Advertisement

ಇಂದಿನಿಂದ ಶಿರೂರು ಟೋಲ್‌ ಆರಂಭ

09:38 PM Feb 07, 2020 | mahesh |

ಬೈಂದೂರು: ಕಳೆದ ಹಲವು ಸಮಯದಿಂದ ನಿರೀಕ್ಷೆ ಇರುವ ಶಿರೂರು ಟೋಲ್‌ ಫೆ. 8ರಿಂದ ಅಧಿಕೃತ ಆರಂಭವಾಗುವ ಸಾಧ್ಯತೆ ಇದೆ. ಕಳೆದ ಮೂರು ದಿನದಿಂದ ಪ್ರಾಯೋಗಿಕ ಪರೀಕ್ಷಾ ಸಂಚಾರ ಆರಂಭಿಸಿದ್ದು ಟೋಲ್‌ ಪ್ಲಾಜಾದಲ್ಲಿ ಸಿಬಂದಿ ಆಯ್ಕೆ ಹಾಗೂ ಎಲ್ಲ ಸಿದ್ಧತೆ ಪೂರ್ಣಗೊಂಡಿದೆ. ಶುಕ್ರವಾರ ರಾತ್ರಿಯಿಂದಲೇ ಅಧಿಕೃತ ಶುಲ್ಕ ವಸೂಲಾತಿ ನಡೆಯಲಿದೆ. ಗೋವಾ -ಕರ್ನಾಟಕ ಸಂಪರ್ಕದ ಮಾಜಾಳಿಯಿಂದ ಆರಂಭವಾಗಿ ಕುಂದಾಪುರ ತನಕ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು 75 ಶೇ. ಕಾಮಗಾರಿ ಪೂರ್ಣಗೊಂಡಿದ್ದು ಹೊಸ ಟೋಲ್‌ ಪ್ರಾರಂಭ ದಿಂದ ವಾಹನ ಸವಾರರು ಮುಂದೆ ಶುಲ್ಕ ಪಾವತಿಸಿ ಪ್ರಯಾಣಿಸಬೇಕಾಗಿದೆ.

Advertisement

ಕಾಮಗಾರಿ ವಿವರ
ಒಟ್ಟು 179.9 ಕಿ.ಮೀ. ಗಳಲ್ಲಿ 141 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ. ಅಂಕೋಲಾ ಸಮೀಪದ ಹಟ್ಟಿಗೇರಿ, ಹೊನ್ನಾವರ ಹಾಗೂ ಶಿರೂರಿನಲ್ಲಿ ಟೋಲ್‌ ಪ್ಲಾಜಾ ನಿರ್ಮಾಣವಾಗಿದೆ. 2014ರಲ್ಲಿ ಐ.ಆರ್‌.ಬಿ. ಇನ್‌ಪ್ರಾಸ್ಟರ್ ಡೆವಲಪರ್ಸ್‌ಗೆ 2600 ಕೋ.ರೂ. ವೆಚ್ಚದಲ್ಲಿ ಹೆದ್ದಾರಿ ಅಭಿವೃದ್ಧಿ ಯೋಜನೆಯ 4ನೇ ಹಂತದಲ್ಲಿ ಹಣಕಾಸು, ವಿನ್ಯಾಸ ನಿರ್ಮಾಣ ನಿರ್ವಹಣೆಯನ್ನು 28 ವರ್ಷದ ಅವಧಿಗೆ ನೀಡಲಾಗಿದೆ. ಕುಮಟಾ ನಗರದಲ್ಲಿ 7.7 ಕಿ.ಮೀ ಬೈಪಾಸ್‌ ನಿರ್ಮಿಸಲು ಪ್ರತ್ಯೇಕ ಯೋಜನಾ ವರದಿ ಸಿದ್ಧಪಡಿಸಲಾಗಿದೆ. ಶರಾವತಿ ನದಿಗೆ ಮೂರು ಪಥದ ಹೊಸ ಸೇತುವೆ ನಿರ್ಮಿಸಲಾಗಿದೆ. 11 ಅಂಡರ್‌ಪಾಸ್‌, 3 ಟೋಲ್‌ ಪ್ಲಾಜಾ,3 ವಿಶ್ರಾಂತಿ ಪ್ರದೇಶ, ನಾಲ್ಕು ಟ್ರಕ್‌ ನಿಲ್ದಾಣ, 53 ಬಸ್‌ ನಿಲ್ದಾಣ, 70 ಕಿ.ಮೀ. ಸರ್ವಿಸ್‌ ರಸ್ತೆ ನಿರ್ಮಿಸಲಾಗಿದೆ.

ಪ್ರಯಾಣಿಕರಿಗೆ ಸಿಗುವ ಸವಲತ್ತುಗಳೇನು?
ಇಲ್ಲಿಯ ವರೆಗೆ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿರುವಂತೆ ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಐ.ಆರ್‌. ಬಿ. ಕಂಪೆನಿಯ ವ್ಯಾಪ್ತಿಗೆ ಒಳಪಡುತ್ತದೆ ಮತ್ತು ಸುರಕ್ಷತಾ ಸಿಬಂದಿಯಿರುತ್ತಾರೆ. ಶೌಚಾಲಯ, ವಿಶ್ರಾಂತಿ ಕೊಠಡಿ, ಆ್ಯಂಬುಲೆನ್ಸ್‌ನಲ್ಲಿ ವೈದ್ಯಕೀಯ ತಪಾಸಣೆ ಮತ್ತು ಸುಗಮ ಸಂಚಾರಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಆಕಸ್ಮಿಕ ಹಾಗೂ ಅಪಘಾತ ನಡೆದಾಗ ಪ್ರಯಾಣಿಕರು 1033 ನಂಬರ್‌ಗೆ ಕರೆ ಮಾಡಿದರೆ ತತ್‌ಕ್ಷಣ ಸ್ಪಂದನೆ ದೊರೆಯಲಿದೆ. ಸಾರ್ವಜನಿಕರು ಕೂಡ ಏಕಮುಖ ಸಂಚಾರ ರಸ್ತೆ ನಿಯಮ ಗಳನ್ನು ಸಮರ್ಪಕವಾಗಿ ಪಾಲಿಸಬೇಕಾಗಿದೆ.

20 ಕಿ.ಮೀ.ಗೆ 265 ರೂ. ಪಾಸ್‌
ಈಗಾಗಲೇ ಸ್ಥಳೀಯರಿಗೆ ಉಚಿತ ಪಾಸ್‌ ನೀಡಬೇಕು, ಖಾಸಗಿ ವಾಹನಗಳಿಗೆ ಉಚಿತ ಪಾವತಿ ನೀಡಬೇಕು ಎಂದು ಹೆದ್ದಾರಿ ಹೋರಾಟ ಸಮಿತಿ ಆಗ್ರಹಿಸಿದೆ. ಆದರೆ ಕಂಪೆನಿಯಿಂದ ಇದುವರೆಗೆ ಸ್ಪಷ್ಟತೆ ದೊರೆತಿಲ್ಲ. ಇನ್ನುಳಿದಂತೆ 20 ಕಿ.ಮೀ. ವ್ಯಾಪ್ತಿಯವರಿಗೆ 265 ರೂಪಾಯಿ ಪಾಸ್‌ ವ್ಯವಸ್ಥೆ ಅನಿಯಮಿತ ಸಂಚಾರದ ಪಾಸ್‌ ನೀಡಲಾಗುವುದು.

ಹಿನ್ನೆಡೆಗೆ ಕಾರಣಗಳೇನು?
ಈಗಾಗಲೇ ಒಪ್ಪಂದದಂತೆ ಕಾಮಗಾರಿ 2017ರ ಅಂತ್ಯದಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ ಕಾಮಗಾರಿ ವಿಳಂಬದಿಂದ ಹಿನ್ನೆಡೆಯಾಗಿದೆ.ಶಿರೂರಿನಿಂದ ಕುಂದಾಪುರದವರೆಗೆ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ.ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮರು ಅಲೈನ್‌ಮೆಂಟ್‌ ಭೂ ಒತ್ತುವರಿ ಪ್ರಕ್ರಿಯೆ ಸಮಸ್ಯೆಯಿಂದ ಹೊನ್ನಾವರ, ಕುಮಟಾ, ಭಟ್ಕಳ, ಕರ್ಕಿ, ಹಳದಿಪುರ, ಶಿರಾಲಿಯ ಕೆಲವು ಕಡೆ ರಸ್ತೆ ಅಗಲವನ್ನು 45 ಮೀ.ನಿಂದ 30 ಮೀ.ಗೆ ಕಡಿಮೆ ಮಾಡಿರುವುದು ಸಹ ವಿಳಂಬಕ್ಕೆ ಕಾರಣವಾಗಿದೆ. ಒತ್ತಿನೆಣೆ ಹಾಗೂ ಅಂಕೋಲಾ ಭಾಗದ ಗುಡ್ಡ ಕುಸಿತ ಸ್ಥಳೀಯ ಸಮಸ್ಯೆಗಳು ಮಂದಗತಿಯ ಕಾಮಗಾರಿ ನಡೆಯುವಂತೆ ಮಾಡಿದೆ.

Advertisement

ರಿಯಾಯಿತಿ ನೀಡದಿದ್ದರೆ ಮತ್ತೆ ಪ್ರತಿಭಟನೆ
ಬೇಡಿಕೆ ಇರುವ ಸರ್ವಿಸ್‌ ರಸ್ತೆಗಳಿಗೆ ನಿರ್ವಹಣಾ ಹಂತದಲ್ಲಿ ಸ್ಪಷ್ಟಪಡಿಸಲಾಗುವುದು. ಉಡುಪಿ ಜಿಲ್ಲಾ ವ್ಯಾಪ್ತಿಗೆ ವಿಶೇಷ ಸ್ಥಳೀಯ ರಿಯಾಯಿತಿ ಅವಕಾಶ ಇದೆ. ಟೋಲ್‌ ರಿಯಾಯಿತಿ ನೀಡದಿದ್ದರೆ ಮತ್ತೂಮ್ಮೆ ಪ್ರತಿಭಟನೆ ನಡೆಸುವುದಾಗಿ ಹೋರಾಟ ಸಮಿತಿ ಸ್ಪಷ್ಟಪಡಿಸಿದೆ.

ವಿಶೇಷ ಪ್ರಯತ್ನ
ಯಾವುದೇ ಕಾರಣಕ್ಕೂ ಶಿರೂರು ವ್ಯಾಪ್ತಿಯ ಜನರಿಗೆ ಟೋಲ್‌ ತೆಗೆದುಕೊಳ್ಳಬಾರದು ಎಂದು ಟೋಲ್‌ ಅಧಿಕಾರಿಗಳಿಗೆ ಸ್ಪಷ್ಟವಾಗಿ ತಿಳಿಸಿದ್ದೇನೆ. ಒಂದೊಮ್ಮೆ ರಿಯಾಯಿತಿ ನೀಡದಿದ್ದರೆ ಸಾವಿರಾರು ಜನರೊಂದಿಗೆ ಟೋಲ್‌ಗೆ ಮುತ್ತಿಗೆ ಹಾಕುವುದಾಗಿ ಈ ಹಿಂದೆಯೇ ತಿಳಿಸಿದ್ದು, ಅಧಿಕಾರಿಗಳು ಸ್ಥಳೀಯರಿಗೆ ಯಾವುದೇ ತೊಂದರೆ ಆಗದ ಹಾಗೆ ನಿರ್ಧಾರ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ.
– ಬಿ.ಎಂ.ಸುಕುಮಾರ್‌ ಶೆಟ್ಟಿ, ಶಾಸಕರು ಬೈಂದೂರು ವಿಧಾನಸಭಾ ಕ್ಷೇತ್ರ.

ಮೇಲ್ದರ್ಜೆಗೇರಬೇಕು
ಕಳೆದ ಎರಡೂವರೆ ವರ್ಷದಿಂದ ನಿರಂತರ ಹೋರಾಟ ನಡೆಸಿದ ಪರಿಣಾಮ ಶಿರೂರು ವ್ಯಾಪ್ತಿಯ ಹಲವು ಬೇಡಿಕೆಗಳನ್ನು ಸರಿಪಡಿಸಿದ್ದಾರೆ. ಸಂಸದರು, ಶಾಸಕರು ಕೂಡ ಪ್ರತಿ ಹಂತದಲ್ಲೂ ನಮಗೆ ಸಹಕಾರ ನೀಡಿದ ಪರಿಣಾಮ ನಮ್ಮ ಹೋರಾಟ ಯಶಸ್ಸು ಕಂಡಿದೆ. ಪ್ರಸ್ತುತ ಶಿರೂರು ಜನತೆಗೆ ಉಚಿತ ಅವಕಾಶ ನೀಡಬೇಕು ಎಂದು ಶಾಸಕರ ಮೂಲಕ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಕಂಪೆನಿಯಿಂದ ಸ್ಪಷ್ಟತೆ ಇನ್ನಷ್ಟೇ ಬರಬೇಕಾಗಿದೆ.
– ಸತೀಶ ಶೆಟ್ಟಿ, ಹೆದ್ದಾರಿ ಸಂಚಾಲಕರು,ಹೋರಾಟ ಸಮಿತಿ ಶಿರೂರು.

ಮೇಲ್ದರ್ಜೆಗೇರಬೇಕು
ಸ್ಥಳೀಯ ಹೆದ್ದಾರಿ ಹೋರಾಟ ಸಮಿತಿ ಹಾಗೂ ಇಲ್ಲಿನ ಬೇಡಿಕೆಗಳ ಕುರಿತು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಅಧಿಕೃತ ಅನುಮತಿ ಬಂದಿಲ್ಲ.ಶಾಸಕರು ಕೂಡ ಈ ಬಗ್ಗೆ ತಿಳಿಸಿದ್ದಾರೆ. ಹಂತ ಹಂತವಾಗಿ ಅಳವಡಿಸುವ ಜತೆಗೆ ವಿಶೇಷ ಪಾಸ್‌ ಮೂಲಕ ಇಪ್ಪತ್ತು ಕಿ.ಮೀ. ವ್ಯಾಪ್ತಿ ವಾಹನ ಸವಾರರಿಗೆ ಅನುಕೂಲವಾಗಲಿದೆ.
– ಪ್ರೊಜೆಕ್ಟ್ ಮೆನೇಜರ್‌.

-* ಅರುಣ್‌ ಕುಮಾರ್‌, ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next