ಶಿರ್ವ: ರೈಲ್ವೆ ಟಿಕೇಟ್ ವಿಚಾರದಲ್ಲಿ ಯುವಕರಿಬ್ಬರು ಟ್ರಾವೆಲ್ ಏಜನ್ಸಿಯಾಗಿ ಕೆಲಸ ನಿರ್ವಹಿಸುತ್ತಿರುವ ಕಚೇರಿಗೆ ಅಕ್ರಮ ಪ್ರವೇಶ ಮಾಡಿ ಮಾಲಿಕರಿಗೆ ಹಲ್ಲೆ ನಡೆಸಿದ ಘಟನೆ ಮೇ. 23 ರಂದು ಮಧ್ಯಾಹ್ನ ನಡೆದಿದೆ. ಕಳತ್ತೂರು ಪೈಯ್ನಾರು ನಿವಾಸಿ ಗಣೇಶ್ ಕುಮಾರ್ ಹಲ್ಲೆಗೊಳಗಾದವರು.
ಘಟನೆಯ ವಿವರ
ಶಿರ್ವ ಮಂಚಕಲ್ ಪೇಟೆಯ ಮುಖ್ಯ ರಸ್ತೆಯ ಬದಿಯಲ್ಲಿರುವ ನಿಸರ್ಗ ಸರ್ವಿಸಸ್ ಟ್ರಾವೆಲ್ ಏಜನ್ಸಿ ಕಚೇರಿಗೆ ಮೇ. 21ರಂದು ಗ್ರಾಹಕರಾಗಿ ಬಂದ ಪಾದೂರಿನ ಸಂತೋಷ್ ಶೆಟ್ಟಿ ಮತ್ತು ಅಭಿಷೇಕ್ ಶೆಟ್ಟಿ ಮೇ 22 ರಂದು ಮುಂಬೈಗೆ ತೆರಳಲು 2 ಟಿಕೇಟ್ ಬುಕ್ ಮಾಡಿ ಟಿಕೇಟ್‌ನ ಹಣ ರೂ.3200/- ಪಾವತಿಸಿದ್ದರು. ಬುಕ್ ಮಾಡಿದ ಟಿಕೇಟ್ ವೈಟಿಂಗ್ ಲಿಸ್ಟ್‌ನಲ್ಲಿದ್ದು ಮೇ. 22 ರಂದು ಟಿಕೇಟ್ ಕನ್ಫರ್ಮ್ ಆಗದೇ ಇರುವುದರಿಂದ ಕ್ಯಾನ್ಸಲ್ ಮಾಡಲು ತಿಳಿಸಿದ್ದರು. ಆವಾಗಲೇ ಟಿಕೇಟ್ ಚಾರ್ಟ್ ಆಗಿರುವುದರಿಂದ ಕ್ಯಾನ್ಸಲ್ ಮಾಡಲು ಆಗುವುದಿಲ್ಲ, ಮೂರು ದಿನ ಬಿಟ್ಟು ಕ್ಯಾನ್ಸಲೇಶನ್ ಹಣ ಕಟ್ಟಾಗಿ ನನ್ನ ಖಾತೆಗೆ ಜಮಾ ಆಗುತ್ತದೆ ಎಂದು ತಿಳಿಸಿದ ಗಣೇಶ್ ಮೇ. 22 ರಂದು ರೂ. 2500/- ಸಂತೋಷ್ ಶೆಟ್ಟಿಗೆ ಪಾವತಿಸಿದ್ದಾರೆ. ಉಳಿದ ಹಣವನ್ನು 2 ದಿನ ಬಿಟ್ಟು ಗೂಗಲ್ ಪೇ ಮಾಡುವುದಾಗಿ ತಿಳಿಸಿದಾಗ ಅವರು ಒಪ್ಪಿದ್ದು, ಅಲ್ಲಿಂದ ತೆರಳಿದ್ದಾರೆ.
ಮೇ. 23 ರಂದು ಮಧ್ಯಾಹ್ನ ನಿಸರ್ಗ ಕಚೇರಿಗೆ ಏಕಾಎಕಿ ಅಕ್ರಮ ಪ್ರವೇಶ ಮಾಡಿದ ಆರೋಪಿಗಳಾದ ಅಭಿಷೇಕ್ ಶೆಟ್ಟಿ ಮತ್ತು ಸಂತೋಷ್ ಶೆಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಗಣೇಶನ ಮೇಲೆ ಹಲ್ಲೆ ನಡೆಸಿದ್ದಾರೆ. ತಲೆ ,ಮೂಗು,ಹಣೆ,ಮತ್ತು ಕೈಗೆ ಗಾಯಗೊಂಡಿದ್ದ ಗಣೇಶ್ ಶಿರ್ವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ರೈಲ್ವೆ ಟಿಕೇಟ್ ವಿಚಾರದಲ್ಲಿ ಆರೋಪಿಗಳು ಕಚೇರಿಗೆ ಅಕ್ರಮ ಪ್ರವೇಶ ಮಾಡಿ ಕಚೇರಿಯಲ್ಲಿದ್ದ ಸೊತ್ತುಗಳನ್ನು ಹಾನಿ ಮಾಡಿದ್ದು, 2,00,000/- ಲ.ರೂ. ಹಾನಿ ಸಂಭವಿಸಿದೆ ಅಲ್ಲದೆ ಸಂತೋಷ್ ಶೆೆಟ್ಟಿ ಸಂಜೆಯೊಳಗೆ ನಿನ್ನನ್ನು ತೆಗೆಯುತ್ತೇನೆಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಅಂಗಡಿ ಮಾಲಿಕ ಗಣೇಶ್ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.