸಂಭವಿಸಿದೆ.
ಕಟಪಾಡಿ ಕಡೆಯಿಂದ ಶಿರ್ವ ಕಡೆಗೆ ಹೋಗುತ್ತಿದ್ದ ಕ್ವಾಲೀಸ್ ಕಾರು ಎಡ ಭಾಗದಿಂದ ಬಲ ಭಾಗಕ್ಕೆ ಚಲಿಸಿ ಹೈಟೆನ್ಶನ್ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ನಿಂತಿದೆ. ಢಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬದ ಬುಡ ಮತ್ತು ನಡುವೆ ಮುರಿದಿದ್ದು ಸುಮಾರು ಒಂದು ಮೀಟರ್ ಮುಂದಕ್ಕೆ ಹೋಗಿ ವಯರ್‌ನ ಆಧಾರದಲ್ಲಿ ವಾಲಿ ನಿಂತಿದೆ.
ಕಂಬದಲ್ಲಿದ್ದ ಗ್ರಾ.ಪಂ.ನ ವಿದ್ಯುತ್ ಮೀಟರ್ ಸಂಪೂರ್ಣ ಹಾನಿಗೊಂಡಿದ್ದು ವಿದ್ಯುತ್ ವ್ಯತ್ಯಯ ಉಂಟಾಗಿದೆ. ಮೆಸ್ಕಾಂ ಸಿಬಂದಿ ಮಂಜು ತತ್‌ಕ್ಷಣ ಧಾವಿಸಿ ವಿದ್ಯುತ್ ಕಡಿತಗೊಳಿಸಿದ್ದಾರೆ.
ಕಾರಿಗೂ ಹಾನಿ ಸಂಭವಿಸಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕುತ್ಯಾರು ಮೂಲದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಉದ್ಯಾವರದಲ್ಲಿ ನೇಮವೊಂದಕ್ಕೆ ತೆರಳಿ ವಾಪಾಸಾಗುತ್ತಿದ್ದ ಕಾರು ಚಾಲಕನ ನಿದ್ದೆಯ ಮಂಪರಿನಲ್ಲಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ.