ಶಿರ್ವ: ಕಳೆದ 49ವರ್ಷಗಳಿಂದ ಶಿರ್ವ ಮಂಚಕಲ್ ಪರಿಸರದಲ್ಲಿ ಶುದ್ಧ ಬ್ರಾಹ್ಮಣರ ಸಾಂಪ್ರದಾಯಿಕ ಶೈಲಿಯ ಸಸ್ಯಾಹಾರಿ ಊಟ ಉಪಾಹಾರಗಳಿಗೆ ಮನೆ ಮಾತಾಗಿದ್ದ ಹೊಟೇಲ್ ಶ್ರೀ ಮಹಾದೇವಿ ಭವನದ ಸೇವೆ ಸೋಮವಾರದಿಂದ ಸ್ಥಗಿತಗೊಂಡ ಸುದ್ದಿ ಗ್ರಾಹಕರಲ್ಲಿ ಬೇಸರ ಮೂಡಿಸಿದ್ದು,ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶಿರ್ವ ಪರಿಸರದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಲವು ದಶಕಗಳಿಂದ ರಿಯಾಯಿತಿ ದರದಲ್ಲಿ ಊಟ, ಬಡ ಮಕ್ಕಳಿಗೆ ಉಚಿತ ಊಟ ನೀಡುತ್ತಿದ್ದ ಮಾಲಕಿ ಸುನಂದಮ್ಮ ಮತ್ತು ಪುತ್ರ ಶಶಿಕುಮಾರ್ ಅವರ ನಗುಮೊಗದ ಆತಿಥ್ಯ ನೀಡುತ್ತಿ ದ್ದರು. ಮುಂಜಾನೆ 5ರಿಂದ ರಾತ್ರಿ 9ರ ವರೆಗೆ 45 ವರ್ಷಗಳಿಂದ ಸೇವೆಯಲ್ಲಿರುವ ಸುಂದರಣ್ಣ ತಂಡದ ನಗುಮೊಗದ ಸೇವೆ ದೊರೆಯುತ್ತಿತ್ತು.
ಶಾಲಾ ಕಾಲೇಜು ಉಪನ್ಯಾಸಕರು, ಬ್ಯಾಂಕ್ ಮತ್ತು ಇನ್ನಿತರ ಸಂಸ್ಥೆಗಳ ಸಿಬಂದಿ ಗಳಿಗೆ ಮನೆಯೂಟದಂತಿರುವ ಸಸ್ಯಾಹಾರಿ ಊಟ, ಇಡ್ಲಿ ವಡೆ, ಪೂರಿ ಬಾಜಿ, ಮಸಾಲೆ ದೋಸೆ ಗೋಳಿಬಜೆ, ಬನ್ಸ್ ಮತ್ತು ಮೈಸೂರ್‌ಪಾಕ್, ಬರ್ಫಿ, ಜಿಲೇಬಿ, ಸಾs…ನ ರುಚಿ ಸವಿದವರಿಗೆ ಹೊಟೇಲ್ ಮುಚ್ಚುವ ಸುದ್ದಿ ಅರಗಿಸಿಕೊಳ್ಳಲು ಸಾಧ್ಯವಿಲ್ಲದಂತಾಗಿದೆ. ಇಲ್ಲಿನ ಮಿಸಲ್ ಅಂತೂ ಶಾಲಾ ಮಕ್ಕಳಿಗೆ ಎಲ್ಲಿಲ್ಲದ ಪ್ರೀತಿ. ಶಾಲಾ ದಿನಗಳಲ್ಲಿ ಮಹಾದೇವಿ ಭವನದ ಮಿಸಲ್ ತಿಂದಿರುವುದನ್ನು ವಿಧಾನ ಪರಿಷತ್ ಸದಸ್ಯ ಐವನ್ ಡಿ‡’ಸೋಜಾ ಕೂಡ ನೆನಪಿಸಿಕೊಳ್ಳುತ್ತಾರೆ. ವಿದೇಶದಿಂದ ಬಂದ ಶಿರ್ವ ಪರಿಸರದ ಎನ್ನಾರೈಗಳು ಮಹಾದೇವಿ ಭವನದ ಉಪಾಹಾರ ಸವಿಯದೆ ಹಿಂದಿರುಗುವುದು ವಿರಳ.
ಕಾರಣಾಂತರಗಳಿಂದ ಹೊಟೇಲ್ ಉದ್ಯಮ ಮುನ್ನಡೆಸಲು ಸಾಧ್ಯವಾಗುತ್ತಿಲ್ಲ .
ಹಲವು ವರ್ಷಗಳಿಂದ ಉದ್ಯಮ ನಡೆಸಿಕೊಂಡು ಬಂದಿರುವ ನಮ್ಮನ್ನು ಪ್ರೋತ್ಸಾಹಿಸಿದ ಶಿರ್ವದ ಜನತೆಗೆ ಕೃತಜ್ಞತೆ ಗಳು ಎಂದು ವ್ಯವಸ್ಥಾಪಕರು ಷಟರ್‌ನಲ್ಲಿ ಹಾಕಿದ ನೋಟಿಸ್ ಉಪಾಹಾರ ಪ್ರಿಯರಿಗೆ ಬೇಸರ ತರಿಸಿದೆ.