Advertisement

Shiruru Landslide: ನ್ಯಾಯಾಂಗ ತನಿಖೆಗೆ ಪ್ರಣವಾನಂದ ಶ್ರೀ ಆಗ್ರಹ

12:37 AM Jul 25, 2024 | Team Udayavani |

ಮಂಗಳೂರು: ಅಂಕೋಲಾದ ಶಿರೂರಿನಲ್ಲಿ ಸಂಭವಿಸಿದ ಗುಡ್ಡ ಕುಸಿತ ಘಟನೆ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕಲಬುರಗಿ ಚಿತ್ರಾಪುರದ ಕರದಾಳ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಪೀಠಾಧಿಪತಿ ಡಾ| ಶ್ರೀ ಪ್ರಣವಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ.

Advertisement

ಬುಧವಾರದಂದು ಘಟನಾ ಸ್ಥಳ ಹಾಗೂ ದುರಂತದಲ್ಲಿ ಮೃತಪಟ್ಟವರ ಮನೆಗಳಿಗೆ ಭೇಟಿ ನೀಡಿದ ಬಳಿಕ ಮಂಗಳೂರಿಗೆ ಆಗಮಿಸಿದ ಸ್ವಾಮೀಜಿ ಸುದ್ದಿಗಾರರೊಂದಿಗೆ ಮಾತನಾಡಿ, ಘಟನೆಗೆ ಹೆದ್ದಾರಿ ಕಾಮಗಾರಿಯ ಗುತ್ತಿಗೆ ಪಡೆದುಕೊಂಡ ಕಂಪೆನಿಯೇ ಕಾರಣ. ಯಾವುದೇ ಸುರಕ್ಷಾ ಮಾನದಂಡ ತೆಗೆದುಕೊಂಡಿಲ್ಲ.

ಈಗಾಗಲೇ ಕಂಪೆನಿಯ ಮಾಲಕರು, ನಿರ್ದೇಶಕರ ಮೇಲೆ ಅಂಕೋಲಾ ಠಾಣೆಗೆ ದೂರು ಸಲ್ಲಿಸಿದ್ದೇವೆ. ಇವರೆಲ್ಲರ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು. ಮೃತಪಟ್ಟವರ ಕುಟುಂಬಗಳಿಗೆ ತಲಾ ಒಂದು ಕೋ.ರೂ. ಪರಿಹಾರ ನೀಡಬೇಕು. ಕುಟುಂಬದ ಸದಸ್ಯರಿಗೆ ಹೆದ್ದಾರಿ ಪ್ರಾಧಿಕಾರದಲ್ಲಿ ಉದ್ಯೋಗ ನೀಡಬೇಕು. ಗುತ್ತಿಗೆದಾರ ಕಂಪೆನಿ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಅದನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಈ ಕಂಪೆನಿಯಿಂದ ನಡೆಯುತ್ತಿರುವ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸ ಬೇಕು. ಈ ಬಗ್ಗೆ ಸುಪ್ರೀಂಕೋರ್ಟ್‌ ಗೂ ಅರ್ಜಿ ಸಲ್ಲಿಸಲಾಗುವುದು ಎಂದು ಹೇಳಿದರು.

ಸಾಂತ್ವನ ಹೇಳದ ಸರಕಾರ
ಮೃತಪಟ್ಟವರ ಮನೆಗಳಿಗೆ ರಾಜ್ಯ ಸರಕಾರದ ಪ್ರತಿನಿಧಿಯಾಗಲಿ, ವಿಪಕ್ಷದವರಾಗಲಿ, ಜಿಲ್ಲಾಧಿ ಕಾರಿಯವರಾಗಲಿ ಭೇಟಿ ನೀಡಿ ಸಾಂತ್ವನ ಹೇಳಿಲ್ಲ. ವಿಧಾನಸಭೆ, ಸಂಸತ್ತಿನ ಅಧಿವೇಶನದಲ್ಲಿ ಶ್ರದ್ಧಾಂಜಲಿಯನ್ನೂ ಸಲ್ಲಿಸಿಲ್ಲ. ಕೇರಳದ ಓರ್ವ ನಾಪತ್ತೆಯಾಗಿದ್ದು, ಅವರ ಪರವಾಗಿ ಕೇರಳ ಸರಕಾರ ನಿಂತಿದೆ. ಸರಕಾರದ ಪ್ರತಿನಿಧಿಗಳು ಸ್ಥಳಕ್ಕೆ ಬಂದು ನಿಗಾ ವಹಿಸುತ್ತಿದ್ದಾರೆ. ಆದರೆ ಕರ್ನಾಟಕ ಸರಕಾರ, ಕೇಂದ್ರ ಸರಕಾರಗಳು ನಿರ್ಲಕ್ಷ್ಯ ವಹಿಸುತ್ತಿವೆ ಎಂದರು.

ಮೃತಪಟ್ಟವರಲ್ಲಿ 7 ಮಂದಿ ಈಡಿಗ ನಾಮಧಾರಿ ಸಮುದಾಯಕ್ಕೆ ಸೇರಿದವರು. ಜು.28ರಂದು ಸಮುದಾಯದ ಮುಖಂಡರು, ಸಂಘಟನೆಗಳ ಪ್ರಮುಖರು ಅಂಕೋಲಾ ನಾಮಧಾರಿ ಕಲ್ಯಾಣ ಮಂಟಪದಲ್ಲಿ ಸಭೆ ಸೇರಿ ಚರ್ಚಿಸಲಿದ್ದಾರೆ. ಜತೆಗೆ ದುರಂತದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು ಎಂದು ಸ್ವಾಮೀಜಿ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.