Advertisement

Shirur landslide; ರಾ.ಹೆದ್ದಾರಿ ಸಂಚಾರಕ್ಕೆ ಮೂರ್ನಾಲ್ಕು ದಿನಗಳಲ್ಲಿ ಗ್ರೀನ್ ಸಿಗ್ನಲ್ ?

07:26 PM Jul 26, 2024 | Team Udayavani |

ಕಾರವಾರ: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ವಾಹನ ಸಂಚಾರ ನಿಂತು ಹೋಗಿ ಇಂದಿಗೆ 11 ದಿನ ಪೂರ್ಣಗೊಂಡಿದೆ. ಬ್ರಿಟಿಷ್ ಕಾಲದಿಂದ ಹಿಡಿದು, ಶಿರೂರು ಮಣ್ಣು ಕುಸಿತದ ಘಟನೆ ನಡೆವ ತನಕ ಈ ಹೆದ್ದಾರಿ ಬಂದ್ ಆದ ಉದಾಹರಣೆಗಳಿಲ್ಲ. ಕೊಂಕಣ ಸೀಮೆ, ಪಶ್ಚಿಮ ಘಟ್ಟಗಳ ಸಾಲಿನ ಕರಾವಳಿಯಲ್ಲಿ ಮುಂಬಯಿ ಪ್ರಾಂತ, ಗೋವಾ, ಕರಾವಳಿ ಕರ್ನಾಟಕ, ಕೇರಳವೂ ಸೇರಿದಂತೆ ನಾಲ್ಕು ರಾಜ್ಯಗಳನ್ನು ಬೆಸೆಯುವ ಈ ರಾಷ್ಟ್ರೀಯ ಹೆದ್ದಾರಿ ಮೊದಲು ಎನ್ ಎಚ್ 17 ಆಗಿತ್ತು. ದ್ವಿಪಥದ‌ ಹೆದ್ದಾರಿ ಚತುಷ್ಪಥಕ್ಕೆ ಅಗಲೀಕರಣದ ಯೋಜನೆಗೆ ಅನುದಾನ ದೊರೆತ ನಂತರ 2014 ರಲ್ಲಿ ಕಾಮಗಾರಿ ಪ್ರಾರಂಭವಾಯಿತು. ಈ ಯೋಜನೆ ಕಾರವಾರದಿಂದ ಭಟ್ಕಳ ತನಕ ಇನ್ನೂ ಆರು ಕಡೆ ಭೂ ಸ್ವಾಧೀನ ಕೆಲಸ ಬಾಕಿಯಿದೆ. ಕಾಮಗಾರಿ ಸಹ ಶೇ.35 ರಷ್ಟು ಹಾಗೆ ಉಳಿದಿದೆ.‌ ಈತನ್ಮಧ್ಯೆ ಶಿರೂರು ಬಳಿ ಗುಡ್ಡ ಕುಸಿದಾಗ ಇಡೀ ಬದುಕೇ ಕುಸಿದು ಬಿತ್ತು. ಹೆದ್ದಾರಿ ಬಂದ್ ಆದಾಗ ಗೋವಾ, ಕಾರವಾರ ಮತ್ತು ಮಂಗಳೂರು ಮಧ್ಯೆ ದೊಡ್ಡ ಕಂದರ ಸೃಷ್ಟಿಯಾಗಿದೆ. ಇದೀಗ ಈ ಹೆದ್ದಾರಿ ಸಂಚಾರ ಪುನಃ ಪ್ರಾರಂಭಿಸುವಂತೆ ಸರ್ಕಾರದ ಮೇಲೆ,‌ ಜಿಲ್ಲಾಡಳಿತದ ಮೇಲೆ ಒತ್ತಡ ಬರುತ್ತಿವೆ. ಆದದ್ದು ಆಗಿ ಹೋಗಿದೆ. ಸುರಕ್ಷಿತಾ ಕ್ರಮ ಬೇಗ ಕೈಗೊಳ್ಳಿ ಎಂಬ ಮಾತು‌ ಕೇಳಿ ಬಂದಿದೆ.

Advertisement

ಈ ಹೆದ್ದಾರಿ ಪ್ರವಾಸಿಗರು, ಸಾರ್ವಜನಿಕರು, ದಿನ ನಿತ್ಯ ‌ಜಿಲ್ಲಾ ಕೇಂದ್ರ ಕಾರವಾರಕ್ಕೆ ಬರುವವರು ಬಳಸುವ ಹೆದ್ದಾರಿ. ಜನರ ಜೀವನಾಡಿ. ಅಲ್ಲದೇ ನಿತ್ಯ ನೂರಾರು ರೋಗಿಗಳು ಮಣಿಪಾಲ್, ಮಂಗಳೂರು ಆಸ್ಪತ್ರೆಗೆ ಚಲಿಸುವ ವಾಹನಗಳು ಲೆಕ್ಕವಿಲ್ಲದಷ್ಟಿವೆ.

ಜಿ.ಎಸ್.ಐ. ಮೊದಲೇ ಸುರಕ್ಷತೆಗೆ ಸೂಚಿಸಿತ್ತು

ಉತ್ತರ ಕನ್ನಡದಲ್ಲಿ ಭೂ ಕುಸಿತದ ಬಗ್ಗೆ ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ (Geological Survey of India) ತಜ್ಞರು ಈ ಹಿಂದೆ ಒಂದು ವರದಿ ನೀಡಿದ್ದರು. ಪಶ್ಚಿಮ ಘಟ್ಟಗಳಲ್ಲಿ ಯಾವುದೇ ಯೋಜನೆ ಕೈಗೆತ್ತಿಕೊಳ್ಳುವಾಗ ಅನುಸರಿಸಬಹುದಾದ ಕ್ರಮಗಳ ಬಗ್ಗೆ ಅಲ್ಲಿ ವಿವರಿಸಲಾಗಿತ್ತು. ಭೂ ಕುಸಿತದ ಪ್ರದೇಶಗಳನ್ನು ಸಹ ಮೊದಲೇ ಗುರುತಿಸಲಾಗಿದೆ. ಅಣಶಿ ಘಟ್ಟ, ಅರಬೈಲು ಘಟ್ಟ, ದೇವಿಮನೆ ಘಟ್ಟಗಳ ಬಗ್ಗೆ ಪರಿಸರವಾದಿಗಳು ಆಗಾಗ ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಕಳಚೆ ಹಾಗೂ ಕೊಡಸಳ್ಳಿ ಡ್ಯಾಂ ಸನಿಹದ ಗುಡ್ಡ ಭಾಗಗಳಲ್ಲಿ ಭೂ ಕುಸಿತದ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. ಈಗ ಭೂ ಕುಸಿತದ ಸಾಲಿಗೆ ಸಿದ್ದಾಪುರ ಕುಮಟಾ ಮಧ್ಯದ ಮನಮನೆ (ಬಡಾಳ) ಘಟ್ಟ, ಗೇರುಸೊಪ್ಪೆ ಹೆದ್ದಾರಿ 2023 ರಲ್ಲಿ ಸೇರ್ಪಡೆಯಾದರೆ, 2024 ರಲ್ಲಿ ರಾಷ್ಟ್ರೀಯ ಹೆದ್ದಾರಿ 66 ಸೇರ್ಪಡೆಯಾಗಿದೆ. ಶಿರೂರು ಗುಡ್ಡ ಭೂಕುಸಿತ 11 ಜೀವಗಳನ್ನು ಬಲಿ ತೆಗೆದುಕೊಂಡಿದೆ. ಶಿರೂರು ಬಳಿ ಅಪಾರ ಪ್ರಮಾಣದ ಕಲ್ಲು ಮಣ್ಣು ಗಂಗಾವಳಿ ನದಿ ಒಡಲು ಸೇರಿದೆ. ಭೂ ಸೇನೆ, ನೇವಿ ಕಾರ್ಯಾಚರಣೆಗೆ ಸಹ ಸವಾಲಾಗಿ ನಿಂತಿದೆ ಈ ಗಂಗಾವಳಿ ನದಿ ಹಾಗೂ ಶಿರೂರು ಭೂ ಕುಸಿತ.

Advertisement

ವರದಿ ಆಧರಿಸಿ ಕ್ರಮ

ಜಿ.ಎಸ್.ಐ .‌ತಜ್ಞರು ಹೆದ್ದಾರಿ ಸುರಕ್ಷತೆಗೆ ವರದಿಯಲ್ಲಿ ಸೂಚಿಸಿದ ಅಂಶಗಳನ್ನು ಅನುಷ್ಠಾನಕ್ಕೆ ತರುವಂತೆ ಎನ್.ಎಚ್.ಎ.ಐ ವೀಕ್ಷಣಾಧಿಕಾರಿಗೆ ಆದೇಶ ಮಾಡಿರುವುದಾಗಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಉದಯವಾಣಿಗೆ ತಿಳಿಸಿದ್ದಾರೆ. ಶಿರೂರು ಲ್ಯಾಂಡ್ ಸ್ಲೈಡ್ ನಂತರ ಐದು ಸುರಕ್ಷಿತಾ ಕ್ರಮಕ್ಕೆ ಜಿಎಸ್ಐ ಸೂಚಿಸಿದೆ.‌ಆ ಐದು ಸುರಕ್ಷತಾ ಕ್ರಮ ತಕ್ಷಣ ಕೈಗೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರಾಷ್ಟ್ರೀಯ ಹೆದ್ದಾರಿ ವಿಭಾಗಕ್ಕೆ ಆದೇಶ ಮಾಡಿದ್ದೇನೆ. ಆ ಸುರಕ್ಷತಾ ಕ್ರಮಗಳು ನಮಗೆ ಮನವರಿಕೆಯಾಗಬೇಕು‌. ಅಲ್ಲದೇ ಆ ಸುರಕ್ಷತಾ ಕ್ರಮಗಳಿಗೆ ಜಿ.ಎಸ್.ಐ. ತಜ್ಞರು ಸಹಮತ ಸೂಚಿಸಿದ ನಂತರ ಹೆದ್ದಾರಿಯಲ್ಲಿ ವಾಹನ ಅನುಮತಿಸಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ನಾಗರಾಜ್ ಹರಪನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next