Advertisement
ಮೂಡುಬೆಳ್ಳೆಯ ಸರಸ್ವತಿ ಕಾಲನಿ ಸಮೀಪ ಸರಕಾರ ಬೆಳ್ಳೆ ಮತ್ತು ಇತರ ಗ್ರಾಮಗಳ ನಿವೇಶನ ರಹಿತರಿಗೆ ಹಂಚಿಕೆ ಮಾಡಲು 0.86 ಎಕ್ರೆ ಮತ್ತು 0.70 ಎಕ್ರೆ ಸೇರಿ ಒಟ್ಟು 1.56 ಎಕ್ರೆ ಜಮೀನನ್ನು ಬೆಳ್ಳೆ ಗ್ರಾ.ಪಂ. ಹೆಸರಲ್ಲಿ ಕಾಯ್ದಿರಿಸಿದೆ. ಈ ಜಾಗದಲ್ಲಿ 30 ನಿವೇಶನ ಹಂಚಿಕೆ ಮಾಡಲು ಗ್ರಾ.ಪಂ. ಬೋರ್‌ವೆಲ್, ವಿದ್ಯುತ್ ಸೌಲಭ್ಯ, ಪೈಪ್‌ಲೈನ್ ಮತ್ತು ಜಾಗ ಸಮತಟ್ಟು ಗೊಳಿಸಲು ರೂ. 4 ಲಕ್ಷಕ್ಕೂ ಮಿಕ್ಕಿ ಖರ್ಚು ಮಾಡಿದೆ.
Related Articles
Advertisement
ಪಡುಬೆಳ್ಳೆಯ ಪಾಂಬೂರು ಬಳಿ 5.04 ಎಕ್ರೆ ಜಾಗದಲ್ಲಿ 105 ನಿವೇಶನ ಮಂಜೂರಾಗಿದ್ದು, 64 ಹಕ್ಕು ಪತ್ರ ದೊರೆತಿದೆ. ಆದರೆ ನಿವೇಶನದ ಪ್ರದೇಶದಲ್ಲಿ ಭೂ ಸ್ಥಿತಿ (ಬಂಡೆಕಲ್ಲು ಮತ್ತು ನೀರಿನ ಸಮಸ್ಯೆ) ವಾಸ್ತವ್ಯ ಯೋಗ್ಯವಿಲ್ಲದೆ ಇರುವುದರಿಂದ ಬೆರಳೆಣಿಕೆಯ ಮಂದಿ ವಾಸ್ತವ್ಯವಿದ್ದು, ಯೋಜನೆಯ ಉದ್ದೇಶ ವಿಫಲವಾದಂತಿದೆ.
ಪ್ರಾ.ಆರೋಗ್ಯ ಕೇಂದ್ರದ ಕೊರತೆ
ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕೊರತೆ ಇದ್ದು, ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ನೀಡಲು ಹಿನ್ನಡೆಯಾಗಿದೆ. ಮೂಡುಬೆಳ್ಳೆಯಲ್ಲಿ ಪೆರ್ಣಂಕಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ಉಪಕೇಂದ್ರವಿದ್ದರೆ, ಪಡುಬೆಳ್ಳೆ ಪರಿಸರದ ನಾಗರಿಕರು ಪಾಂಬೂರು ಉಪಕೇಂದ್ರ ವನ್ನು ಅವಲಂಬಿಸಿದ್ದಾರೆ. ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲದೇ ಇರುವುದರಿಂದ ಸಾರ್ವಜನಿಕರು ತುರ್ತು ಸಂದರ್ಭಗಳಲ್ಲಿ ದೂರದ ಪೆರ್ಣಂಕಿಲ, ಉಡುಪಿ ಅಥವಾ ಶಿರ್ವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗಬೇಕಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಸರಕಾರ ಬೆಳ್ಳೆ ಗ್ರಾಮದ ನೆಲ್ಲಿಕಟ್ಟೆಯ 2 ಎಕ್ರೆ ಜಮೀನು ಮಂಜೂರು ಮಾಡಿದ್ದು, ಕೇಂದ್ರದ ಕಾಮಗಾರಿ ಆರಂಭಗೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ.
ಬೆಳ್ಳೆ ಗ್ರಾಮ
ಬೆಳ್ಳೆ ಗ್ರಾಮದಲ್ಲಿ ಸ್ವಲ್ಪವೇ ಮಳೆ ಬಂದರೆ ನೆರೆ ಏರುವ ಸ್ಥಿತಿ ಇದೆ. ಫಲವತ್ತಾದ ಮಣ್ಣನ್ನು ಹೊಂದಿರುವ ಬೆಳ್ಳೆ ಗ್ರಾಮದಲ್ಲಿ ಕೃಷಿಯೇ ಪ್ರಮುಖ ಕಾಯಕವಾಗಿದೆ. ಇದುವೇ ಇಲ್ಲಿನ ಜನರ ಆದಾಯ ಮೂಲವಾಗಿದೆ. ಗ್ರಾಮದಲ್ಲಿ ವಸತಿ ರಹಿತರಿಗಾಗಿ ಎರಡೆರಡು ಕಡೆ ನಿವೇಶನ ಗುರುತಿಸಿ ಹಂಚಲು ಮುಂದಾಗಿದ್ದರೂ ಅದು ಮಾತ್ರ ಯಶಸ್ಸು ಸಾಧಿಸಿಲ್ಲ. ಒಂದು ಕಡೆ ಬಗೆಹರಿಸಬಹುದಾದ ತಾಂತ್ರಿಕ ಸಮಸ್ಯೆ ಇದ್ದರೆ, ಮತ್ತೂಂದು ಕಡೆ ಪ್ರಾಕೃತಿಕ ಸಮಸ್ಯೆ ಇದೆ. ಗ್ರಾಮದ ಮತ್ತೂಂದು ಬೇಡಿಕೆ ಆರೋಗ್ಯ ಕೇಂದ್ರ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನ ಹರಿಸಿದರೆ ಎರಡೂ ಬೇಡಿಕೆ ಈಡೇರಲು ಸಾಧ್ಯ.
ಪುರಾತನ ಇತಿಹಾಸ
ಚಾರಿತ್ರಿಕ ಮತ್ತು ಧಾರ್ಮಿಕವಾಗಿ ಬೆಳ್ಳೆ ಗ್ರಾಮಕ್ಕೆ ಪುರಾತನ ಇತಿಹಾಸವಿದ್ದು, 13ನೇ ಶತಮಾನದ ದ್ವೈತ ಸಿದ್ಧಾಂತದ ಪ್ರತಿಪಾದಕ ಆಚಾರ್ಯ ಮಧ್ವಾಚಾರ್ಯರ ಜನ್ಮಸ್ಥಳ ಪಡುಬೆಳ್ಳೆಯ ಪಾಜಕ ಕ್ಷೇತ್ರ. ಒಟ್ಟು 2,196.13 ಹೆಕ್ಟೇರ್ ಪ್ರದೇಶವನ್ನು ಹೊಂದಿರುವ ಬೆಳ್ಳೆ ಕಟ್ಟಿಂಗೇರಿ ಗ್ರಾಮದಲ್ಲಿ ಮಲ್ಲಿಗೆ ಹೂವಿನ ಕೃಷಿಯೊಂದಿಗೆ ತೆಂಗು, ಅಡಿಕೆ, ಭತ್ತ, ಬಾಳೆ, ಕರಿಮೆಣಸು ಬೆಳೆಯಲಾಗುತ್ತಿದೆ. ಶಿವನನ್ನು ಮೂರ್ತಿ ರೂಪದಲ್ಲಿ ಪೂಜಿಸಲ್ಪಡುವ ಐತಿಹಾಸಿಕ ಪಡುಬೆಳ್ಳೆ ಶ್ರೀಮಹಾಲಿಂಗೇಶ್ವರ ದೇವಸ್ಥಾನ, ಕರ್ಗಲ್ಲಿನಿಂದ ನಿರ್ಮಿಸಲ್ಪಟ್ಟ ವೃತ್ತಾಕಾರದ ಸೂರ್ಯದೇವರ ಗುಡಿ ಸಹಿತ ವಿವಿಧ ಆರಾಧನಾ ಕೇಂದ್ರಗಳು ಇಲ್ಲಿವೆ.
ಜನರ ತೊಂದರೆ ಸರಿಪಡಿಸಲಿ: ಗ್ರಾ.ಪಂ. ಫಲಾನುಭವಿಗಳನ್ನು ಆಯ್ಕೆ ಮಾಡಿ, 30 ನಿವೇಶನ ಕಾದಿರಿಸಿದೆ. ರಾಜೀವ್ ಗಾಂಧಿ ವಸತಿ ನಿಗಮದ ಸೈಟ್‌ನ ತಾಂತ್ರಿಕ ತೊಂದರೆಯಿಂದ ನಿವೇಶನ ಮತ್ತು ವಸತಿ ಫಲಾನುಭವಿಗಳ ರೇಶನ್ ಕಾರ್ಡ್ ದಾಖಲಾತಿ ತೆಗೆದುಕೊಳ್ಳದೆ ತೊಂದರೆಯಾಗುತ್ತಿದೆ. ಸರಕಾರ ವಸತಿ ಯೋಜನೆಯಿಂದ ರಾಜೀವ್ ಗಾಂಧಿ ವಸತಿ ನಿಗಮವನ್ನು ಕೈಬಿಟ್ಟು ಈ ಹಿಂದಿನಂತೆ ನೇರವಾಗಿ ತಹಶೀಲ್ದಾರ್ ಮೂಲಕ ಹಕ್ಕುಪತ್ರ ನೀಡಿ ಜನರಿಗಾಗುವ ತೊಂದರೆ ಸರಿಪಡಿಸಲಿ. –ಸುಧಾಕರ ಪೂಜಾರಿ, ಬೆಳ್ಳೆ ಗ್ರಾ.ಪಂ. ಅಧ್ಯಕ್ಷರು
ಹಕುಪತ್ರ ನೀಡಲಿ: ಗ್ರಾ.ಪಂ. ನಿವೇಶನ ಪಡೆಯಲು ನಮ್ಮನ್ನು ಆಯ್ಕೆ ಮಾಡಿದ್ದರೂ ಹಕ್ಕುಪತ್ರ ದೊರೆಯುತ್ತಿಲ್ಲ. ಗ್ರಾ.ಪಂ.ನ್ನು ಸಂಪರ್ಕಿಸಿದಾಗ ನಿಗಮದ ತಾಂತ್ರಿಕ ತೊಂದರೆಯ ಕಾರಣ ನೀಡುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಹಕ್ಕುಪತ್ರ ನೀಡಲಿ. –ಪಲ್ಲವಿ ರಾಮಕೃಷ್ಣ, ಫಲಾನುಭವಿ
– ಸತೀಶ್ಚಂದ್ರ ಶೆಟ್ಟಿ , ಶಿರ್ವ