Advertisement

ದಿವಾಕರ ಸಿಂಗ್‌ನ ಶೌಚಾಲಯ ವಾಸಕ್ಕೆ ಮುಕ್ತಿ

10:21 AM Aug 07, 2018 | Team Udayavani |

ಶಿರ್ವ: ಕಳೆದ 5 ತಿಂಗಳಿಂದ ಸಾರ್ವಜನಿಕ ಶೌಚಾಲಯವನ್ನೇ ಮನೆ ಮಾಡಿಕೊಂಡಿದ್ದ ಬಿಹಾರ ಮೂಲದ ದಿವಾಕರ ಸಿಂಗ್‌ ಅವರ ವಾಸ್ತವ್ಯಕ್ಕೆ  ಪಂಚಾಯತ್‌ ಆಡಳಿತ ವ್ಯವಸ್ಥೆ ಮಾಡಿಕೊಟ್ಟಿದೆ. ಆತನ ಶೌಚಾಲಯ ವಾಸಕ್ಕೆ ಮುಕ್ತಿ ದೊರೆತಿದ್ದು, ಆತನಿಗೆ ಬಾಡಿಗೆ ಕೊಠಡಿಯೊಂದನ್ನು ಒದಗಿಸಿಕೊಡಲಾಗಿದೆ.

Advertisement

ಶೌಚಾಲಯ ನಿರ್ವಹಣೆ ಮಾಡುತ್ತಿದ್ದ ವ್ಯಕ್ತಿಯ ಅಸಹನೀಯ ಬದುಕಿನ ಬಗ್ಗೆ ಉದಯವಾಣಿ ಜು. 5ರಂದು ವಿಶೇಷ ವರದಿ ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿದ ಅಪರ ಜಿಲ್ಲಾಧಿಕಾರಿ ಅನುರಾಧಾ ಅವರು ಶೀಘ್ರ ಕ್ರಮ ವಹಿಸುವಂತೆ ಕಾಪು ತಹಶೀಲ್ದಾರ್‌ ಗುರುಸಿದ್ಧಯ್ಯ ಅವರಿಗೆ ಸೂಚನೆ ನೀಡಿದ್ದರು. ಜಿಪಂ ಸಿಇಒ ಶಿವಾನಂದ ಕಾಪಶಿ ಅವರೂ ವ್ಯಕ್ತಿಗೆ ಪುನರ್ವಸತಿ ಕಲ್ಪಿಸುವಂತೆ ಶಿರ್ವ ಪಿಡಿಒಗೆ ಸೂಚನೆ ನೀಡಿದ್ದರು.

ತಹಶೀಲ್ದಾರ್‌ರಿಂದ ವಿಚಾರಣೆ
ಇದರಂತೆ ಶಿರ್ವ ಪಿಡಿಒ ಅವರು ರವಿ ವಾರ ರಾತ್ರಿ ಸ್ಥಳಕ್ಕಾಗಮಿಸಿ ಸಿಂಗ್‌ ವಾಸ್ತವ್ಯಕ್ಕೆ ತಾತ್ಕಾಲಿಕವಾಗಿ ವ್ಯವಸ್ಥೆ ಒದಗಿಸಿದ್ದರು. ಅಪರ ಜಿಲ್ಲಾಧಿಕಾರಿ ಸೂಚನೆಯಂತೆ ಸೋಮವಾರ ಸ್ಥಳಕ್ಕಾಗಮಿಸಿದ ಕಾಪು ತಹಶೀಲ್ದಾರ್‌ ಗುರು ಸಿದ್ಧಯ್ಯ ಅವರು, ಪಂಚಾಯತ್‌ ಅಧ್ಯಕ್ಷರು ಮತ್ತು ಪಿಡಿಒ ಅವರ ಸಮಕ್ಷಮ ದಿವಾಕರ ಸಿಂಗ್‌ನನ್ನು ಕರೆಸಿ ವಿಚಾರಣೆ ನಡೆಸಿದರು. ಈ ಬಳಿಕ ಆಡಳಿತದಿಂದ ಆತನ ವಾಸ್ತವ್ಯಕ್ಕೆ ಬಾಡಿಗೆ ಕೊಠಡಿಯೊಂದನ್ನು ಒದಗಿಸಿಕೊಡಲಾಯಿತು.

ಬಸ್‌ ಮಾಲಕರಿಗೆ ನೋಟಿಸ್‌ ನೀಡಲು ಸೂಚನೆ
ಬಸ್‌ಸ್ಟಾಂಡ್  ಶುಲ್ಕ ಪಾವತಿಸವುದರಿಂದ ಬಸ್‌ ಸಿಬಂದಿ ಶೌಚಾಲಯ ಶುಲ್ಕ ಪಾವತಿಸಲು ನಿರಾಕರಿಸುತ್ತಿದ್ದಾರೆ. ಇದರಿಂದ ತನಗೆ ನಷ್ಟವಾಗುತ್ತಿದೆ ಎಂದು ಸಿಂಗ್‌ ವಿಚಾರಣೆ ವೇಳೆ ತಿಳಿಸಿದ್ದಾನೆ. ತಹಶೀಲ್ದಾರ್‌ ಅವರು ಶುಲ್ಕ ಪಾವತಿ ಮಾಡದೆ ಶೌಚಾಲಯಕ್ಕೆ ಸಿಬಂದಿ ಹೋಗುತ್ತಿರುವ ಕುರಿತು ಬಸ್‌ ಮಾಲಕರಿಗೆ ನೋಟಿಸ್‌ ನೀಡುವಂತೆ ಗ್ರಾ.ಪಂ. ಆಡಳಿತಕ್ಕೆ ಸೂಚಿಸಿದರು. ಅಲ್ಲದೆ ಶೌಚಾಲಯದ ನೀರಿನ ವ್ಯವಸ್ಥೆಯ ಬಗ್ಗೆ ಗ್ರಾ.ಪಂ.ನಿಂದ ನಲ್ಲಿ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next