ಶಿರ್ವ: ಅಂತಿಮ ವರ್ಷದ ಎಂಬಿಬಿಎಸ್ ಪರೀಕ್ಷೆಯಲ್ಲಿ ಪುಣೆಯ ಬಿ.ಜೆ. ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ, ಶಿರ್ವ ಮೂಲದ ಡಾ| ಹರ್ಷಿತಾ ಎಚ್.ಶೆಟ್ಟಿ ಕಾಲೇಜಿಗೆ ಅತೀ ಹೆಚ್ಚು ಅಂಕಗಳನ್ನು ಪಡೆದು ದಿ.ಡಾ| ಎ.ವಿ.ಉಮರ್ಕರ್ ಸ್ಮರಣಾರ್ಥ ಚಿನ್ನದ ಪದಕ ಪಡೆದಿದ್ದಾರೆ.
ಮಹಾರಾಷ್ಟ್ರ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ನಾಸಿಕ್ ವಲಯದ ಮಹಿಳಾ ಪರಿಕ್ಷಾರ್ಥಿಗಳಲ್ಲಿ ಮೆಡಿಸಿನ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ವಿಜಯದೇವಿ ಫಡ್ತಾರೆ ಸ್ಮರಣಾರ್ಥ ಚಿನ್ನದ ಪದಕ ಪಡೆದಿದ್ದಾರೆ.
ಕೋವಿಡ್ ನಿಯಮಾನುಸಾರ ಮಹಾರಾಷ್ಟ್ರ ರಾಜ್ಯ ಮಟ್ಟದಲ್ಲಿ ಆನ್‌ಲೈನ್ ಮೂಲಕ ನಡೆದ ಘಟಿಕೋತ್ಸವದಲ್ಲಿ ರಾಜ್ಯಪಾಲ ಭಗತ್‌ಸಿಂಗ್ ಕೊಶ್ಯಾರಿ ಅವರು ಉಪಸ್ಥಿತರಿದ್ದು, ಮಹಾರಾಷ್ಟ್ರ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ನಾಸಿಕ್ ಇದರ ಪರೀಕ್ಷಾ ಪರೀವೀಕ್ಷಕ, ನಿಯಂತ್ರಕ ಡಾ| ಅಜಿತ್‌ಪಾಠಕ್ ಚಿನ್ನದ ಪದಕವನ್ನು ಡಾ| ಹರ್ಷಿತಾ ಶೆಟ್ಟಿಯವರಿಗೆ ಪ್ರದಾನ ಮಾಡಿ ಅಭಿನಂದಿಸಿದರು.
ಅಂತಿಮ ವರ್ಷದ ಎಂಬಿಬಿಎಸ್ ಪರೀಕ್ಷೆಯಲ್ಲಿ ಎರಡು ಚಿನ್ನದ ಪದಕ ಪಡೆದಿರುವ ಡಾ| ಹರ್ಷಿತಾ ಶೆಟ್ಟಿ 3ನೇ ವರ್ಷದ ಎಂಬಿಬಿಎಸ್ ಪರೀಕ್ಷೆಯ OPTHALMOLOGY ವಿಭಾಗದಲ್ಲಿಯೂ ಚಿನ್ನದ ಪದಕ ಗಳಿಸಿದ್ದರು. ಪ್ರೌಢ ಮತ್ತು ಪಿಯುಸಿ ಶಿಕ್ಷಣವನ್ನು ವಿಶಿಷ್ಟ ಶ್ರೇಣಿಯಲ್ಲಿ ಮುಗಿಸಿದ್ದ ಈಕೆ 2015-16 ರಲ್ಲಿ ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಜರ್ಮನ್ ಭಾಷೆಯೊಂದಿಗೆ ವಿಜ್ಞಾನ ವಿಷಯ ಕಲಿತು ಮಹಾರಾಷ್ಟ್ರ ರಾಜ್ಯದ ಆರೋಗ್ಯವಿಜ್ಞಾನ ಸಾಮಾನ್ಯ (ಸಿ.ಇ.ಟಿ.)ಪರೀಕ್ಷೆಯಲ್ಲಿ 200ರಲ್ಲಿ 199 ಅಂಕದೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದರು.
ಈಕೆ ಪುಣೆಯ ಹೊಟೇಲ್‌ಉದ್ಯಮಿ ಶಿರ್ವ ಪಂಜಿಮಾರು ಮಾಣಾಯಿ ದೊಡ್ಡಮನೆ ಹರೀಶ್‌ಎನ್. ಶೆಟ್ಟಿ ಮತ್ತು ವಾರಿಜಾ ಶೆಟ್ಟಿ ದಂಪತಿಯ ಪುತ್ರಿ.