Advertisement

ಶಿರ್ವ, ಬೆಳ್ಳೆ ಗ್ರಾ.ಪಂ. ಗಳಲ್ಲಿ ಕೆಲವೆಡೆ ನೀರಿನ ಸಮಸ್ಯೆ

09:10 PM Mar 18, 2020 | Sriram |

ಶಿರ್ವ ಮತ್ತು ಬೆಳ್ಳೆ ಗ್ರಾಮ ಪಂಚಾಯತ್‌ಗಳ ಕೆಲವೆಡೆ ನೀರಿನ ಸಮಸ್ಯೆ ಈಗಾಗಲೇ ತಲೆದೋರಿದೆ. ಸಮಸ್ಯೆ ಪರಿಹಾರಕ್ಕೆ ಹಲವು ಉಪಕ್ರಮಗಳನ್ನು ಕೈಗೊಂಡಿದ್ದರೂ ಇನ್ನೂ ಕೆಲವೆಡೆ ಸಮಸ್ಯೆ ಪರಿಹಾರವಾಗಬೇಕಿದೆ.

Advertisement

ಶಿರ್ವ: ಕಾಪು ತಾಲೂಕಿನ ಶಿರ್ವ ಮತ್ತು ಬೆಳ್ಳೆ ಗ್ರಾ.ಪಂ.ವ್ಯಾಪ್ತಿಯ ಕೆಲವೆಡೆ ಪೈಪ್‌ಲೈನ್‌ ಮತ್ತು ಬೋರ್‌ವೆಲ್‌ ಪಂಪ್‌ ದೋಷದಿಂದಾಗಿ ಕುಡಿಯುವ ನೀರು ಪೂರೈಕೆ ಯಲ್ಲಿ ವ್ಯತ್ಯಯ ಉಂಟಾಗಿದ್ದು ತಾತ್ಕಾಲಿಕ ಸಮಸ್ಯೆಯಾಗಿದೆ.

ಬೆಳ್ಳೆ ಗ್ರಾ.ಪಂ.
ಬೆಳ್ಳೆ ಗ್ರಾ.ಪಂ.ನ ಕಟ್ಟಿಂಗೇರಿಯಲ್ಲಿ ಸ್ವಲ್ಪ ನೀರಿನ ಸಮಸ್ಯೆ ಯಿದ್ದು, ಉಳಿದಂತೆ ಕಳೆದ ಬಾರಿ ಸಮಸ್ಯೆಯಿದ್ದ ಗಾಂಧೀನಗರ, ಧರ್ಮಶ್ರೀ ಕಾಲನಿ, ಪಾಂಬೂರು, ಕುಂತಳನಗರ ಪ್ರದೇಶಗಳಲ್ಲಿ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿದೆ.

ಮನೆಗಳಿಗೆ ಸಮಸ್ಯೆ
ಕಟ್ಟಿಂಗೇರಿ ಗ್ರಾಮದ ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಸಮಸ್ಯೆಯಿದ್ದು ಕೆಲವು ಮನೆಗಳಿಗೆ ತೊಂದರೆಯಾಗಿದೆ. ಕುಕ್ಕುದಕಟ್ಟೆ, ತೇನಕುಂಜದಲ್ಲಿ ಸುಮಾರು 20 ಮನೆಗಳಿಗೆ ಸಮಸ್ಯೆಯಾಗಿದೆ.

ಕೈಗೊಂಡ ಕ್ರಮಗಳೇನು?
ತೇನಕುಂಜದಲ್ಲಿನ ನೀರಿನ ಸಮಸ್ಯೆಗಾಗಿ ಜಿ.ಪಂ. ಅನು ದಾನದಿಂದ ಸುಮಾರು 20 ಲ. ರೂ. ವೆಚ್ಚದಲ್ಲಿ ನೀರಿನ ಟ್ಯಾಂಕ್‌ ಮತ್ತು ನೀರಿನ ಪೈಪ್‌ಲೈನ್‌ಗಾಗಿ ಎಸ್ಟಿಮೇಟ್‌ ಆಗಿದ್ದು ಬೋರ್‌ವೆಲ್‌ ನಿರ್ಮಾಣಗೊಂಡಿದೆ. ಪಾಪನಾಶಿನಿ ನದಿ ಅಣೆಕಟ್ಟೆಗೆ ಸಕಾಲದಲ್ಲಿ ಹಲಗೆ ಹಾಕಿದ್ದರಿಂದಾಗಿ ನದಿಯಲ್ಲಿ ನೀರು ತುಂಬಿದ್ದು ಅಂತರ್ಜಲ ವೃದ್ಧಿಯಾಗಿ ಬೆಳ್ಳೆ ಪಾಂಬೂರು ಪರಿಸರದಲ್ಲಿ ನೀರಿನ ಸಮಸ್ಯೆ ಅಷ್ಟೇನೂ ಇಲ್ಲ. ಪಡುಬೆಳ್ಳೆಯ ಧರ್ಮಶ್ರೀ ಕಾಲನಿಯ ಸಮುದಾಯ ಭವನದ ಬಳಿ ಇನ್ಫೋಸಿಸ್‌ನಿಂದ ನಿರ್ಮಾಣಗೊಂಡ ಶುದ್ಧ ಕುಡಿಯುವ ನೀರಿನ ಘಟಕ ಸಾರ್ವಜನಿಕರು ಸರಿಯಾಗಿ ಉಪಯೋಗಿಸದೇ ಇರುವುದರಿಂದ ಪಾಳುಬಿದ್ದಿದೆ.

Advertisement

ಶಿರ್ವ ಗ್ರಾ.ಪಂ.
ಶಿರ್ವ ಗ್ರಾಮ ಪಂ. ವ್ಯಾಪ್ತಿಯ ಇಂದ್ರಪುರ, ತೊಟ್ಲಗುರಿ ಮತ್ತು ತಂಕರಪಲ್ಕೆ ಪರಿಸರದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ತೊಟ್ಲಗುರಿ ಮತ್ತು ಇಂದ್ರಪುರ ಪರಿಸರದಲ್ಲಿ ಬೋರ್‌ವೆಲ್‌ನ ಪಂಪು ಹಾಳಾಗಿ ಸುಮಾರು 15 ದಿನಗಳ ಕಾಲ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಪಾದೆಕಲ್ಲಿನ ಪರಿಸರವಾಗಿರುವುದರಿಂದ ಬೋರ್‌ವೆಲ್‌ನಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಹೊಸ ಬೋರ್‌ವೆಲ್‌ಗಾಗಿ ಜಾಗ ಗುರುತಿಸಲಾಗಿದ್ದು, ಬೋರ್‌ವೆಲ್‌ ಕೊರೆಯಲು ಬಾಕಿಯಿದೆ.

ಕೈಗೊಂಡ ಕ್ರಮಗಳೇನು?
ಜಿ.ಪಂ. ಅನುದಾನದಿಂದ ಮೂಡುಮಟ್ಟಾರು ನೆಲ್ಲಿಗುಡ್ಡೆ ಬಳಿ ಸುಮಾರು 17 ಲಕ್ಷ ವೆಚ್ಚದ ನೀರಿನ ಟ್ಯಾಂಕ್‌, ಬೋರ್‌ವೆಲ್‌ ಮತ್ತು ಪೈಪ್‌ಲೈನ್‌ ಕಾಮಗಾರಿ ನಡೆಯಬೇಕಿದೆ. ಬಂಟಕಲ್ಲು ಪಾಂಬೂರು ಬಿ.ಸಿರೋಡ್‌ ಬಲಿ 16 ಲಕ್ಷ ವೆಚ್ಚದ ಬೋರ್‌ವೆಲ್‌ ಮತ್ತು ಪೈಪ್‌ಲೈನ್‌ ಕಾಮಗಾರಿ ನಡೆದಿದ್ದು ನೀರಿನ ಟ್ಯಾಂಕ್‌ ನಿರ್ಮಾಣಗೊಳ್ಳಬೇಕಿದೆ. ಮೇ ತಿಂಗಳಲ್ಲಿ ನೀರಿನ ಸಮಸ್ಯೆ ಬಂದಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲು ಗ್ರಾ.ಪಂ. ಸಜ್ಜಾಗಿದೆ.

ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಜನರು ಕುಡಿಯುವ ನೀರನ್ನು ಅನ್ಯ ಉದ್ದೇಶಕ್ಕಾಗಿ ಬಳಸಿದಲ್ಲಿ , ಸ್ಥಗಿತಗೊಂಡ ಮೀಟರ್‌ ದುರಸ್ತಿಗೊಳಿಸದಿದ್ದಲ್ಲಿ, 3 ತಿಂಗಳಿಗಿಂತ ಹೆಚ್ಚುಕಾಲ ಬಾಕಿಯಿರಿಸಿಕೊಂಡ ನೀರಿನ ಬಿಲ್ಲನ್ನು ಪಾವತಿಸದಿ¨ª‌ಲ್ಲಿ, ಅಕ್ರಮ ನೀರಿನ ಸಂಪರ್ಕ ಕಂಡುಬಂದಲ್ಲಿ ನೀರಿನ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಶಿರ್ವ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.

ಕುಸಿದ ತೆರೆದ
ಬಾವಿ ದುರಸ್ತಿಯಲ್ಲಿ
ಶಿರ್ವ ಗ್ರಾ.ಪಂ. ವ್ಯಾಪ್ತಿಯ ತಂಕರಪಲ್ಕೆ ಪರಿಶಿಷ್ಟ ಕಾಲನಿಗೆ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದ ತೆರೆದ ಬಾವಿ ಕಳೆದ ವರ್ಷ ಪಂಪುಸೆಟ್‌ ಸಮೇತ ಕುಸಿದು ಬಿದ್ದು ಪರಿಸರದ ನಾಗರಿಕರಿಗೆ ಕುಡಿಯುವ ನೀರಿನ ವ್ಯತ್ಯಯ ಉಂಟಾಗಿತ್ತು. ವರ್ಷ ಕಳೆದರೂ ಇಲಾಖೆಯ ಬೇಜವಾಬ್ದಾರಿಯಿಂದಾಗಿ ಬಾವಿ ದುರಸ್ತಿ ಹಂತದಲ್ಲಿದೆ. ಅಲ್ಲಿಗೆ ಗ್ರಾಮ ಪಂಚಾಯತ್‌ ಬೇರೆ ಕಡೆಯಿಂದ ನೀರಿನ ವ್ಯವಸ್ಥೆ ಕಲ್ಪಿಸಿದ್ದು 2 ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ.

ಕಳೆದ ಬೇಸಗೆಯಲ್ಲಿ ತೀವ್ರವಾಗಿ ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ “ಉದಯವಾಣಿ’ಯು ಭೇಟಿ ಕೊಟ್ಟು, “ಜೀವಜಲ’ ಎನ್ನುವ ಸರಣಿಯಡಿ ಸಾಕ್ಷಾತ್‌ ವರದಿಗಳನ್ನು ಪ್ರಕಟಿಸಿತ್ತು. ಈ ಬಾರಿಯ ಬೇಸಗೆಯಲ್ಲಿ ನೀರಿನ ಸಮಸ್ಯೆಯ ನಿವಾರಣೆಗೆ ಸ್ಥಳೀಯ ಪಂಚಾಯತ್‌ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಯಾವೆಲ್ಲ ಪರಿಹಾರ ಕ್ರಮಗಳನ್ನು ಕೈಗೊಂಡಿದ್ದಾರೆ? ಮುಂದೆ ಆಗಬೇಕಾದ ಪ್ರಮುಖ ಕ್ರಮಗಳೆಲ್ಲದರ ಕುರಿತಾದ ಸರಣಿ ಇದು.

ಸಮಸ್ಯೆ ಸರಿ ಪಡಿಸಲಾಗುವುದು
ಬೆಳ್ಳೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಹೆಚ್ಚಿನೆಡೆ ನೀರು ಪೂರೈಕೆ ಸಮರ್ಪಕವಾಗಿದೆ. ಕೆಲವೆಡೆ ನೀರು ಪೂರೈಕೆಯಲ್ಲಿ ತಾತ್ಕಾಲಿಕ ಸಮಸ್ಯೆಯಿದ್ದು ಸರಿಪಡಿಸಿ ನೀರು ಪೂರೈಕೆ ಮಾಡಲಾಗುವುದು.
– ದಯಾನಂದ ಬೆಣ್ಣೂರ್‌ , ಬೆಳ್ಳೆ ಗ್ರಾ.ಪಂ. ಪಿಡಿಒ

ಶೀಘ್ರ ಕ್ರಮ
14ನೇ ಹಣಕಾಸು ಆಯೋಗದಿಂದ ಬೋರ್‌ವೆಲ್‌ ಮತ್ತು ಪೈಪ್‌ಲೈನ್‌ ದುರಸ್ತಿಗಾಗಿ ಹಣ ಮೀಸಲಿಡಲಾಗಿದೆ. ನೀರಿನ ಸಮಸ್ಯೆಯಿರುವ ಇಂದ್ರಪುರ, ತೊಟ್ಲಗುರಿ ಪರಿಸರದಲ್ಲಿ ಬೋರ್‌ವೆಲ್‌ ನಿರ್ಮಿಸಲು ಜಾಗ ಗುರುತಿಸಿದ್ದು ಕೂಡಲೇ ಕ್ರಮ ಕೈಗೊಳ್ಳಲಾಗುವುದು.
– ಅನಂತ ಪದ್ಮನಾಭ ನಾಯಕ್‌,
ಶಿರ್ವ ಗ್ರಾ.ಪಂ. ಪಿಡಿಒ

-ಸತೀಶ್ಚಂದ್ರ ಶೆಟ್ಟಿ, ಶಿರ್ವ

Advertisement

Udayavani is now on Telegram. Click here to join our channel and stay updated with the latest news.

Next